ನಗರಕ್ಕೆ ಎಂಟ್ರಿಕೊಟ್ಟ ಒಂಟಿ ಸಲಗ

2 Min Read
ನಗರಕ್ಕೆ ಎಂಟ್ರಿಕೊಟ್ಟ ಒಂಟಿ ಸಲಗ
ಚಿಕ್ಕಮಗಳೂರು ನಗರದ ಮಧ್ಯ ಭಾಗದ ಜಯನಗರದಲ್ಲಿ ಕಾಣಿಸಿಕೊಂಡ ಒಂಟಿ ಸಲಗ

ಚಿಕ್ಕಮಗಳೂರು: ಅಂತೂ ಇಂತೂ ಕೊನೆಗೂ ಚಿಕ್ಕಮಗಳೂರು ನಗರದ ಒಳಗೇ ಕಾಡಾನೆ ಪ್ರವೇಶವಾಗಿದೆ. ಅದರಲ್ಲೂ ಡಿಸಿ ಕಚೇರಿಯಿಂದ ಅರ್ಧ ಮುಕ್ಕಾಲು ಕಿಲೋಮೀಟರ್ ದೂರದಲ್ಲಿಯೇ ಒಂಟಿ ಸಲಗ ರಾಜಾರೋಷವಾಗಿ ರಸ್ತೆಗಳಲ್ಲಿ ಓಡಾಡುವ ಮೂಲಕ ಜನರಲ್ಲಿ ಆಂತಕವನ್ನು ಸೃಷ್ಟಿಸಿದೆ.

ಇದುವರೆಗೆ ಕಾಡಾನೆಗಳು ನಗರದ ಒಳಗೆ ಪ್ರವೇಶ ಮಾಡಿರಲಿಲ್ಲ. ಬೀಟಮ್ಮ ಗ್ಯಾಂಗ್ ನಗರದ ಹೊರವಲಯದಲ್ಲಿ ಬೀಡು ಬಿಟ್ಟಿತ್ತಾದರೂ ನಗರದ ಒಳಗೆ ಬರುವ ಧೈರ್ಯ ಮಾಡಿರಲಿಲ್ಲ. ಆದರೆ ಇದೀಗ ಬೇಲೂರು ಭಾಗದಿಂದ ಕಾಫಿನಾಡಿಗೆ ಎಂಟ್ರಿಕೊಟ್ಟಿರುವ ಒಂಟಿ ಸಲಗ ನೇರವಾಗಿ ಚಿಕ್ಕಮಗಳೂರು ನಗರದ ಒಳಗೇ ನುಗ್ಗಿ ಓಡಾಟ ನಡೆಸಿದೆ.
ಬುಧವಾರ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದ ಒಂಟಿ ಸಲಗ ಜಿಲ್ಲೆಯ ಕೆಳಗಣೆ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಆನೆ ಕಾಣಿಸಿಕೊಂಡಿರಲಿಲ್ಲ. ಆದರೆ ಗುರುವಾರ ಬೆಳಗಿನ ಜಾವದ ಒಳಗಾಗಿ ಚಿಕ್ಕಮಗಳೂರು ನಗರದ ಮಧ್ಯಭಾಗದ ಜಯನಗರ ಬಡಾವಣೆಯಲ್ಲಿಯೇ ಈ ಆನೆ ಕಾಣಿಸಿಕೊಂಡಿತ್ತು. ಪ್ರತಿದಿನ ಮುಂಜಾನೆಯೇ ವಾಕಿಂಗ್ ಹೋಗುವವರು ರಾಜಾರೋಷವಾಗಿ ಓಡಾಡುತ್ತಿದ್ದ ಕಾಡಾನೆಯನ್ನು ನೋಡಿ ಒಂದು ಕ್ಷಣ ಬೆಚ್ಚಿಬಿದ್ದು ಸುರಕ್ಷಿತ ಸ್ಥಳಕ್ಕೆ ಓಡಿದ್ದಾರೆ.
ಕೂಡಲೇ ಆನೆಯ ವೀಡಿಯೋ ಮಾಡಿಕೊಂಡಿದ್ದಲ್ಲದೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಒಂಟಿ ಸಲಗದ ಮೇಲೆ ನಿಗಾವಹಿಸಿದ್ದರು. ಬಳಿಕ ಆನೆ ಗವನಹಳ್ಳಿ ಮೂಲಕವಾಗಿ ತೇಗೂರು, ಕದ್ರಿಮಿದ್ರಿಯತ್ತ ತೆರಳಿ ಅಲ್ಲಿಯೇ ಇದ್ದ ನೀಲಗಿರಿ ಪ್ಲಾಂಟೇಷನ್ ಸೇರಿಕೊಂಡಿದೆ.
ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಅರಣ್ಯಪ್ರದೇಶಕ್ಕೆ ಹತ್ತಿರದ ಗ್ರಾಮಗಳಲ್ಲಿ ಹೀಗೆ ವನ್ಯಜೀವಿಗಳು ಪ್ರವೇಶಿಸುವುದು ಹೊಸ ಸಂಗತಿಯೇನಲ್ಲ. ಅವು ಆಗಾಗ ಬರುತ್ತಿರುತ್ತವೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಸ್ಥರ ನೆರವಿನಿಂದ ಅವುಗಳನ್ನು ವಾಪಸ್ಸು ಕಾಡಿಗಟ್ಟುವ ಕೆಲಸ ಮಾಡುತ್ತದೆ.
ಒಂಟಿ ಸಲಗವನ್ನು ಕಂಡು ತೇಗೂರು ಜನ ಸಹಜವಾಗೇ ಆತಂಕಗೊAಡಿದ್ದರು. ಜಯನಗರ ಬಡಾವಣೆಯಲ್ಲಿ ನಾಯಿಗಳು ಅನೆಯನ್ನು ನೋಡಿ ಒಂದೇ ಸಮ ಬೊಗಳುವುದರ ಜೊತೆಗೆ ಅದನ್ನು ಓಡಿಸುವ ಪ್ರಯತ್ನ ಸಹ ಮಾಡಿದವು. ಆದರೆ ಆನೆ ನಾಯಿಗಳ ಕಡೆ ತಿರುಗಿದಾಗ ಅವು ದಿಕ್ಕಾಪಾಲಾಗಿ ಓಡಿದವು. ರಸ್ತೆಯಲ್ಲಿದ್ದ ಕೋಳಿಗಳು ಮತ್ತು ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳು ಆನೆಗಳನ್ನು ಕಂಡು ಬೆದರಿ ಕೂಗಾಡಲಾರಂಭಿಸಿದ್ದವು. ಕಾಡಿನಿಂದ ನಾಡಿಗೆ ಬಂದ ಒಂಟಿ ಸಲಗವನ್ನು ಮರಳಿ ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಎಫ್‌ಒ ರಮೇಶ್ ಬಾಬು, ಆನೆಗಳ ಹಿಂಡಿನಲ್ಲಿದ್ದ ಮರಿಯಾನೆ ತಪ್ಪಿಸಿಕೊಂಡು ಊರಿನತ್ತ ಬಂದಿದೆ. ಸದ್ಯ ಸುರಕ್ಷಿತ ಜಾಗದಲ್ಲಿದ್ದು, ರಾತ್ರಿ ಬಳಿಕ ಹಿಂಡಿನತ್ತ ಓಡಿಸಲಾಗುವುದು. ಜನ ಆತಂಕಗೊಳ್ಳುವುದು ಬೇಡ ಎಂದು ತಿಳಿಸಿದ್ದಾರೆ.

See also  ಅಂಗನವಾಡಿ ನಿರ್ಮಾಣಕ್ಕೆ ರೂ. 1.40 ಕೋಟಿ ಅನುದಾನ

ಕೊಟ್ಟಿಗೆಹಾರದಲ್ಲಿ ಆನೆ ಪ್ರತ್ಯಕ್ಷ
ಕೊಟ್ಟಿಗೆಹಾರ ಬಳಿಯ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ರಸ್ತೆ ಬದಿಯಲ್ಲಿ ಆನೆ ಕಂಡ ವಾಹನ ಸವಾರರು ಭಯಭೀತರಾಗಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಹಲವು ದಿನಗಳಿಂದ ಕಾಡಾನೆಯೊಂದು ಬೀಡು ಬಿಟ್ಟಿದ್ದು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಕೊಂಡು ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಕಾಡಾನೆಯನ್ನು ರಸ್ತೆಗೆ ಬಾರದಂತೆ ಅರಣ್ಯಕ್ಕೆ ಓಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share This Article