ಮೈಸೂರು: ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತೆರಿಗೆದಾರರಿಗೆ ಪ್ರತ್ಯೇಕ ಕಾನೂನು ರೂಪಿಸಬೇಕಿದೆ ಎಂದು ಭಾರತ ತೆರಿಗೆ ಸಲಹೆಗಾರರ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ನಾರಾಯಣ ಜೈನ್ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಅಖಿಲ ಭಾರತ ತೆರಿಗೆ ಸಲಹೆಗಾರರ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ತೆರಿಗೆ ಸಮ್ಮೇಳನ ಮತ್ತು ತೆರಿಗೆ ಸಲಹೆಗಾರರ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ತೆರಿಗೆ ಸಲಹೆಗಾರರು ಸಾಕಷ್ಟು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಮುಂದಾಗಬೇಕು. ಕರ್ನಾಟಕ ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಬೇರೆ ಕ್ಷೇತ್ರಗಳಿಗೆ ನೀಡಿದಂತೆ ನಮಗೂ ವಿಮೆ ಸೌಲಭ್ಯ ಸಿಗಬೇಕು. ಸರ್ಕಾರದಿಂದ ಸೌಲಭ್ಯ ಸಿಗಬೇಕು. ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸುವುದರ ಜತೆಗೆ ಸದಸ್ಯರಿಗೆ ಮಾನ್ಯತೆ ನೀಡಿ ಸೌಲಭ್ಯ ಕಲ್ಪಿಸಬೇಕು. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಇರುವ ತೆರಿಗೆ ಸಲಹೆಗಾರರಿಗೂ ಸ್ಥಾನಮಾನ ನೀಡಿದರೆ ಅನುಕೂಲವಾಗುತ್ತದೆ. ನಮ್ಮ ಒಕ್ಕೂಟದಲ್ಲಿ ಈಗಾಗಲೇ 11,073 ಸದಸ್ಯರಿದ್ದಾರೆ ಎಂದು ತಿಳಿಸಿದರು.
ಆದಾಯ ತೆರಿಗೆ ಇಲಾಖೆ ಆಯುಕ್ತ ಸತೀಶ್ ಮಿರ್ಗಾವ್ ಮಾತನಾಡಿ, ತೆರಿಗೆ ಸಲಹೆಗಾರರ ಪ್ರಯತ್ನ ಇಲ್ಲದೆ ಸಂಗ್ರಹ ಹೆಚ್ಚಾಗದು. ಕಳೆದ ನಾಲ್ಕು ವರ್ಷದಲ್ಲಿ ತೆರಿಗೆ ಸಂಗ್ರಹ ಶೇ.18 ಹೆಚ್ಚಿದೆ. ಈ ವರ್ಷ ಆದಾಯ ತೆರಿಗೆ ಪಾವತಿದಾರರ ಪ್ರಮಾಣ ಶೇ.7 ಹೆಚ್ಚಾಗಿದೆ. ಸಕಾಲದಲ್ಲಿ ತೆರಿಗೆ ಪಾವತಿಯು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ದಕ್ಷಿಣ ವಲಯ ಅಧ್ಯಕ್ಷ ರಾಮರಾಜು ಮಾತನಾಡಿ, ತೆರಿಗೆ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ನಮ್ಮ ರಾಷ್ಟ್ರ ಪ್ರಗತಿಯಾಗಲು ಮತ್ತು ಗ್ರಾಹಕರ ಏಳಿಗೆಗಾಗಿ ಇದು ಅವಶ್ಯಕ ಕೂಡ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡರೆ ನಮ್ಮ ಜ್ಞಾನ ವೃದ್ಧಿಯಾಗುವುದರ ಜೊತೆಗೆ ವೃತ್ತಿಪರ ಕೌಶಲ ಹೆಚ್ಚಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.
ರಾಷ್ಟ್ರೀಯ ಕಾರ್ಯದರ್ಶಿ ರಾಮ್ ದಿಯೊ ಕಾಕ್ರ, ತೆರಿಗೆ ಸಲಹೆಗಾರ ಎಸ್.ನಂಜುಂಡ ಪ್ರಸಾದ್, ತೆರಿಗೆ ಸಲಹೆಗಾರರ ಜಿಲ್ಲಾ ಅಧ್ಯಕ್ಷ ಎಸ್.ಪ್ರಸಾದ್, ಜಿಲ್ಲಾ ವಲಯ ಉಪಾಧ್ಯಕ್ಷ ಟಿ.ಪಿ.ಪ್ರಕಾಶ್, ಸುದರ್ಶನ್, ಡಿ.ಎಂ.ಭತ್ತದ್, ಸಿ.ಎ.ಸಿದ್ದೇಶ್ವರ ಯಲಮಲಿ ಇದ್ದರು.