ಉತ್ತರ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಬಜೆಟ್ ಅಗತ್ಯ

ಶಿರಸಿ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕೊರತೆ ನೀಗಿಸಲು ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದ ಬಣ್ಣದ ಮಠದ ಲಿಂಗೈಕ್ಯ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ 24ನೇ ಪುಣ್ಯ ಸ್ಮರಣೋತ್ಸವಕ್ಕೆ ಸೋಮವಾರ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ಅಧಿಕವಾಗಿವೆ. ಸರ್ಕಾರಗಳು ಪ್ರತ್ಯೇಕತೆ ಹುಟ್ಟು ಹಾಕದೆ ಏಕತೆ ತರುವ ಪ್ರಯತ್ನ ಮಾಡಲಿ. ಪ್ರತ್ಯೇಕ ರಾಜ್ಯ, ಧರ್ಮ ಹುಟ್ಟುಹಾಕುವ ಬದಲು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ನೀಡಲು ಚಿಂತನೆ ಮಾಡಬೇಕು. ಮಲೆನಾಡು, ಕರಾವಳಿಯಲ್ಲಿ ಹರಿದ ನದಿಗಳ ನೀರು ಎರಡೂ ದಂಡೆಗಳಲ್ಲಿ ಬಳಸಿ ಹೆಚ್ಚುಳಿದರೆ ಮಾತ್ರ ಬಯಲು ಸೀಮಿಗೆ ಕೊಂಡಯ್ಯಬೇಕು. ಇದರಿಂದ ಮಲೆನಾಡು ಭಾಗಕ್ಕೂ ಅನ್ಯಾಯ ಆಗದು, ಬಯಲು ಸೀಮಿಗೂ ಒಳಿತಾಗಲಿದೆ ಎಂದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು,‘ಅಂತರಂಗ ಮತ್ತು ಬಹಿರಂಗದಲ್ಲಿ ಪಾಪದ ವಿಚಾರ ಯಾರು ಮಾಡುವುದಿಲ್ಲವೋ ಅವರು ಪುಣ್ಯಾತ್ಮರೆನಿಸ್ತುತಾರೆ. ಪಾಪಾತ್ಮರಿಗೆ ನರಕ ಸಿಕ್ಕರೆ ಪುಣ್ಯಾತ್ಮರಿಗೆ ಸ್ವರ್ಗ ಸಿಗುತ್ತದೆ. ನಮ್ಮಿಂದ ಸದಾ ಉತ್ತಮ ವಿಚಾರಗಳು ಹೊರಬರಬೇಕು’ ಎಂದರು.

ಬಣ್ಣದಮಠದ ಶ್ರೀ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ಕಾರದವೀರಬಸವ ಸ್ವಾಮೀಜಿ, ಮಠದ ವ್ಯವಸ್ಥಾಪಕ ಎಸ್.ಬಿ. ಹಿರೇಮಠ ಇದ್ದರು. 2017-18ನೇ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.