ಹನೂರು: ಪಟ್ಟಣದ ಶ್ರೀಬೆಟ್ಟಳ್ಳಿ ಮಾರಮ್ಮನ ಜಾತ್ರೋತ್ಸವದಲ್ಲಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಗ್ನಿಕುಂಡ ದರ್ಶನ ವಿಜೃಂಭಣೆಯಿಂದ ಜರುಗಿತು. ಈ ಮೂಲಕ 4 ದಿನಗಳ ಜಾತ್ರೆಯು ಮುಕ್ತಾಯಗೊಂಡಿತು.
ಅಗ್ನಿಕುಂಡ ದರ್ಶನ ಹಿನ್ನೆಲೆ ಬೆಳಗ್ಗೆ 3ರಲ್ಲಿ ದೇಗುಲದಲ್ಲಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಅಗ್ನಿಕುಂಡ ದರ್ಶನದ ಹಿನ್ನೆಲೆಯಲ್ಲಿ ಕಳೆದ ವಾರ ದೇಗುಲದ ಮುಂಭಾಗದಲ್ಲಿ 3 ಕವಡಿನ ಕಂಬದಲ್ಲಿ ಅಗ್ನಿ ಕುಂಡವನ್ನು ಇರಿಸಲಾಗಿತ್ತು. ಈ ಕುಂಡಕ್ಕೆ ಪ್ರತಿನಿತ್ಯ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತಿತ್ತು. ಪ್ರಾತಃಕಾಲ 5 ಗಂಟೆಯಿಂದ 6ರವರೆಗೆ ಅರ್ಚಕರು ಅಗ್ನಿಕುಂಡಕ್ಕೆ ವಿಶೇಷ ಪೂಜೆ ಹಾಗೂ ದೀಪ, ಧೂಪದಾರತಿ ಸೇವೆ ನೆರವೇರಿಸಿದರು. ಬಳಿಕ ದೇಗುಲದ ಪ್ರಧಾನ ಅರ್ಚಕ ರಾಜೋಜಿರಾವ್ ಸಿಂಧೆ ಅವರು ಸತ್ತಿಗೆ, ಸೂರಿಪಾನಿ, ವಾದ್ಯಮೇಳ ಹಾಗೂ ಭಕ್ತರೊಂದಿಗೆ ಸಮೀಪದ ತಟ್ಟೆಹಳ್ಳದ ಬಳಿಯ ಅರಳಿಮರಕ್ಕೆ ತೆರಳಿ ಪುಣ್ಯಸ್ನಾನಗೈದು ವಿಶೇಷ ಪೂಜೆ ನೆರವೇರಿಸಿದರು. ಅರ್ಚಕರು ಮೆರವಣಿಗೆಯ ಮೂಲಕ ದೇಗುಲಕ್ಕೆ ಆಗಮಿಸಿದರು. ಈ ವೇಳೆ ದಾರಿಯುದ್ದಕ್ಕೂ ನೂರಾರು ಭಕ್ತರು ದಾಟಿಸಿಕೊಂಡು ಇಷ್ಟಾರ್ಥ ಸಿದ್ಧಿಸಲೆಂದು ಪ್ರಾರ್ಥಿಸಿದರು.
ಬಳಿಕ 6.15ರಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅರ್ಚಕರು ಅಗ್ನಿಕುಂಡಕ್ಕೆ ದುಂಡು ಮಲ್ಲಿಗೆಯನ್ನಿಟ್ಟು ಎತ್ತಿ ಪ್ರದರ್ಶಿಸುವುದರ ಮೂಲಕ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದರು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿದರು. ಅಗ್ನಿಕುಂಡವನ್ನು ದೇಗುಲದ ಗುಡಿಯೊಳಗೆ ಕೊಂಡೊಯ್ದ ಅರ್ಚಕರು ತೊಡೆಯ ಮೇಲೆ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಮಳೆ – ಬೆಳೆಯ ಬಗ್ಗೆ ಮುನ್ಸೂಚನೆ ನೀಡಿದರು.
ಹನೂರು ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ, ಕೊಳ್ಳೇಗಾಲ, ರಾಮಾಪುರ, ಲೊಕ್ಕನಹಳ್ಳಿ ಹಾಗೂ ಇನ್ನಿತರ ಕಡೆಗಳಿಂದ ಆಗಮಿಸಿದ್ದ ಭಕ್ತರು ಅಗ್ನಿಕುಂಡ ಎತ್ತುವುದನ್ನು ಕಣ್ತುಂಬಿಕೊಂಡರು. ಬಳಿಕ ದೇಗುಲದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ಮಿಕುಂಡದ ಕಂಬವನ್ನು ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇಗುಲದ ಮುಂಭಾಗ ನೆರೆದಿದ್ದರಲ್ಲದೆ ಅಗ್ನಿ ಎತ್ತುವುದನ್ನು ವೀಕ್ಷಿಸಲು ಮನೆಗಳ ಮೇಲೆ ಹತ್ತಿ ಕುಳಿತ್ತಿದ್ದರು. ಭಕ್ತರು ಕೋಳಿಮರಿಗಳನ್ನು ಎಸೆದು ತಮ್ಮ ಹರಕೆ ತೀರಿಸಿದರು. ಕೆಲವರು ಹರಕೆ ಕಾಣಿಕೆಗಳನ್ನು ಸಲ್ಲಿಸಿದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಕುಣಿದು ಕುಪ್ಪಳಿಸಿದ ಯುವಕರು ಅಗ್ನಿಕುಂಡ ದರ್ಶನಕ್ಕೂ ಮುನ್ನ ಬೆಳಗಿನ ಜಾವ 3ರಿಂದಲೇ ದೇಗುಲದ ಮುಂಭಾಗದಲ್ಲಿ ವಾದ್ಯದ ತಾಳಕ್ಕೆ ಮಾರಿ ಕುಣಿತ ಆರಂಭವಾಯಿತು. ಈ ವೇಳೆ ಯುವಕರು ಸೇರಿದಂತೆ ಭಕ್ತರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ನೆರೆದಿದ್ದ ಜನತೆ ಕುಣಿತದ ಭಂಗಿಗಳನ್ನು ವೀಕ್ಷಿಸಿ ಖುಷಿ ಪಟ್ಟರು.
