ಅಧ್ಯಾತ್ಮದಿಂದ ಸಮಾಜವನ್ನು ಬೆಸೆದ ಅಪೂರ್ವ ಸಂತ

ಪೀಠಾರೋಹಣ ವರ್ಧಂತಿ ಸಂಭ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿದ್ಯಾಪೀಠದಲ್ಲಿ ಸೋಮವಾರ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿವೆ.

|ಗೋಪಾಲಕೃಷ್ಣ ಪಾದೂರು

ಉಡುಪಿ: ಮಧ್ವಾಚಾರ್ಯರ ಶಿಷ್ಯ ಅಧೋಕ್ಷಜ ತೀರ್ಥರ ಪರಂಪರೆಯಲ್ಲಿ 32ನೇ ಯತಿಯಾಗಿ ಸಂನ್ಯಾಸಾಶ್ರಮ ಸ್ವೀಕರಿಸಿದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಈಗ 80ನೇ ಪೀಠಾರೋಹಣ ವರ್ಧಂತಿ ಸಂಭ್ರಮ. 88ರ ಹರೆಯ ಶ್ರೀಗಳ ಸುದೀರ್ಘ ಸಂನ್ಯಾಸ ಜೀವನದ ಧಾರ್ವಿುಕ ಮತ್ತು ಸಾಮಾಜಿಕ ಕಾರ್ಯಗಳು ಮಾದರಿಯಾಗಿವೆ.

ಉಪ್ಪಿನಂಗಡಿ ಸಮೀಪದ ರಾಮಕುಂಜದಲ್ಲಿ 1931ರ ಏಪ್ರಿಲ್ 27ರಂದು ಜನಿಸಿದ ಶ್ರೀಗಳು, ರಾಮಕುಂಜೇಶ್ವರ ದೇವಾಲಯದ ಹಳ್ಳಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದರು. 7ನೇ ವಯಸ್ಸಿನಲ್ಲಿ ಉಪನಯನ ನಡೆಯಿತು. 1938 ಡಿಸೆಂಬರ್ 3ರಂದು ವಿಶ್ವಮಾನ್ಯ ತೀರ್ಥ ಶ್ರೀಗಳಿಂದ ಹಂಪೆಯ ಚಕ್ರತೀರ್ಥದಲ್ಲಿ ಸಂನ್ಯಾಸ ದೀಕ್ಷೆ ಪಡೆದು ವಿಶ್ವೇಶ ತೀರ್ಥರಾಗಿ ಇದೀಗ 80 ವರ್ಷ. ಭಂಡಾರಕೇರಿ, ಪಲಿಮಾರು ಮಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥ ಸ್ವಾಮೀಜಿಯವರಿಂದ ತರ್ಕ, ವೇದಾಂತಗಳ ಅಧ್ಯಯನ ನಡೆಸಿರುವ ಶ್ರೀಗಳು ಇಂದಿನವರೆಗೆ 36 ಸುಧಾಮಂಗಳವನ್ನು ನೆರವೇರಿಸಿದ ಕೀರ್ತಿಗೆ ಪಾತ್ರರಾಗಿದ್ದರೆ.

ಸಾಮಾಜಿಕ ಕಾರ್ಯ: 1967ರಲ್ಲಿ ಬರಗಾಲದ ಭೀಕರ ಹೊಡೆತಕ್ಕೆ ಸಿಕ್ಕ ಬಿಹಾರದ ಲಕ್ಷಾಂತರ ಜನ ಅನ್ನ, ಬಟ್ಟೆ, ಔಷಧಗಳಿಲ್ಲದೆ ಉಪವಾಸ, ರೋಗರುಜಿನಗಳಿಂದ ನರಳುತ್ತಿದ್ದರು. ಈ ಸಂದರ್ಭ ದುಃಖ

ಪೀಡಿತರ ಸೇವೆಮಾಡಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗುವ ಸದವಕಾಶ ಎಂದು ತಿಳಿದ ಪೇಜಾವರ ಶ್ರೀಗಳು ಗಯಾ ಜಿಲ್ಲೆಯ ನವಾದಾ ಗ್ರಾಮದಲ್ಲಿ ಉಡುಪಿ ಪೇಜಾವರ ಮಠದಿಂದ ಒಂದು ವೈದ್ಯಕೀಯ ಕೇಂದ್ರ ಸ್ಥಾಪಿಸಿದರು. ಬೆಂಗಳೂರಿನ ವೈದ್ಯ ಡಾ.ಬಿ.ಕೆ.ಸುಬ್ಬರಾಯರ ನೇತೃತ್ವದಲ್ಲಿ ಒಂದು ಜೀಪಿನಲ್ಲಿ ಸುತ್ತಮುತ್ತಲ ಹಳ್ಳಿಗಳಿಗೆ ತುರ್ತು ಔಷಧಗಳನ್ನು ಪೂರೈಸುವ ಕಾರ್ಯಕೈಗೊಂಡಿದ್ದರು.

ಧಾರ್ವಿುಕ ಸಾಧನೆ: 1952ರಲ್ಲಿ ಪ್ರಥಮ ಪರ್ಯಾಯ ಪೀಠಾರೋಹಣ. ಅನ್ನದಾನ, ಜ್ಞಾನದಾನದಲ್ಲಿ ಖ್ಯಾತಿಗೆ ಪಾತ್ರವಾದ ಈ ಪರ್ಯಾಯದಲ್ಲಿ ಶ್ರೀಗಳು ಮೊದಲ ಬಾರಿಗೆ ಸುಧಾಪ್ರವಚನ ನಡೆಸಿ ಕೃಷ್ಣನ ಸನ್ನಿಧಿಯಲ್ಲಿ ಮಂಗಲ ಮಹೋತ್ಸವ ಆಚರಿಸಿದರು. 1953ರಲ್ಲಿ ಉಡುಪಿಗೆ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಬರಮಾಡಿಕೊಂಡು ಅಖಿಲ ಭಾರತ ಮಾಧ್ವ ಮಹಾಮಂಡಲವನ್ನು ಸ್ಥಾಪಿಸಿದರು. ಶ್ರೀಗಳು 1956ರಲ್ಲಿ ತತ್ತ್ವಶಾಸ್ತ್ರದ ಅಧ್ಯಯನ ಮತ್ತು ಪ್ರಚಾರದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರಾರಂಭಿಸಿದ್ದು, 300ಕ್ಕೂ ಅಧಿಕ ವಿದ್ಯಾರ್ಥಿಗಳು ವೇದ, ವೇದಾಂತ ಅಧ್ಯಯನದಲ್ಲಿ ನಿರತರಾಗಿದ್ದಾರೆ. 1978ರಲ್ಲಿ ಬದರಿಯಲ್ಲಿ ಅನಂತಮಠ ಸ್ಥಾಪನೆ, 1989ರಲ್ಲಿ ದೆಹಲಿಯಲ್ಲಿ ಮಧ್ವಮಠ ಸ್ಥಾಪನೆ, 90ರಲ್ಲಿ ಪಾಜಕದಲ್ಲಿ ವಾಸುದೇವ ಗುರುಕುಲ ಸ್ಥಾಪನೆ, 94ರಲ್ಲಿ ಪೂರ್ಣಪ್ರಜ್ಞ ಸಂಶೋಧನಾ ಮಂದಿರ ಸ್ಥಾಪನೆ ಮೊದಲಾದವು ಧಾರ್ವಿುಕ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳು. 1986ರಲ್ಲಿ ಬಾಗಲಕೋಟೆಯ ಬರಗಾಲಕ್ಕೆ ಮಿಡಿದ ಶ್ರೀಗಳು ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರ ಜತೆಗೂಡಿ ಕಾರಡಗಿಯಲ್ಲಿ ಕೆರೆಯ ಹೂಳೆತ್ತುವ ಕಾರ್ಯಕ್ಕೆ 1.25 ಲಕ್ಷ ರೂ. ಮೊತ್ತವನ್ನು ವಿನಿಯೋಗಿಸಿದರು. ಕರುವಿನಕೊಪ್ಪ, ಚಿಂಚೋಳಿಯಲ್ಲಿ ಗೋಶಾಲೆಯನ್ನು ಪ್ರಾರಂಭಿಸಿದರು. 1978ರಲ್ಲಿ ಆಂಧ್ರದ ಚಂಡಮಾರುತಕ್ಕೆ ಬಲಿಯಾದ ಹಂಸಲದೀವಿ ಗ್ರಾಮವನ್ನು ದತ್ತು ಪಡೆದು 150 ಮನೆಗಳ ನಿರ್ವಣ, ಗೋವಿಂದಪುರದ ಜನ 1995ರಲ್ಲಿ ಭೂಕಂಪಕ್ಕೆ ತುತ್ತಾದಾಗ 60 ಮನೆಗಳ ನಿರ್ವಣ, 1966ರಲ್ಲಿ ಬೆಂಗಳೂರಿನ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಗೋಹತ್ಯಾ ನಿಷೇಧಕ್ಕಾಗಿ 2 ದಿನ ಉಪವಾಸ, 94ರಲ್ಲಿ ರುದ್ರಾರಂ ಕಸಾಯಿಖಾನೆ ವಿರುದ್ಧ ಪಶುರಕ್ಷ ಯಜ್ಞದಲ್ಲಿ ಭಾಗಿ, 62ರಲ್ಲಿ ಶ್ರೀಕೃಷ್ಣ ಸೇವಾಶ್ರಮ, 68ರಲ್ಲಿ ಉಡುಪಿಯಲ್ಲಿ ಶ್ರೀಕೃಷ್ಣ ಚಿಕಿತ್ಸಾಲಯ ನಿರ್ಮಾಣ ಪ್ರಮುಖ ಸಾಮಾಜಿಕ ಕಾರ್ಯಗಳು.

ವಾರ್ಷಿಕ ಪರೀಕ್ಷೆಯೂ ವಾಹನದಲ್ಲೇ: ಗುರುಗಳ ಕೆಲವು ಅಸಾಧಾರಣ ಗುಣಗಳಲ್ಲಿ ಅವರ ಪರೀಕ್ಷಾ ಪದ್ಧತಿಯೂ ಒಂದು. ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಒಂದೊಂದು ವಿಷಯದಲ್ಲಿ ವಾಚಿಕ ಪರೀಕ್ಷೆಯನ್ನು ಸ್ವತಃ ಶ್ರೀಪಾದರೇ ನಡೆಸುತ್ತಾರೆ. ಅವರ ಆ ನಿಬಿಡ ಕಾರ್ಯಗಳ ನಡುವೆಯೂ ಮಾರ್ಚ್ ತಿಂಗಳ ಕೆಲವು ಸಮಯವನ್ನು ಅದಕ್ಕಾಗಿಯೇ ಮೀಸಲಿಡುತ್ತಾರೆ. ಚಿಕ್ಕ ಮಕ್ಕಳಿಗೆ ವಿದ್ಯಾಪೀಠದ ಆವರಣದಲ್ಲಿಯೇ ಪರೀಕ್ಷೆ ನಡೆಸಿದರೂ ಸಮಯದ ಅಭಾವದಿಂದಾಗಿ ಉಳಿದ ಮಕ್ಕಳನ್ನು ತಮ್ಮೊಂದಿಗೆ ಸಂಚಾರಕ್ಕೆ ಕರೆದುಕೊಂಡು ಹೋಗುತ್ತಾರೆ. ಹಾಗೆ ಹೋಗುವಾಗ ಅನೇಕರಿಗೆ ಮಾರ್ಗಮಧ್ಯದಲ್ಲೇ ಪರೀಕ್ಷೆ ನಡೆಯುತ್ತದೆ.

ಐದು ಪರ್ಯಾಯ ನಡೆಸಿದ ಯತಿ

1952ರಿಂದ 1954ರವರೆಗೆ ಪ್ರಥಮ ಪರ್ಯಾಯದಲ್ಲಿ ಮೈಸೂರು ಮಹಾರಾಜರ ಅಧ್ಯಕ್ಷತೆಯಲ್ಲಿ ನಡೆದ ಮಾಧ್ವ ತತ್ತ್ವಜ್ಞಾನ ಸಮ್ಮೇಳನ, 1968ರಿಂದ 70ರವರೆಗೆ ದ್ವಿತೀಯ ಪರ್ಯಾಯದಲ್ಲಿ ವಿಶ್ವ ಹಿಂದು ಪರಿಷತ್​ನ 2ನೇ ಧರ್ಮ ಸಂಸತ್, ಬಡಗು ಮಾಳಿಗೆ ಮರುನಿರ್ವಣ, 1984 ರಿಂದ 86ರವರೆಗೆ 3ನೇ ಪರ್ಯಾಯದಲ್ಲಿ ಶ್ರೀಕೃಷ್ಣ ಧಾಮ ಛತ್ರ, ಶ್ರೀಕೃಷ್ಣ ಪ್ರತಿಷ್ಠಾ ಸಪ್ತ ಶತಮಾನೋತ್ಸವ, 50 ಲಕ್ಷ ರೂ. ವೆಚ್ಚದಲ್ಲಿ ಕೃಷ್ಣ ಮಠದ ಅಭಿವೃದ್ಧಿ, 2000-2002ರವರೆಗೆ ನಡೆದ 4ನೇ ಪರ್ಯಾಯದಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಂದ ನವೀಕೃತ ರಾಜಾಂಗಣದ ಉದ್ಘಾಟನೆ, ಕನಕ ಮಂಟಪ ನಿರ್ವಣ, 2016ರಿಂದ 18ರವರೆಗೆ ನಡೆದ ಐತಿಹಾಸಿಕ ಪಂಚಮ ಪರ್ಯಾಯದಲ್ಲಿ 4.5 ಕೋಟಿ ರೂ ವೆಚ್ಚದಲ್ಲಿ ಕೃಷ್ಣ ಮಠದ ಸುತ್ತುಪೌಳಿ ನವೀಕರಣ, ರಾಜಾಂಗಣದ ಮೇಲೆ ಮಧ್ವಾಂಗಣ ನಿರ್ಮಾಣ ಕಾರ್ಯಗಳು ಅಭಿವೃದ್ಧಿಯ ಹೆಗ್ಗುರುತುಗಳು.

ಸಂಚಾರದ ಹೊತ್ತಲ್ಲಿ ಗ್ರಂಥರಚನೆ

ಇಷ್ಟೆಲ್ಲ ಕಾರ್ಯಗಳ ಮಧ್ಯೆ ಗ್ರಂಥರಚನೆಯನ್ನೂ ಗುರುಗಳು ಸಂಚಾರದಲ್ಲೇ ನಡೆಸುತ್ತಾರೆ. ‘ನ್ಯಾಯಾಮೃತ’ ವ್ಯಾಸತೀರ್ಥರು ರಚಿಸಿದ ಅಪೂರ್ವ ಗ್ರಂಥ. ಹೆಸರೇ ತಿಳಿಸುವಂತೆ ತರ್ಕಭೂಯಿಷ್ಠವಾದ ಶೈಲಿಯಲ್ಲಿ ಅನೇಕ ವಿಚಾರಗಳನ್ನು ಇಲ್ಲಿ ವಿಮಶಿಸಲಾಗಿದೆ. ‘ನ್ಯಾಯಾಮೃತ’ ಗ್ರಂಥಕ್ಕೆ ಶ್ರೀಪಾದರು ರಚಿಸುತ್ತಿರುವ ಟಿಪ್ಪಣಿ ನವನೀತಮ್ ಅಬ್ಬಾ ಇಷ್ಟು ಕ್ಲಿಷ್ಟವಾದ ಗ್ರಂಥವನ್ನು ಶ್ರೀಪಾದರು ರಚಿಸಿದ್ದು ಸಂಚಾರದ ಹೊತ್ತಲ್ಲಿ! ಸಂಚಾರದ ಸಮಯದಲ್ಲಿ ಎಡೆಯಿಲ್ಲದ ಕಾರ್ಯಗಳ ಮಧ್ಯೆ ಶ್ರೀಗಳು ನಡೆಸುವ ಅಭೂತಪೂರ್ವ ಕಾರ್ಯ ಎಂದರೆ ಈ ಗ್ರಂಥರಚನೆ.


ತಿರುಗಾಡುವ ದೇವರು

|ಡಾ. ಸಗ್ರಿ ಆನಂದತೀರ್ಥ ಉಪಾಧ್ಯಾಯ

ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ತಿರುಗಾಡುವ ದೇವರು ಎಂದೇ ಸಾಮಾನ್ಯ ಜನಮಾನಸದಲ್ಲಿ ಪ್ರಸಿದ್ಧ. ಯಾರೂ ದೇವರಾಗಲು ಸಾಧ್ಯವಿಲ್ಲದಿದ್ದರೂ ಅತ್ಯುತ್ತಮ ವ್ಯಕ್ತಿತ್ವವನ್ನು ದೇವ ಎನ್ನುವ ಪದದಿಂದಲೇ ವ್ಯವಹರಿಸುವುದು ರೂಢಿ. ಇಲ್ಲಿನ ಎರಡು ಪದಗಳಿಗೂ ಅಪೂರ್ವಾರ್ಥಗಳಿವೆ. ಇಲ್ಲಿ ದೇವರು ಎಂದರೆ ದೇವರ ಶ್ರೇಷ್ಠ ಪ್ರತೀಕ ಎಂಬುದು ವಿದ್ವಜ್ಜನರ ಮಾತು.ದೇವಸ್ಥಾನಗಳಲ್ಲಿರುವ ಪ್ರತಿಮೆಗಳು ನಿಶ್ಚಲವಾಗಿ ನಿಂತಿದ್ದರೆ ಈ ಪ್ರತಿಮೆ ಸಂಚರಿಸುತ್ತದೆ. ಅಷ್ಟೇ ಅಲ್ಲ ಇದು ಸದಾ ಸಂಚರಿಸುವ ಪ್ರತಿಮೆಯೂ ಹೌದು. ಆದುದರಿಂದ ಪೇಜಾವರ ಶ್ರೀಗಳನ್ನು ತಿರುಗಾಡುವ ದೇವರು ಎಂದು ಕರೆಯುವ ಪದ ವಿದ್ವದ್ರೂಢಿಯ ಪದವೂ ಆಗಿದೆ.

ಬೆಳಗ್ಗೆ ಬೇಗ ಬೆಂಗಳೂರಿನ ವಿದ್ಯಾಪೀಠದಲ್ಲಿ ಪೂಜೆ-ಭಿಕ್ಷೆ ಮುಗಿಸಿ ವಿಮಾನದಲ್ಲಿ ಮುಂಬಯಿಗೆ ತೆರಳಿ ಅಲ್ಲಿ ಮಧ್ಯಾಹ್ನ ಹನ್ನೆರಡು ಗಂಟೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನದ ವಿಮಾನದ ಮೂಲಕ ದೆಹಲಿಗೆ ತೆರಳಿ ಸಂಜೆ ಅಲ್ಲಿನ ಸಭೆಯಲ್ಲಿ ಪಾಲ್ಗೊಂಡು, ರಾತ್ರಿಯ ವಿಮಾನದಲ್ಲಿ ಮತ್ತೆ ಬೆಂಗಳೂರಿಗೆ…! ಈ ಸಂಚಾರದ ಮಧ್ಯದಲ್ಲೂ ಬೆಳಗ್ಗೆ 5 ಗಂಟೆಯಿಂದ 7 ಗಂಟೆಯ ತನಕದ ನ್ಯಾಯಸುಧಾ ಪಾಠ ವಿದ್ಯಾರ್ಥಿಗಳಿಗೆ ತಪ್ಪದು.

ದಿನಪತ್ರಿಕೆ ಓದು: ಶ್ರೀಪಾದರಿಗೆ ಹೆಚ್ಚಾಗಿ ದಿನಪತ್ರಿಕೆ ಓದಲು ಸಮಯಾವಕಾಶ ಸಿಗುವುದೇ ವಾಹನಗಳಲ್ಲಿ ಸಂಚರಿಸುತ್ತಿರುವಾಗ. ಶ್ರೀಗಳು ಪ್ರತಿದಿನ ಕನಿಷ್ಠ ಏಳೆಂಟು ಪತ್ರಿಕೆಗಳನ್ನು ಓದುತ್ತಾರೆ. ಅದರಲ್ಲಿ ಆಂಗ್ಲಪತ್ರಿಕೆಯೂ ಸೇರಿರುತ್ತದೆ.

Leave a Reply

Your email address will not be published. Required fields are marked *