ಹುನಗುಂದ: ಮಾಜಿ ಶಾಸಕ ಲಿಂ. ಶಿವಸಂಗಪ್ಪ ಕಡಪಟ್ಟಿ ಅವರು ರಾಜಕೀಯದಲ್ಲಿ ಪ್ರಾಮಾಣಿಕತೆ, ನಿಷ್ಠೆ, ವಿಶ್ವಾಸ ಹೊಂದಿದ್ದರು ಎಂದು ಚಿತ್ತರಗಿ ಸಂಸ್ಥಾನಮಠದ ಇಳಕಲ್ಲದ ಗುರುಮಹಾಂತ ಸ್ವಾಮಿಗಳು ಹೇಳಿದರು.
ಪಟ್ಟಣದ ಎಸ್. ಎಸ್. ಕಡಪಟ್ಟಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ಲಿಂ. ಶಿವಸಂಗಪ್ಪ ಸಿದ್ದಪ್ಪ ಕಡಪಟ್ಟಿ ಅವರ 34ನೇ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಶಿವಸಂಗಪ್ಪನಂತ ರಾಜಕಾರಣಿಗಳು ಸಿಗುವುದು ವಿರಳ. ಏಕೆಂದರೆ ಇಂದು ಬಸ್‌ನಲ್ಲಿ ಓಡಾಡುವ ಶಾಸಕರು ಯಾರು ಇಲ್ಲ, ಅವರು ಬಸ್‌ನಲ್ಲೇ ತಮ್ಮ ರಾಜಕೀಯ ಸಭೆಗೆ ತೆರಳುತ್ತಿದ್ದರಲ್ಲದೆ, ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದರು. ಅಂತಹ ಸರಳ, ಕ್ರಿಯಾಶೀಲ ಶಾಸಕ ಅವರಾಗಿದ್ದರು. ಇನ್ನೂ ಅವರು 10 ವರ್ಷ ಬದುಕಿದ್ದರೆ ಹುನಗುಂದ ಮತಕ್ಷೇತ್ರದ ಚಿತ್ರಣವನ್ನೇ ಬದಲಿಸುತ್ತಿದ್ದರು ಎಂದರು.
ಧಾರವಾಡದ ಆಹಾರ ಇಲಾಖೆ ನಿವೃತ್ತ ಜಿಲ್ಲಾಧಿಕಾರಿ ಸದಾಶಿವ ಮರ್ಜಿ ಮಾತನಾಡಿ, ಎಸ್.ಎಸ್. ಕಡಪಟ್ಟಿ ಅವರು ಉತ್ತರ ಕರ್ನಾಟಕ ರಾಜಕೀಯದಲ್ಲಿ ಜನಸಾಮಾನ್ಯರ ಆಶೋತ್ತರಗಳಿಗೆ ತಮ್ಮನ್ನು ಸಮರ್ಥಿಸಿಕೊಂಡಿದ್ದರು. ಜನತಾ ಪರಿವಾರ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಅಧಿಕಾರ ಹಿಡಿದಿತ್ತು. ಅದೇ ಜನತಾ ಪರಿವಾರ ಭಷ್ಟಾಚಾರದಲ್ಲಿ ತೊಡಗಿದಾಗ ಸ್ಪಷ್ಟವಾಗಿ ವಿರೋಧಿಸಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಮೈಚಳಿ ಬಿಡಿಸಿದ ಉತ್ತರ ಕರ್ನಾಟದಕ ಏಕೈಕ ಲಿಂಗಾಯತ ನಾಯಕ ಮಾಜಿ ಶಾಸಕ ಕಡಪಟ್ಟಿ ಅವರಾಗಿದ್ದರು ಎಂದು ಹೇಳಿದರು.
ವಿಜಯಪುರದ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿದರು. ಮಾತಾ ಎಂಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಬಸವರಾಜ ಎಸ್. ಕಡಪಟ್ಟಿ, ಚನ್ನಬಸವರಾಜ ಕಡಪಟ್ಟಿ, ಮಂಜುಳಾ ಮರ್ಜಿ, ಎ.ಪಿ. ಬಳಿಗಾರ, ಪ್ರಾಚಾರ್ಯ ಸಾಯಿಕೃಷ್ಣ ಉಪಸ್ಥಿತರಿದ್ದರು.