ಪುಣೆ: ಆರಂಭಿಕರಿಬ್ಬರ ಅರ್ಧಶತಕ, ಇನಿಂಗ್ಸ್ನ ಕೊನೆಯಲ್ಲಿ ಮನೀಷ್-ಶಾರ್ದೂಲ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಪ್ರವಾಸಿ ಶ್ರೀಲಂಕಾ ತಂಡವನ್ನು 3ನೇ ಟಿ20 ಪಂದ್ಯದಲ್ಲಿ 78 ರನ್ಗಳಿಂದ ಮಣಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದ್ದಲ್ಲದೆ, ಟಿ20ಯಲ್ಲಿ ಸತತ ಮೂರನೇ ಹಾಗೂ ಶ್ರೀಲಂಕಾ ವಿರುದ್ಧ ಸತತ ಐದನೇ ಸರಣಿಯನ್ನು ಜಯಿಸಿತು.
ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಸರಣಿ ನಿರ್ಣಯದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ, ಮಧ್ಯಮ ಕ್ರಮಾಂಕದ ವೈಫಲ್ಯದ ಹೊರತಾಗಿಯೂ 6 ವಿಕೆಟ್ಗೆ 201 ರನ್ಗಳ ದೊಡ್ಡ ಮೊತ್ತ ಪೇರಿಸಿತು. ಆರಂಭಿಕರಾದ ಕೆಎಲ್ ರಾಹುಲ್ (54ರನ್, 36 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಶಿಖರ್ ಧವನ್ (52ರನ್, 36 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದ ಅರ್ಧಶತಕ ದೊಡ್ಡ ಮೊತ್ತಕ್ಕೆ ಕಾರಣವಾಯಿತು. ಪ್ರತಿಯಾಗಿ ಶ್ರೀಲಂಕಾ, 15.5 ಓವರ್ಗಳಲ್ಲಿ 123ರನ್ಗೆ ಆಲೌಟ್ ಆಗಿ ಸೋಲು ಕಂಡಿತು.
ಪವರ್ ಪ್ಲೇ ಮುಗಿಯುವುದರ ಒಳ ಗಾಗಿಯೇ 4 ಪ್ರಮುಖ ವಿಕೆಟ್ ಕಳೆದು ಕೊಂಡಿದ್ದ ಶ್ರೀಲಂಕಾ ತಂಡಕ್ಕೆ ಸೋಲು ಖಚಿತಗೊಂಡಿತ್ತು. ಈ ಹಂತದಲ್ಲಿ ಮಾಜಿ ನಾಯಕ ಏಂಜೆಲೋ ಮ್ಯಾಥ್ಯೂಸ್ (31 ರನ್, 20 ಎಸೆತ, 1 ಬೌಂಡರಿ, 3 ಸಿಕ್ಸರ್) ಹಾಗೂ ಧನಂಜಯ ಡಿಸಿಲ್ವ (57ರನ್, 36 ಎಸೆತ, 8 ಬೌಂಡರಿ, 1 ಸಿಕ್ಸರ್) 5ನೇ ವಿಕೆಟ್ಗೆ 68 ರನ್ ಜತೆಯಾಟವಾಡಿ ಚೇತರಿಕೆ ನೀಡಲು ಯತ್ನಿಸಿದರು. ಆಗ ದಾಳಿಗಿಳಿದ ವಾಷಿಂಗ್ಟನ್ ಸುಂದರ್, ಮ್ಯಾಥ್ಯೂಸ್ರನ್ನು ಔಟ್ ಮಾಡಿ ಆಘಾತ ನೀಡಿದರು. ಬಳಿಕ 2ನೇ ಹಂತದ ಕುಸಿತ ಕಂಡ ಲಂಕಾ, ದಶುನ್ ಶನಕ, ವಾನಿಂದು ಹಸರಂಗ ವಿಕೆಟ್ಗಳನ್ನು ಒಂದೇ ಓವರ್ನಲ್ಲಿ ಕಳೆದುಕೊಂಡಿತು. ಅರ್ಧಶತಕದ ಹೋರಾಟ ತೋರಿದ್ದ ಧನಂಜಯ ಡಿ ಸಿಲ್ವ 16ನೇ ಓವರ್ನಲ್ಲಿ ಔಟಾಗುವುದರೊಂದಿಗೆ ಶ್ರೀಲಂಕಾದ ಹೋರಾಟ ಕೂಡ ಕೊನೆಗೊಂಡಿತು.
4 ವರ್ಷಗಳ ಬಳಿಕ ಆಡಿದ ಸ್ಯಾಮ್ಸನ್: ಸಂಜು ಸ್ಯಾಮ್ಸನ್ ನಾಲ್ಕು ವರ್ಷಗಳ ಬಳಿಕ ರಾಷ್ಟ್ರೀಯ ತಂಡದ ಪರ ಟಿ20 ಪಂದ್ಯವಾಡಿದರು. 2015ರಲ್ಲಿ ಜಿಂಬಾಬ್ವೆ ವಿರುದ್ಧ ಅವರು ಕೊನೇ ಬಾರಿಗೆ ಟಿ20 ಪಂದ್ಯ ಆಡಿದ್ದರು. ಈ ನಡುವೆ ಭಾರತ 73 ಟಿ20 ಪಂದ್ಯಗಳನ್ನು ಆಡಿದೆ. ಭಾರತದ ಪರವಾಗಿ ಮರಳಿ ಟಿ20 ಪಂದ್ಯವಾಡಲು, ಅತಿ ಹೆಚ್ಚು ಪಂದ್ಯಗಳ ವಿರಾಮ ಪಡೆದುಕೊಂಡ ದಾಖಲೆಯನ್ನು ಸ್ಯಾಮ್ಸನ್ ಮಾಡಿದರು. ಇದಕ್ಕೂ ಮುನ್ನ ಉಮೇಶ್ ಯಾದವ್ 65 ಪಂದ್ಯಗಳ ಅಂತರದ ಬಳಿಕ ಆಡಿದ್ದು ದಾಖಲೆಯಾಗಿತ್ತು. ಸ್ಯಾಮ್ಸನ್ ಭಾರತದ ಪರ ತನ್ನ ಕೊನೇ ಟಿ20 ಪಂದ್ಯ ಆಡಿದ್ದ ವೇಳೆ, ಹಾಲಿ ತಂಡದಲ್ಲಿರುವ 7 ಆಟಗಾರರು ಟಿ20ಗೆ ಪದಾರ್ಪಣೆಯನ್ನೇ ಮಾಡಿರಲಿಲ್ಲ.
200ರ ಗಡಿ ದಾಟಿಸಿದ ಮನೀಷ್ ಪಾಂಡೆ
ವೃತ್ತಿಜೀವನದಲ್ಲಿ ಕೇವಲ 2ನೇ ಬಾರಿಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ನಾಯಕ ವಿರಾಟ್ ಕೊಹ್ಲಿ (26ರನ್, 17 ಎಸೆತ, 2 ಬೌಂಡರಿ, 1 ಸಿಕ್ಸರ್) ತಂಡದ ಮೊತ್ತ 160ರ ಗಡಿ ದಾಟುವವರೆಗೆ ಕ್ರೀಸ್ನಲ್ಲಿದ್ದರು. 18ನೇ ಓವರ್ನಲ್ಲಿ ಕೊಹ್ಲಿ ರನೌಟ್ ಆದರು. ಆದರೆ, ಮನೀಷ್ ಪಾಂಡೆ (31*ರನ್, 18 ಎಸೆತ, 4 ಬೌಂಡರಿ) ಹಾಗೂ ಶಾರ್ದೂಲ್ ಠಾಕೂರ್ (22*ರನ್, 8 ಎಸೆತ, 1 ಬೌಂಡರಿ, 2 ಸಿಕ್ಸರ್) ಜೋಡಿ ಕೇವಲ 14 ಎಸೆತಗಳಲ್ಲಿ 37 ರನ್ ಸಿಡಿಸುವ ಮೂಲಕ ಮೊತ್ತವನ್ನು 200ರ ಗಡಿ ದಾಟಿಸಿತು.
ಭಾರತ ಭರ್ಜರಿ ಆರಂಭ
ಶ್ರೀಲಂಕಾ ಬೌಲಿಂಗ್ ವಿಭಾಗದ ಮೇಲೆ ಅಬ್ಬರಿಸಬೇಕು ಎನ್ನುವ ಉದ್ದೇಶದಿಂದಲೇ ಬ್ಯಾಟಿಂಗ್ಗೆ ಇಳಿದಿದ್ದ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ಗೆ 65 ಎಸೆತಗಳಲ್ಲಿ 97 ರನ್ಗಳ ಭರ್ಜರಿ ಜತೆಯಾಟವಾಡಿದರು. ಧವನ್ಗೆ ಈ ಬಾರಿ ಆರಂಭದಲ್ಲಿಯೇ ಜೀವದಾನ ಸಿಕ್ಕಿತು. ಅದರ ಬೆನ್ನಲ್ಲಿಯೇ ಅಬ್ಬರಿಸಿದ ಧವನ್, ಪವರ್ ಪ್ಲೇ ಓವರ್ ಮುಕ್ತಾಯದ ವೇಳೆಗೆ ತಂಡ 63 ರನ್ ಕೂಡಿಸುವಲ್ಲಿ ನೆರವಾಗಿದ್ದರು. ರಾಹುಲ್ಗಿಂತ ವೇಗವಾಗಿ ಧವನ್ ಅರ್ಧಶತಕ ಪೂರೈಸಿದರೂ ಅದರ ಬೆನ್ನಲ್ಲಿಯೇ ವಿಕೆಟ್ ಒಪ್ಪಿಸಿ ಹೊರನಡೆದರು. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 97 ರನ್ ಬಾರಿಸಿದ್ದ ಭಾರತ ಈ ಮೊತ್ತಕ್ಕೆ 25 ರನ್ ಸೇರಿಸುವ ವೇಳೆಗಾಗಲೇ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ವನ್ಡೌನ್ ಆಟಗಾರನಾಗಿ ಬಂದು ಮೊದಲ ಎಸೆತವನ್ನೇ ಸಿಕ್ಸರ್ಗಟ್ಟಿದ್ದ ಸ್ಯಾಮ್ಸನ್, ಮರು ಎಸೆತದಲ್ಲಿಯೇ ಎಲ್ಬಿ ಆಗಿ ಹೊರನಡೆದರು. ಆ ಬಳಿಕ ಅರ್ಧಶತಕದ ಗಡಿ ದಾಟಿದ ರಾಹುಲ್, ದೊಡ್ಡ ಶಾಟ್ ಬಾರಿಸುವ ಯತ್ನದಲ್ಲಿ ಸ್ಟಂಪ್ ಔಟ್ ಆದರು. ತಂಡವನ್ನು ಆಧರಿಸಬೇಕಾಗಿದ್ದ ಹಂತದಲ್ಲಿಯೇ ಶ್ರೇಯಸ್ ಅಯ್ಯರ್ 2 ಎಸೆತವಾಡಿ ಸಂಡಕನ್ಗೆ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದ್ದರು.
ಭಾರತ: 6 ವಿಕೆಟ್ಗೆ 201
ರಾಹುಲ್ ಸ್ಟಂಪ್ ಕುಸಲ್ ಬಿ ಸಂಡಕನ್ 54
ಶಿಖರ್ ಧವನ್ ಸಿ ಗುಣತಿಲಕ ಬಿ ಸಂಡಕನ್ 52
ಸ್ಯಾಮ್ಸನ್ ಎಲ್ಬಿಡಬ್ಲ್ಯು ಬಿ ಹಸರಂಗ 6
ಮನೀಷ್ ಪಾಂಡೆ ಔಟಾಗದೆ 31
ಶ್ರೇಯಸ್ ಅಯ್ಯರ್ ಸಿ ಮತ್ತು ಬಿ ಸಂಡಕನ್ 4
ವಿರಾಟ್ ಕೊಹ್ಲಿ ರನೌಟ್ 26
ವಾಷಿಂಗ್ಟನ್ ಸಿ ಸಂಡಕನ್ ಬಿ ಲಹಿರು 0
ಶಾರ್ದೂಲ್ ಠಾಕೂರ್ ಔಟಾಗದೆ 22
ಇತರ: 6. ವಿಕೆಟ್ ಪತನ: 1-97, 2-106, 3-118, 4-122, 5-164, 6-164. ಬೌಲಿಂಗ್: ಮಾಲಿಂಗ 4-0-40-0, ಮ್ಯಾಥ್ಯೂಸ್ 3-0-38-0, ಧನಂಜಯ ಡಿಸಿಲ್ವ 1-0-13-0, ಲಹಿರು ಕುಮಾರ 4-0-46-1, ಹಸರಂಗ 4-0-27-1, ಸಂಡಕನ್ 4-0-35-3.
ಶ್ರೀಲಂಕಾ: 5.5 ಓವರ್ಗಳಲ್ಲಿ 123
ಗುಣತಿಲಕ ಸಿ ವಾಷಿಂಗ್ಟನ್ ಬಿ ಬುಮ್ರಾ 1
ಅವಿಷ್ಕಾ ಸಿ ಶ್ರೇಯಸ್ ಬಿ ಶಾರ್ದೂಲ್ 9
ಕುಸಲ್ ಪೆರೇರ ಬಿ ನವದೀಪ್ ಸೈನಿ 7
ಒಶಾಡ ಫೆರ್ನಾಂಡೊ ರನೌಟ್ (ಮನೀಷ್) 2
ಮ್ಯಾಥ್ಯೂಸ್ ಸಿ ಮನೀಷ್ ಬಿ ವಾಷಿಂಗ್ಟನ್ 31
ಧನಂಜಯ ಡಿಸಿಲ್ವ ಸಿ ಬುಮ್ರಾ ಬಿ ಸೈನಿ 57
ದಸುನ್ ಶನಕ ಸಿ ಮತ್ತು ಬಿ ಶಾರ್ದೂಲ್ 9
ವಾನಿಂದು ಹಸರಂಗ ರನೌಟ್ (ಚಾಹಲ್) 0
ಸಂಡಕನ್ ಸ್ಟಂಪ್ ಸ್ಯಾಮ್ಸನ್ ಬಿ ವಾಷಿಂಗ್ಟನ್ 1
ಲಸಿತ್ ಮಾಲಿಂಗ ಸಿ ಕೊಹ್ಲಿ ಬಿ ಸೈನಿ 0
ಲಹಿರು ಕುಮಾರ ಔಟಾಗದೆ 1
ಇತರ: 5. ವಿಕೆಟ್ ಪತನ: 1-5, 2-11, 3-15, 4-26, 5-94, 6-110, 7-110, 8-118, 9-122. ಬೌಲಿಂಗ್: ಜಸ್ಪ್ರೀತ್ ಬುಮ್ರಾ 2-1-5-1, ಶಾರ್ದೂಲ್ ಠಾಕೂರ್ 3-0-19-2, ಸೈನಿ 3.5-0-28-3, ವಾಷಿಂಗ್ಟನ್ ಸುಂದರ್ 4-0-37-2, ಚಾಹಲ್ 3-0-33-0.
ಭಾರತಕ್ಕೆ ಮುಂದಿನ ಸರಣಿ
ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ: 3 ಏಕದಿನ ಪಂದ್ಯ ಮೊದಲ ಪಂದ್ಯ: ಜನವರಿ 14 ಎಲ್ಲಿ: ಮುಂಬೈ