ನವಲಗುಂದ: ತಂಗಿಯ ಅಂತ್ಯಕ್ರಿಯೆಗೆ ಹೋದ ಅಕ್ಕನೂ ಹೃದಯಾಘಾತದಿಂದ ನಿಧನ ಹೊಂದಿದ ದಾರುಣ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ತಂಗಿ ಯಮನವ್ವ ಎಲ್ಲನಾಯ್ಕರ (70) ನಿಧನ ಹೊಂದಿದ್ದರು. ಇವರ ಅಂತ್ಯಕ್ರಿಯೆಗೆ ಸಹೋದರಿ ನವಲಗುಂದ ತಾಲೂಕಿನ ಜಾವೂರ ಗ್ರಾಮದ ಪಾರ್ವತೆವ್ವ ಶಿವಪ್ಪ ನಾಯ್ಕರ (82)
ತೆರಳಿದ್ದರು. ಈ ವೇಳೆ ತಂಗಿಯ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ದುಃಖ ತಡೆಯಲಾರದೆ ಅಕ್ಕ ಪಾರ್ವತೆವ್ವ ಅವರಿಗೆ ತೀವ್ರ ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಮೂಲಕ ವೃದ್ಧ ಅಕ್ಕ, ತಂಗಿ ಸಾವಿನಲ್ಲೂ ಒಂದಾದ ಘಟನೆ ನಡೆಯಿತು. ಈ ದುಃಖಮಯ ಸನ್ನಿವೇಶ ನೆರೆದಿದ್ದ ಜನರ ಕಣ್ಣಂಚಿನಲ್ಲಿ ನೀರು ಜಿನುಗಿಸಿತು.
ಬೆಳಗಾವಿ ಜಿಲ್ಲೆಯ ಕರಿಕಟ್ಟಿ ಗ್ರಾಮದ ರಾಯಪ್ಪ ಗಂಗಮ್ಮ ಕರಿಯಣ್ಣವನರ ದಂಪತಿಗೆ ಒಟ್ಟು ಐದು ಜನ ಮಕ್ಕಳು. ಅವರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು. ಪಾರ್ವತೆವ್ವ ಅವರಿಗೆ ಇಬ್ಬರು ಪುತ್ರರು, ಆರು ಜನ ಪುತ್ರಿಯರು ಇದ್ದಾರೆ.