ಆಪ್ ಬಂತು ಎಟಿಎಂ ಹೋಯ್ತು

|ಉಮೇಶ್​ಕುಮಾರ್ ಶಿಮ್ಲಡ್ಕ

ನಗದು ಚಲಾವಣೆಯೇ ಸೂಕ್ತ, ಅದುವೇ ಒಳಿತು ಎಂದು ಪ್ರತಿಪಾದಿಸುವ ಜನರೂ ಇತ್ತೀಚೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯೊಳಗೆ ಬರತೊಡಗಿದ್ದಾರೆ. 2016ರ ಅಂತ್ಯದಿಂದೀಚೆಗೆ ಹೆಚ್ಚುತ್ತಿರುವ ಡಿಜಿಟಲ್ ವಹಿವಾಟಿನ ಸಂಖ್ಯೆ ಇದಕ್ಕೆ ಸಾಕ್ಷಿ. ಇಂತಹ ವಿಷಯಗಳ ಅವಲೋಕನಕ್ಕೆ ಅಥವಾ ಮೌಲ್ಯಮಾಪನಕ್ಕೆ ಈಗ ಸಮೀಪಿಸುತ್ತಿರುವ ಲೋಕಸಭಾ ಚುನಾವಣೆ ಒಂದು ನಿಮಿತ್ತ ಎನ್ನಬಹುದು.

ಚಾಲ್ತಿಯಲ್ಲಿ ಇರುವ ವ್ಯವಸ್ಥೆಯನ್ನು ಬದಲಾಯಿಸುವುದು ಅಥವಾ ಪರಿಷ್ಕರಿಸುವುದು ಸುಲಭದ ಕೆಲಸವಲ್ಲ. ಹಳೆಯ ವ್ಯವಸ್ಥೆ ಮತ್ತು ಹೊಸದರ ಹೊಂದಾಣಿಕೆ ಆಗುವ ತನಕ ಒಂದಷ್ಟು ಸಂಘರ್ಷ ಇದ್ದೇ ಇರುತ್ತದೆ. ಪರಿಶುದ್ಧ ಹಾಲಿಗೆ ಪರಿಶುದ್ಧ ಜೇನು ಬೆರೆಸಿ ಕುಡಿಯಬೇಕೆಂಬುದು ಆರೋಗ್ಯ ತಜ್ಞರ ಸಲಹೆ. ಆರೋಗ್ಯ ದೃಷ್ಟಿಯಿಂದ ಹಾಲು ಮತ್ತು ಜೇನಿನ ಮಿಶ್ರಣವೇ ಸೂಕ್ತ. ಆದರೆ ಎಲ್ಲರೂ ಇದನ್ನು ಸೇವಿಸಲು ಇಷ್ಟ ಪಡುವುದಿಲ್ಲ. ಸಕ್ಕರೆಯಲ್ಲಿ ರಾಸಾಯನಿಕ ಅಂಶ ಹೆಚ್ಚಿದ್ದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅರಿವಿದ್ದರೂ ಸಕ್ಕರೆ ಬೆರೆಸಿದ ಸಿಹಿ ಹಾಲೇ ಎಲ್ಲರಿಗೂ ಬೇಕು. ಆದರೆ ಅನಾರೋಗ್ಯ ಕಾಡಿದಾಗ, ಜೀವ ಉಳಿಸಿಕೊಳ್ಳಬೇಕೆಂಬ ಆಸೆಯಿಂದ ಆರೋಗ್ಯ ತಜ್ಞರ ಸಲಹೆಗೆ ಬೆಲೆ ಕೊಟ್ಟು ಸೇವಿಸಲಾರಂಭಿಸುತ್ತಾರೆ. ಅಂತೆಯೇ, ವ್ಯವಸ್ಥೆಯಲ್ಲೂ ಸರಿಯಾದ ರೀತಿಯಲ್ಲಿ ಪರಿಷ್ಕರಣೆ ಮಾಡಿದರೆ ಅಥವಾ ಬದಲಾವಣೆ ತಂದರೆ ‘ಹಾಲು ಮತ್ತು ಜೇನು’ ಒಂದಾಗುವಂತೆ ಸರಾಗವಾಗಿ ವ್ಯವಸ್ಥೆಯೂ ಬದಲಾಗಿ ಬಿಡುತ್ತದೆ. ಜನರೂ ಅದನ್ನು ಒಪ್ಪಿಕೊಳ್ಳುತ್ತಾರೆ ಎಂಬುದಕ್ಕೆ ಡಿಜಿಟಲ್ ಪಾವತಿ ವ್ಯವಸ್ಥೆ ಒಂದು ಉತ್ತಮ ಉದಾಹರಣೆ.

ಕೇಂದ್ರ ಸರ್ಕಾರ ಜಾರಿಗೆ ತಂದ ಡಿಜಿಟಲ್ ಪಾವತಿ ವ್ಯವಸ್ಥೆಯ ಹಿನ್ನೆಲೆಯನ್ನೊಮ್ಮೆ ಗಮನಿಸೋಣ. ಭಯೋತ್ಪಾದನೆ ಮತ್ತು ಇತರ ದೇಶದ್ರೋಹಿ ಕೃತ್ಯಗಳನ್ನು ಎಸಗುವುದಕ್ಕೆ ಅನುವು ಮಾಡಿಕೊಡುತ್ತಿದ್ದ ಪರ್ಯಾಯ ಅರ್ಥವ್ಯವಸ್ಥೆಗೆ ಕೊಡಲಿ ಏಟು ಕೊಟ್ಟದ್ದು ಈಗಿನ ಕೇಂದ್ರ ಸರ್ಕಾರ 2016ರ ನವೆಂಬರ್ 8ರಂದು ತೆಗೆದುಕೊಂಡ ನೋಟು ನಿಷೇಧ (ಹಳೆಯ ರೂ. 500, 1,000)ದ ನಿರ್ಧಾರ. ಇದರ ಬೆನ್ನಲ್ಲೇ ಅರ್ಥ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದಕ್ಕಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೂ ಪರಿಚಯಿಸಿತು. ನೋಟು ನಿಷೇಧದ ಬಗ್ಗೆ ಕೆಲವರು ಬಹಳಷ್ಟು ದೂರು, ದುಮ್ಮಾನಗಳನ್ನು ಹೇಳುತ್ತಾರಾದರೂ, ಅಲವತ್ತುಕೊಳ್ಳುತ್ತಾರಾದರೂ, ಒಂದಿಲ್ಲೊಂದು ರೀತಿಯಲ್ಲಿ ಅವರೂ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಒಪ್ಪಿಕೊಂಡು ಬಳಸುತ್ತಿರುವುದು ವಾಸ್ತವ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾರ್ಡ್ ಪಾವತಿಗಳನ್ನು ಸ್ವೀಕರಿಸುತ್ತಿರುವ ವ್ಯಾಪಾರಿಗಳ ಸಂಖ್ಯೆ 30 ಲಕ್ಷ ದಾಟಿದೆ. ಅದೇ ರೀತಿ, 2018ರ ಜೂನ್ ತಿಂಗಳಲ್ಲಿ ಯುಪಿಐ ವಹಿವಾಟು ಸಂಖ್ಯೆ 25 ಕೋಟಿಯ ಗಡಿ ದಾಟಿದೆ. ಗ್ರಾಹಕರು ನಡೆಸುತ್ತಿದ್ದ ನಗದು ವಹಿವಾಟಿನ ಪ್ರಮಾಣ 2015ರಲ್ಲಿ ಶೇಕಡ 78 ಇದ್ದದ್ದು 2017ರಲ್ಲಿ ಶೇಕಡ 68ಕ್ಕೆ ಇಳಿಕೆಯಾಗಿದೆ ಎಂದು ಯೂರೋಮಾನಿಟರ್ ದತ್ತಾಂಶ ವರದಿ ಬಹಿರಂಗಪಡಿಸಿದೆ. ಇದೇ ವೇಳೆ ಡಿಜಿಟಲ್ ವಹಿವಾಟು ಕ್ಷೇತ್ರದ ಮುಂಚೂಣಿ ಕಂಪನಿ ಪೇಟಿಎಂನ ದತ್ತಾಂಶ ಪ್ರಕಾರ, ಕ್ಯೂಆರ್ ಕೋಡ್ ಬಳಸಿಕೊಂಡು ಪಾವತಿ ಸ್ವೀಕರಿಸುವ ವ್ಯಾಪಾರಿಗಳ ಸಂಖ್ಯೆ 50 ಲಕ್ಷ. ಗೂಗಲ್, ವಾಟ್ಸ್​ಆಪ್, ಫೋನ್ ಪೇ ಮುಂತಾದವು ಯುಪಿಐ ವೇದಿಕೆ ಬಳಸಿಕೊಂಡು ಡಿಜಿಟಲ್ ಪಾವತಿ ಮಾಡಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತಿವೆ. 2020ರ ವೇಳೆಗೆ ಡಿಜಿಟಲ್ ಪಾವತಿ ಸಂಖ್ಯೆ ಶೀಘ್ರವಾಗಿ ಇನ್ನಷ್ಟು ಹೆಚ್ಚಾಗಲಿದೆ.

ತ್ವರಿತ ಬದಲಾವಣೆಯ ಬೆಳವಣಿಗೆ

ಕೆಲ ವರ್ಷಗಳ ಹಿಂದೆ ಕೇವಲ ಸಂದೇಶ ಕಳುಹಿಸಲು, ಕರೆ ಮಾಡಲು, ಫೋಟೊ ತೆಗೆಯಲು ಬಳಕೆಯಾಗುತ್ತಿದ್ದ ಮೊಬೈಲ್ ಈಗ ಪ್ರತಿಯೊಬ್ಬರ ಜೇಬಿನಲ್ಲೂ ಬ್ಯಾಂಕಿಂಗ್ ಲೋಕ ಸೃಷ್ಟಿಸಿದೆ. ದೇವರಿಗೆ ಕಾಣಿಕೆ ಸಲ್ಲಿಕೆಯಿಂದ ಹಿಡಿದು ವಿಮಾನ ಟಿಕೆಟ್ ಬುಕ್ಕಿಂಗ್​ವರೆಗೆ ಎಲ್ಲವೂ ಮೊಬೈಲ್​ವುಯವಾಗುತ್ತಿದೆ. ಕಡಿಮೆ ದರದ ಇಂಟರ್​ನೆಟ್ ಲಭ್ಯತೆಯ ಪರಿಣಾಮ ಹಳ್ಳಿಗಾಡಿನ ಜನರೂ ಮೊಬೈಲ್ ಬ್ಯಾಂಕಿಂಗ್​ನ ಮೋಡಿಗೆ ಆಕರ್ಷಿತರಾಗಿದ್ದಾರೆ. ರಿಸರ್ವ್ ಬ್ಯಾಂಕ್​ನ ವಾರ್ಷಿಕ ಅಂಕಿಅಂಶದ ಪ್ರಕಾರ 2017-18ನೇ ಸಾಲಿನಲ್ಲಿ ಮೊಬೈಲ್ ಬ್ಯಾಂಕಿಂಗ್ ಶೇ. 92 ಬೆಳವಣಿಗೆ ಸಾಧಿಸಿದೆ. ಡಿಜಿಟಲ್ ಬ್ಯಾಂಕಿಂಗ್​ನಲ್ಲಿ ಗಣನೀಯ ಸುಧಾರಣೆಗಳಿಗೆ ಕಾರಣ, ಕೇಂದ್ರ ಸರ್ಕಾರದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಭಾರತದಲ್ಲಿ ರಿಟೇಲ್ ಪೇಮೆಂಟ್ಸ್ (ಚಿಲ್ಲರೆ ಪಾವತಿ) ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡಲು 7 ವರ್ಷ ಗಳ ಹಿಂದೆ ಇದನ್ನು ಆರಂಭಿಸಿತು. ಅಂದಿನಿಂದ ಇಂದಿನವರೆಗೂ ಅತ್ಯುತ್ತಮ ಸಾಧನಗಳನ್ನು ಎನ್​ಪಿಸಿಐ ಪರಿಚಯಿಸಿದೆ. ಜನ್ ಧನ್ ಯೋಜನೆಗೆ ಜೀವ ತುಂಬಿದ ರುಪೇ ಡೆಬಿಟ್ ಕಾರ್ಡ್, ಯಾವುದೇ ಖಾತೆಗೆ ಕ್ಷಣಮಾತ್ರದಲ್ಲಿ ಮೊಬೈಲ್ ಮೂಲಕ ಹಣ ಕಳುಹಿಸಲು ನೆರವಾಗುವ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ), ಟೋಲ್​ನಲ್ಲಿ ಕ್ಯೂ ನಿಲ್ಲದೆ ಹಣ ಪಾವತಿಗೆ ನೆರವಾಗುವ ನ್ಯಾಷನಲ್ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್​ಇಟಿಸಿ), ಎಲ್ಲ ಬಿಲ್​ಗಳ ಪಾವತಿಗೆ ನೆರವಾಗುವ ಭಾರತ್ ಬಿಲ್ ಪೇಮೆಂಟ್ ಸಿಸ್ಟಂ (ಬಿಬಿಪಿಎಸ್) ಹೀಗೆ ಜನಸಾಮಾನ್ಯರಿಗೆ ಅನುಕೂಲ ನೀಡುವ ಅತ್ಯುತ್ತಮ ತಂತ್ರಜ್ಞಾನಗಳನ್ನು ಎನ್​ಪಿಸಿಐ ನೀಡಿದೆ.

| ಸಿ. ಎಸ್. ಸುಧೀರ್, ಸಂಸ್ಥಾಪಕ ಸಿಇಒ, ಇಂಡಿಯನ್ ಮನಿ ಡಾಟ್ ಕಾಂ.

ಭವಿಷ್ಯ ಇದು…

ಹತ್ತಿರದಲ್ಲೇ ಇರುವ ಭವಿಷ್ಯವನ್ನು ಮುಂಚಿತವಾಗಿಯೇ ಊಹಿಸುವುದಾದರೆ ಯುಪಿಐ, ವ್ಯಾಲೆಟ್, ನೆಟ್ ಬ್ಯಾಂಕಿಂಗ್​ಗಳೇ ಅನುಕ್ರಮವಾಗಿ ಮುಂಚೂಣಿ ಬಳಕೆಯಲ್ಲಿ ಇರಲಿವೆ. ನೋಟು ನಿಷೇಧದ ಬಳಿಕ ಎಟಿಎಂ ಕೇಂದ್ರಗಳಲ್ಲಿ ನಗದು ಜಮಾವಣೆ ಮತ್ತು ನಗದೀಕರಣ ಪ್ರಮಾಣ ಕಡಿಮೆಯಾಗಿದೆ. ಆ ಉದ್ಯಮ ಕ್ಷೇತ್ರವೂ ನಷ್ಟದ ಸುಳಿಗೆ ಸಿಲುಕಿದೆ. ಈಗ ಮೊಬೈಲ್​ನಿಂದಲೇ ಹಣ ವರ್ಗಾವಣೆ ಮಾಡುವುದು ಸುಲಭ ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡಿರುವ ಪರಿಣಾಮ ಮುಂದಿನ ಕೆಲವೇ ವರ್ಷಗಳಲ್ಲಿ ಎಟಿಎಂ ಯಂತ್ರಗಳು ಪೂರ್ಣ ವಾಗಿ ಕಣ್ಮರೆ ಯಾದರೆ ಅಚ್ಚರಿ ಏನಿಲ್ಲ.

ಯುಪಿಐ ಎಂದರೆ..

ಏಕೀಕೃತ ಪಾವತಿ ವೇದಿಕೆ ಅರ್ಥಾತ್ ಯುನಿಫೈಡ್ ಪೇಮೆಂಟ್ ಇಂಟರ್​ಫೇಸ್ ಎಂಬುದರ ಸಂಕ್ಷಿಪ್ತ ರೂಪ ಯುಪಿಐ. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ್ದು, ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ನಿಯಂತ್ರಣದಲ್ಲಿದೆ. ಮೊಬೈಲ್ ಮೂಲಕ ಕ್ಷಣ ಮಾತ್ರದಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ ಕೆಲಸವನ್ನು ಇದು ಸರಳಗೊಳಿಸಿದೆ. ಇದಕ್ಕೆ ವರ್ಚುವಲ್ ಪೇಮೆಂಟ್ ಅಡ್ರೆಸ್(ವಿಪಿಎ) ಎಂದೂ ಹೇಳುತ್ತಾರೆ. ಮೊಬೈಲ್ ಪಾವತಿ ಸೇವಾ ಪೂರೈಕೆದಾರ ಕಂಪನಿಗಳು(ಗೂಗಲ್, ಫೋನ್ ಪೇ, ಪೇಟಿಎಂ ಇತ್ಯಾದಿ) ಯುಪಿಐ ಬುನಾದಿ ಮಾಡಿಕೊಂಡು ಅಪ್ಲಿಕೇಷನ್ ಪ್ರೋಗ್ರಾಂ ಇಂಟರ್​ಫೇಸ್(ಎಪಿಐ)ಗಳನ್ನು ಬಳಸಿಕೊಂಡು ಆಪ್ ನಿರ್ವಿುಸಿ ಗ್ರಾಹಕರ ಅನುಕೂಲಕ್ಕೆ ಒದಗಿಸಿವೆ.

ಕ್ಯೂಆರ್ ಕೋಡ್

ಬೇಲ್​ಪುರಿ ಗಾಡಿಯವನ ಬಳಿ ಹೋದರೆ ಈಗ ಮೊಬೈಲ್ ಹಿಡಿದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಡಿಜಿಟಲ್ ಪಾವತಿ ಮಾಡುವ ಜನರ ಸಂಖ್ಯೆ ಹೆಚ್ಚಾಗಿರುವುದನ್ನು ಕಾಣಬಹುದು. ಕ್ಯೂಆರ್ ಕೋಡ್ ಎಂಬ ಸರಳ ತಂತ್ರಜ್ಞಾನ ದುಬಾರಿ ಇಲೆಕ್ಟ್ರಾನಿಕ್ ಡೇಟಾ ಕ್ಯಾಪ್ಚರ್(ಇಡಿಸಿ) ಮಷಿನ್ ಅಥವಾ ನಿಯರ್ ಫೀಲ್ಡ್ ಕಮ್ಯೂನಿಕೇಷನ್(ಎನ್​ಎಫ್​ಸಿ) ಉಪಕರಣ ಖರೀದಿಸಿ ಬಳಸುವ ಹೊರೆಯನ್ನು ಕಡಿಮೆ ಮಾಡಿದೆ.

ಬಳಕೆ ಹೆಚ್ಚಾಗಿದ್ದೇಕೆ?

  • ಒಮ್ಮೆ ಬಳಸುವುದನ್ನು ಕಲಿತುಕೊಂಡರೆ ಸಾಕು, ಸುಲಭವಾಗಿ ಎಲ್ಲ ಕಡೆಯೂ ಮೊಬೈಲ್ ಮೂಲಕವೇ ಪಾವತಿ ಮಾಡಬಹುದು. ನಗದು ಹಣ ಕಳೆದು ಹೋಗುವ ಭಯ ಇಲ್ಲ.
  • ಒಂದು ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿ ತನಕವೂ ಮೊಬೈಲ್ ಆಪ್ ಮೂಲಕವೇ ಕೆಲವೇ ಸೆಕೆಂಡ್​ಗಳಲ್ಲಿ ವರ್ಗಾವಣೆ ಮಾಡಬಹುದು.
  • ಎಲ್ಲರ ಬ್ಯಾಂಕ್ ಖಾತೆ ಮೊಬೈಲ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದರಿಂದ ಮೊಬೈಲ್​ನ ಕಾಂಟ್ಯಾಕ್ಟ್ ಲಿಸ್ಟ್​ಗೆ ಹೋಗಿ ಯಾರಿಗೆ ಹಣ ಕಳುಹಿಸಬೇಕೋ ಅವರ ಫೋನ್ ನಂಬರ್ ಆಯ್ಕೆ ಮಾಡಿದರೆ ಮುಂದಿನ ಕೆಲಸ ಸಲೀಸು.
  • ‘ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಪಾವತಿಗೆ ಸಣ್ಣ ವ್ಯಾಪಾರಿಗಳು, ಗ್ರಾಹಕರು ಕೂಡ ಶುಲ್ಕ ಪಾವತಿಸಬೇಕು. ಆದರೆ, ಮೊಬೈಲ್ ಪಾವತಿಗೆ ಇಂತಹ ಶುಲ್ಕದ ಕಿರಿಕಿರಿ ಇಲ್ಲ.

ಸೈಬರ್ ಸುರಕ್ಷತೆಯ ಆತಂಕ

ಮೊಬೈಲ್ ಫೋನ್ ಕಳೆದು ಹೋದರೆ, ಬ್ಯಾಂಕ್ ಖಾತೆಯಿಂದ ಹಣ ಹೋದೀತೆಂಬ ಭಯ ಇನ್ನೂ ಅನೇಕರಲ್ಲಿದೆ. ಆದರೆ, ಈಗ ಸೈಬರ್ ಸುರಕ್ಷತೆ ಪ್ರಮಾಣ ಹೆಚ್ಚಿರುವುದರಿಂದಾಗಿ ಅಂಥ ಭಯ ಬೇಕಾಗಿಲ್ಲ. ಈ ನಿಟ್ಟಿನಲ್ಲಿ ಜನರನ್ನು ಇನ್ನಷ್ಟು ಸಾಕ್ಷರರನ್ನಾಗಿಸುವ ಕೆಲಸವೂ ಆಗಬೇಕು ಎಂಬುದನ್ನು ಬ್ಯಾಂಕಿನವರೂ, ಸೈಬರ್ ತಜ್ಞರೂ ಪ್ರತಿಪಾದಿಸುತ್ತಾರೆ.

ಡಿಜಿಟಲ್ ಓಂಬುಡ್ಸ್​ಮನ್

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಕುಂದು ಕೊರತೆ ಪರಿಹರಿಸುವುದಕ್ಕಾಗಿ ಆರ್​ಬಿಐ ಈಗಾಗಲೇ ಓಂಬುಡ್ಸ್ ಮನ್ ಸೇವೆಯನ್ನು ಒದಗಿಸಿದೆ. ಈ ವರ್ಷದಿಂದ ಡಿಜಿಟಲ್ ಪಾವತಿಗೆ ಸಂಬಂಧಿಸಿದ ಗ್ರಾಹಕರ ಅಹವಾಲು, ದೂರು ದುಮ್ಮಾನ ಪರಿಹರಿಸುವುದಕ್ಕಾಗಿ ‘ಡಿಜಿಟಲ್ ಓಂಬುಡ್ ್ಸ ಮನ್’ ನೇಮಕವಾಗಲಿದೆ. ಈಗಾಗಲೇ ಈ ವಿಚಾರವನ್ನು ಆರ್​ಬಿಐ

‘ಓಂಬುಡ್ಸ್​ಮನ್ ಸ್ಕೀಮ್ ಫಾರ್ ಡಿಜಿಟಲ್ ಟ್ರಾನ್ಸಾಕ್ಷನ್ 2019’ ಶೀರ್ಷಿಕೆಯಲ್ಲಿ ಪ್ರಕಟಿಸಿದೆ (https://bit.ly/2SxYk50).