ಬಟ್ಟೆಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು ಶ್ರೀಮಂತನಾಗಿದ್ದ ಪ್ರಶಾಂತ್ ತನ್ನ ವ್ಯಾಪಾರದ ವೃದ್ಧಿಗಾಗಿ ನಗರದ ಕೆಲವು ಪ್ರತಿಷ್ಠಿತ ಕ್ಲಬ್ಗಳ ಸದಸ್ಯನಾಗಿದ್ದ. ಒಂದು ಸಂಜೆ ಆತನ ಕ್ಲಬ್ನಲ್ಲಿ ಒಬ್ಬ ಸೂಟ್ಧಾರಿ ವ್ಯಕ್ತಿ ಅವನ ಎದುರಿಗೆ ಬಂದು ನಿಂತು ಹಲೋ ಎಂದ. ‘ತಾವು ಯಾರೆಂಬುದು ನನಗೆ ತಿಳಿಯಲಿಲ್ಲ’ ಎಂದು ಪ್ರಶಾಂತ್ ಹೇಳಿದಾಗ ಆತ, ‘ನನ್ನ ಹೆಸರು ರಾಮಕೃಷ್ಣನ್. ನಾನೊಬ್ಬ ವಿಜ್ಞಾನಿ ಮತ್ತು ಬಿಸಿನೆಸ್ವೆುನ್. ಮುಂಬೈನ ನಿವಾಸಿ. ಎಕ್ಸ್ಪೋರ್ಟ್ ಬಿಸಿನೆಸ್ ಮಾಡುತ್ತಿರುವೆ’ ಎಂದು ಹೇಳಿ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟ. ಅದರಲ್ಲಿ ಆತ ತಾನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಜಪಾನ್, ಫ್ರಾನ್ಸ್, ಮತ್ತು ಬ್ರಿಟಿಷ್ ಬಾಹ್ಯಾಕಾಶ ಸಂಸ್ಥೆಗಳ ಕನ್ಸಲ್ಟೆಂಟ್ ಎಂದು ಬರೆದುಕೊಂಡಿದ್ದ.
‘ನಿಮ್ಮ ಬಿಸಿನೆಸ್ ಏನು?’ ಎಂದು ಪ್ರಶಾಂತ್ ಕೇಳಿದಾಗ, ‘ನೀವು ಸಮಯ ಕೊಟ್ಟರೆ, ನಿಮ್ಮ ಕಚೇರಿಗೆ ಬಂದು ಎಲ್ಲವನ್ನೂ ವಿವರಿಸುತ್ತೇನೆ’ ಎಂದ ರಾಮಕೃಷ್ಣನ್. ಒಪ್ಪಿದ ಪ್ರಶಾಂತ್ ಅವನನ್ನು ತನ್ನ ಕಚೇರಿಗೆ ಬರಹೇಳಿದ. ಮಾರನೆಯ ದಿನ ರಾಮಕೃಷ್ಣನ್ ಪ್ರಶಾಂತ್ನ ಕಚೇರಿಗೆ ಒಂದು ಬಿ.ಎಂ.ಡಬ್ಲೂ್ಯ ಕಾರಿನಲ್ಲಿ ಬಂದ. ಅದರ ಮುಂದೆ ಮತ್ತು ಹಿಂದೆ ಒಂದೊಂದು ಬಿಳಿಯ ಬೊಲೇರೋ ವಾಹನಗಳಿದ್ದವು. ಕಾರು ನಿಂತಕೂಡಲೇ ಜೀಪುಗಳಿಂದಿಳಿದ ನಾಲ್ವರು ಕಪ್ಪು ಸಫಾರಿ ಸೂಟ್ಧಾರಿಗಳು ಕಾರಿನ ಬಾಗಿಲನ್ನು ತೆರೆದು ರಾಮಕೃಷ್ಣನ್ ಇಳಿದ ನಂತರ ಅವನನ್ನು ಸುತ್ತುವರಿದರು. ಕೈಯಲ್ಲಿ ವಾಕಿಟಾಕಿಗಳನ್ನು ಹಿಡಿದಿದ್ದ ಅವರು ರಾಮಕೃಷ್ಣನ್ನನ್ನು ಪ್ರಶಾಂತ್ನ ಕಚೇರಿಯವರೆಗೆ ಬೆಂಗಾವಲಿನಲ್ಲಿ ಕರೆತಂದರು.
ಪ್ರಶಾಂತನ ಜತೆ ಮಾತಿಗಾರಂಭಿಸಿದ ರಾಮಕೃಷ್ಣನ್, ‘ನನಗೇಕೆ ಇಷ್ಟು ಸೆಕ್ಯೂರಿಟಿ ಎಂದು ನೀವು ಯೋಚಿಸುತ್ತಿರಬಹುದು. ನಾನು ಅಮೆರಿಕದ ನಾಸಾದಲ್ಲಿ ವಿಜ್ಞಾನಿಯಾಗಿ ಆನಂತರ ಕೆಲಸ ಬಿಟ್ಟು ವಿವಿಧ ದೇಶಗಳ ಬಾಹ್ಯಾಕಾಶ ಸಂಸ್ಥೆಗಳಿಗೆ ಸಲಹೆಗಾರನಾಗಿದ್ದೇನೆ. ಇವರೆಲ್ಲರಿಗೂ ಉಪಗ್ರಹ ತಯಾರಿಕೆಗೆ ವಿಶೇಷ ರೀತಿಯ ಮಾಲಿಬ್ಡಿಯಂ- ಇರಿಡಿಯಮ್ ರೇಡಿಯಂ ಲೋಹಗಳ ಮಿಶ್ರಣದ ಎಲಿಮೆಂಟ್ ಬೇಕಾಗುತ್ತದೆ. ಅದರ ಬೆಲೆ ಮಿಲಿಯಗಟ್ಟಲೇ ಡಾಲರ್ಗಳು. ಇಂತಹ ಒಂದು ಎಲಿಮೆಂಟ್ ನನ್ನಲ್ಲಿದೆ. ಅದಕ್ಕೇ ನನಗಿಷ್ಟು ಭದ್ರತೆ’ ಎಂದು ಹೇಳಿ ತನ್ನ ಬ್ರೀಫ್ಕೇಸ್ ತೆರೆದ. ಅದರಲ್ಲಿ ಕೆಂಪು ವೆಲ್ವೆಟ್ ಚೀಲದಲ್ಲಿ ಸುತ್ತಿಟ್ಟಿದ್ದ ಒಂದು ಪಾತ್ರೆಯನ್ನು ಹೊರತೆಗೆದು, ಇದೇ ಆ ಎಲಿಮೆಂಟ್ ಎಂದು ತೋರಿಸಿದ. ಅದೊಂದು ಕಂಚಿನ ಚೊಂಬಿನಂತಿದ್ದು ಜಜ್ಜಿಹೋಗಿತ್ತು.
ತಮಿಳುನಾಡಿನ ನಮ್ಮ ಜಮೀನಿನಲ್ಲಿ ಈ ಪುರಾತನ ಚೆಂಬು ಇತರ ಮೂರು ಚೆಂಬುಗಳ ಜತೆಗೆ ನೆಲದಲ್ಲಿ ಹೂತುಹೋಗಿದ್ದು ಉಳುವಾಗ ಹೊರಗೆ ಬಂದಿತು. ಇದಕ್ಕೆ ಎರಡು ಬಾರಿ ಸಿಡಿಲು ಬಡಿದಿರುವ ಕಾರಣ ಇದು ರೇಡಿಯೋ ಆಕ್ಟಿವ್ ಗುಣವನ್ನು ಹೊಂದಿದೆ. ಇದೇ ಲೋಹ ಮಿಶ್ರಣವನ್ನೇ ಸ್ಯಾಟಲೈಟುಗಳಲ್ಲಿ ಉಪಯೋಗಿಸುವುದರಿಂದ ಇದರ ಬೆಲೆ ದುಬಾರಿ ಎಂದು ಆ ಚೆಂಬನ್ನು ಪ್ರಶಾಂತನ ಕೈಗೆ ನೋಡಲು ಕೊಟ್ಟ. ಒಂದೇ ನಿಮಿಷದ ನಂತರ ಅದನ್ನು ಮರಳಿ ಪಡೆದು ತನ್ನ ಬ್ರೀಫ್ಕೇಸ್ನಲ್ಲಿ ಭದ್ರಪಡಿಸಿದ.
ಈ ಲೋಹಕ್ಕೆ ವಿಶ್ವದ ಎಲ್ಲೆಡೆಯಿಂದಲೂ ನನಗೆ ಬೇಡಿಕೆ ಬರುತ್ತಿದೆ ಎಂದು ಹೇಳಿದ ರಾಮಕೃಷ್ಣನ್ ತನ್ನ ಕೈಯಲ್ಲಿದ್ದ ಮೂರ್ನಾಲ್ಕು ಪತ್ರಗಳನ್ನು ಪ್ರಶಾಂತಗೆ ತೋರಿಸಿದ. ನಾಸಾ ಬಾಹ್ಯಾಕಾಶ ಸಂಸ್ಥೆಯ ಲೆಟರ್ಹೆಡ್ನಲ್ಲಿ ಬರೆಯಲಾಗಿದ್ದ ಒಂದು ಪತ್ರದಲ್ಲಿ, ‘ಪ್ರಿಯ ರಾಮಕೃಷ್ಣನ್, ನಿಮ್ಮ ಬಳಿ ಇರುವ ಲೋಹವನ್ನು ನಾವು ಖರೀದಿಸಲು ಉತ್ಸುಕರಾಗಿದ್ದೇವೆ’ ಎಂದು ಬರೆಯಲಾಗಿತ್ತು. ಅದೇ ರೀತಿಯಾಗಿಯೇ ಫ್ರಾನ್ಸ್, ಇಂಗ್ಲೆಂಡ್, ಜಪಾನ್, ಮುಂತಾದ ದೇಶಗಳಿಂದ ಬಂದಿದ್ದ ಪತ್ರಗಳಲ್ಲಿಯೂ ಬರೆಯಲಾಗಿತ್ತು. ‘ನಾನಂತೂ ಖಂಡಿತವಾಗಿ ಇದನ್ನು ಅತಿ ಹೆಚ್ಚು ಬೆಲೆ ಕೊಟ್ಟವರಿಗೆ ಮಾರಲು ಉದ್ದೇಶಿಸಿದ್ದೇನೆ. ಇದರ ಬೆಲೆ ಎಷ್ಟಿರಬಹುದು ನಿಮಗೆ ಗೊತ್ತೇ?’ ಎಂದು ಪ್ರಶಾಂತನನ್ನು ಕೇಳಿದ ರಾಮಕೃಷ್ಣನ್. ಪ್ರಶಾಂತ್ ತನಗೆ ಗೊತ್ತಿಲ್ಲವೆಂದಾಗ, ಇದಕ್ಕೆ ಕಡಿಮೆಯೆಂದರೂ 10 ಮಿಲಿಯನ್ ಡಾಲರ್ಗಳು ಬರುತ್ತವೆ. ಇಂದಿನ ವಿನಿಮಯದ ದರದಲ್ಲಿ ಅಂದಾಜು 80 ಕೋಟಿ ರೂಪಾಯಿಗಳು. ಹೀಗಾಗಿಯೇ ದಿನದ 24 ಗಂಟೆಗಳೂ ಇದಕ್ಕೆ ಸೆಕ್ಯೂರಿಟಿ ಬೇಕು. ಇದನ್ನು ಬ್ಯಾಂಕ್ ಲಾಕರ್ನಲ್ಲಿ ಇಡದೆ ನನ್ನ ಮನೆಯಲ್ಲಿಯೇ ದೊಡ್ಡ ಲಾಕರ್ ಮಾಡಿಸಿ ಇಟ್ಟುಕೊಂಡಿದ್ದೇನೆ. ಮೊದಲಿಗೆ ಇದನ್ನು ಮಾರಾಟ ಮಾಡಿ ನಂತರ ನನ್ನಲ್ಲಿರುವ ಉಳಿದ ರೇಡಿಯೋ ಆಕ್ಟಿವ್ ವಸ್ತುಗಳನ್ನು ಮಾರಾಟ ಮಾಡುತ್ತೇನೆ, ಎಂದ ರಾಮಕೃಷ್ಣನ್.
‘ನನ್ನ ಬಳಿ ಬಂದ ವಿಷಯವೇನು?’ ಎಂದು ಪ್ರಶಾಂತ್ ಕೇಳಿದಾಗ, ‘ನನಗೀಗ ತೊಂದರೆಯೊಂದು ಎದುರಾಗಿದೆ. ನಾಸಾ ಸಂಸ್ಥೆಯು 10 ಮಿಲಿಯನ್ ಡಾಲರ್ ಕೊಟ್ಟು ಇದನ್ನು ಖರೀದಿಸಲು ಒಪ್ಪಿದ್ದರೂ ಶೇ. 10ರಷ್ಟು ಲಂಚವನ್ನು ಆರ್ಡರ್ ಕೊಡುವ ಮೊದಲೇ ಕೊಡಬೇಕು ಎಂದು ಹೇಳುತ್ತಿದ್ದಾರೆ. ಅದನ್ನು ಕೊಡಲು ನನ್ನ ಅಭ್ಯಂತರವಿಲ್ಲ. ಆದರೆ, ನನ್ನ ಹಣ ಜಿನೀವಾದ ಸ್ವಿಸ್ ಬ್ಯಾಂಕಿನಲ್ಲಿ ಯಾವುದೋ ಒಂದು ಕಾರಣಕ್ಕಾಗಿ ಲಾಕ್ ಆಗಿದೆ. ಈಗ ನನ್ನ ಬಳಿ 2 ಕೋಟಿ ರೂ ಮಾತ್ರ ಇರುವ ಕಾರಣ ನನಗೆ 6 ಕೋಟಿ ರೂಗಳ ಅವಶ್ಯಕತೆಯಿದೆ’ ಎಂದ. ಹಾಗಾದರೆ ಇದನ್ನು ಲಂಚ ಕೇಳದಿರುವ ಬೇರೆ ದೇಶದವರಿಗೆ ಮಾರಿ ಎಂದ ಪ್ರಶಾಂತ್. ‘ಅವರ ಬೆಲೆ ಅಮೆರಿಕದ ಅರ್ಧದಷ್ಟು. ನನಗೆ ಗಿಟ್ಟುವುದಿಲ್ಲ. ಒಂದುವೇಳೆ ಆರು ಕೋಟಿ ರೂ.ಗಳನ್ನು ಕೊಡಲು ನೀವು ಒಪ್ಪಿದರೆ ನಿಮ್ಮನ್ನು ಅಮೆರಿಕದ ಡೀಲಿನಲ್ಲಿ ಪಾಲುದಾರನಾಗಿ ಮಾಡಿಕೊಂಡು ನನಗೆ ಬರುವ 80 ಕೋಟಿ ರೂಗಳಲ್ಲಿ ನಿಮಗೆ 10 ಪ್ರತಿಶತ, ಅಂದರೆ 8 ಕೋಟಿ ರೂ. ಕೊಡುವೆ. ಇಲ್ಲವೆಂದರೆ ಒಂದು ಕೋಟಿ ರೂ. ಬಡ್ಡಿ ಕೊಟ್ಟು ಏಳು ಕೋಟಿ ಮರಳಿಸುವೆ. ಬಾಂಡ್ ಪೇಪರಿನಲ್ಲಿ ಈ ಒಪ್ಪಂದದ ಬಗ್ಗೆ ಸಹಿ ಮಾಡುವೆ’ ಎಂದ.
‘ಒಂದು ವೇಳೆ ನಾನು ಒಪ್ಪಿದರೆ ನನ್ನ ಹಣವನ್ನು ಎಂದು ಮರಳಿಸುವಿರಿ?’ ಎಂದು ಕೇಳಿದ ಪ್ರಶಾಂತ್. ‘ನೀವು ಸಾಲವೆಂದು ಕೊಟ್ಟರೆ ಮೂರು ತಿಂಗಳಲ್ಲಿ ತೀರಿಸುವೆ. ಪಾಲುದಾರರೆಂದು ಬಂದರೆ ನನ್ನ ಮುಂದಿನ ಎಲ್ಲ ಮಾರಾಟಗಳಲ್ಲಿಯೂ ನಿಮಗೆ ಶೇಕಡಾ 10 ರಷ್ಟು ಕೊಡುವೆ. ಇಲ್ಲಿ ನೋಡಿ ನನ್ನ ಬಳಿ ಇಂತಹ ಇನ್ನೂ ಮೂರು ಚೆಂಬುಗಳಿವೆ’ ಎಂದು ತನ್ನ ಲೇಟೆಸ್ಟ್ ಐಫೋನಿನಲ್ಲಿ ಅವುಗಳ ಫೋಟೋ ತೋರಿಸಿದ. ಈ ಬಗ್ಗೆ ತೀರ್ವನಿಸಲು ಪ್ರಶಾಂತ್ ಸಮಯ ಕೇಳಿದ. ಅಷ್ಟರಲ್ಲಿ ರಾಮಕೃಷ್ಣನ್ನ ಮೊಬೈಲಿಗೆ ಒಂದು ಕರೆ ಬಂದಿತು.
ಆತ ಆ ಕರೆಯನ್ನು ಸ್ವೀಕರಿಸಿ, ‘ಇನ್ನು ಎರಡು ಮೂರು ದಿನಗಳಲ್ಲಿ ನಾನು ಒಂದು ಮಿಲಿಯನ್ ಡಾಲರ್ಗಳನ್ನು ನಿಮ್ಮ ಸ್ವಿಸ್ ಬ್ಯಾಂಕಿನ ಅಕೌಂಟಿಗೆ ಟ್ರಾನ್ಸ್ಫರ್ ಮಾಡುವೆ, ದಯವಿಟ್ಟು ಈ ಆರ್ಡರನ್ನು ಬೇರೆಯವರಿಗೆ ಕೊಡಬೇಡಿ’ ಎಂದು ಹೇಳಿದ. ನಂತರ ಪ್ರಶಾಂತನನ್ನು ಉದ್ದೇಶಿಸಿ, ‘ನೀವೇ ನೋಡಿದಿರಲ್ಲ, ಇನ್ನು ಮೂರು ದಿನಗಳಲ್ಲಿ ಹಣ ಕೊಡದಿದ್ದರೆ ಅಮೆರಿಕದ ಆರ್ಡರ್ ಕ್ಯಾನ್ಸಲ್ ಆಗುತ್ತದೆ. ನನಗೆ ಡೆಲಿವರಿ ಮಾಡಲು ಇರುವ ಸಮಯ ಒಂದು ವಾರ. ಆನಂತರ ನನಗೆ ಅವರು ಹಣ ಕೊಡುತ್ತಾರೆ. ಕೇವಲ ನಾಲ್ಕು ವಾರದೊಳಗೆ ನಿಮ್ಮ ಹಣ ವಾಪಸಾಗುವ ಸಂಭವವಿದೆ. ಬೇಗ ತೀರ್ವನಿಸಿ, ಇಲ್ಲದಿದ್ದರೆ ಇನ್ನೊಂದು ಪಾರ್ಟಿಯ ಬಳಿಗೆ ಹೋಗುವೆ’ ಎಂದು ರಾಮಕೃಷ್ಣನ್ ಅವಸರ ಮಾಡಿದ.
‘ನನಗೆ ಸಂಜೆಯವರೆಗೆ ಟೈಂ ಕೊಡಿ’ ಎಂದು ಹೇಳಿದ ಪ್ರಶಾಂತ್ ಅವನನ್ನು ಬೀಳ್ಕೊಟ್ಟ. ಆತ ಹೋದಕೂಡಲೇ ತನ್ನ ಸೋದರ ಸಂಬಂಧಿಯಾದ ಋತ್ವಿಕ್ನನ್ನು ಸಂರ್ಪಸಿ ನಡೆದ ವಿಷಯವನ್ನು ತಿಳಿಸಿದ. ಋತ್ವಿಕ್ ತಾನೇ 5 ಕೋಟಿ ರೂ.ಗಳನ್ನು ತೊಡಗಿಸಲು ತಯಾರಾಗಿರುವೆನೆಂದು ಹೇಳಿದ. ಅವರಿಬ್ಬರೂ ಅದೇ ಸಂಜೆ ರಾಮಕೃಷ್ಣನ್ನನ್ನು ಪಂಚತಾರಾ ಹೊಟೇಲ್ ಒಂದರಲ್ಲಿ ಭೇಟಿಯಾಗಿ ತಾವಿಬ್ಬರೂ ಸೇರಿ ಎಂಟು ಕೋಟಿ ರೂ.ಗಳನ್ನು ಕೊಡುವುದಾಗಿ ಹೇಳಿದರು. ಹಾಗಾದರೆ ನಿಮ್ಮನ್ನು ಪಾಲುದಾರರನ್ನಾಗಿ ಮಾಡಿಕೊಂಡು ನಿಮಗೆ ಒಟ್ಟು ಹತ್ತು ಕೋಟಿ ರೂ.ಗಳನ್ನು ಮರಳಿಸುವೆ ಎಂದ ರಾಮಕೃಷ್ಣನ್. ಮಾರನೆಯ ದಿನ ಅವರಿಬ್ಬರೂ ಎಂಟು ಕೋಟಿ ರೂ. ನಗದನ್ನು ರಾಮಕೃಷ್ಣನ್ಗೆ ಅದೇ ಹೋಟೆಲ್ಗೆ ತಂದು ಕೊಟ್ಟರು. ಹಣವನ್ನು ಪಡೆದ ನಂತರ ಅವರಿಬ್ಬರನ್ನೂ ತನ್ನ ಕಂಪನಿಯ ಪಾಲುದಾರರನ್ನಾಗಿ ಮಾಡಿಕೊಂಡ ಒಪ್ಪಂದ ಪತ್ರವನ್ನು ರಾಮಕೃಷ್ಣನ್ ತಯಾರಿಸಿ ಸಹಿ ಮಾಡಿಕೊಟ್ಟ.
ತಾನು ಅದೇ ರಾತ್ರಿಯೇ ಅಮೆರಿಕಗೆ ಹೋಗುವುದಾಗಿ ತಿಳಿಸಿದ ರಾಮಕೃಷ್ಣನ್ ಒಂದು ತಿಂಗಳ ನಂತರ ಅವರನ್ನು ಸಂರ್ಪಸುವುದಾಗಿ ಹೇಳಿದ. ಆದರೆ, ರಾಮಕೃಷ್ಣನ್ ಸಂಪರ್ಕವನ್ನು ಮಾಡದಿದ್ದಾಗ ಪ್ರಶಾಂತ್ ಮತ್ತು ಋತ್ವಿಕ್ ಅವನನ್ನು ಸಂರ್ಪಸಲು ಪ್ರಯತ್ನಿಸಿದರು. ಅವನ ಫೋನ್ ಸ್ವಿಚ್-ಆಫ್ ಆಗಿತ್ತು. ಎಷ್ಟೇ ಪ್ರಯತ್ನಿಸಿದರೂ ಆತ ಸಂಪರ್ಕಕ್ಕೆ ಬರದಿದ್ದಾಗ ತಾವು ಮೋಸ ಹೋದೆವೆಂದು ಅರಿತ ಅವರಿಬ್ಬರೂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ನೀವೂ ರೈಸ್ ಪುಲ್ಲಿಂಗ್ ಮೋಸಕ್ಕೆ ಬಲಿಯಾದರಲ್ಲಾ? ಎಂದು ಉದ್ಗರಿಸಿದ ಪೊಲೀಸರು, ಪ್ರಕರಣವನ್ನು ದಾಖಲಿಸಿ ಪ್ರಶಾಂತನ ಕಚೇರಿಯ ಹಾಗೂ ಪಂಚತಾರಾ ಹೋಟೆಲ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ನಿಮಗೆ ಟೋಪಿ ಹಾಕಿದ ವ್ಯಕ್ತಿ ರಾಮಕೃಷ್ಣನ್ ಅಲ್ಲ. ವಜಾ ಆಗಿರುವ ಪೊಲೀಸ್ ಕಾನ್ಸ್ಟೇಬಲ್ ನಟರಾಜ. ಹಲವಾರು ಮೋಸದ ಕೇಸುಗಳಲ್ಲಿ ಜೈಲು ಸೇರಿ ಹೊರಬಂದಿದ್ದು ಈಗ ನಿಮಗೆ ಮೋಸ ಮಾಡಿದ್ದಾನೆ. ಅವನ ಬಾಡಿಗಾರ್ಡ್ಗಳಾಗಿ ನಟಿಸಿದ್ದವರು ನಿವೃತ್ತ ಪೊಲೀಸ್ ಸಿಬ್ಬಂದಿಯೇ ಎಂದರು ಪಿ.ಎಸ್.ಐ. ಪ್ರಶಾಂತನ ಕಚೇರಿಗೆ ನಟರಾಜ ತಂದಿದ್ದ ವಾಹನಗಳು ಬಾಡಿಗೆಯವು ಎಂದು ತನಿಖೆಯಲ್ಲಿ ತಿಳಿಯಿತು.
ನಟರಾಜನನ್ನು ಎರಡೇ ದಿನಗಳಲ್ಲಿ ದೆಹಲಿಯಲ್ಲಿ ಬಂಧಿಸಿದಾಗ ಆತ ಎರಡು ಕೋಟಿ ರೂ.ಗಳ ವೆಚ್ಚದ ಹೊಸ ಆಡಿ ಕಾರೊಂದನ್ನು ಖರೀದಿಸಿದ್ದ. ಅದಲ್ಲದೆ, ಅವನಿಂದ ಒಂದೂವರೆ ಕೋಟಿ ರೂ ನಗದನ್ನೂ ವಶಪಡಿಸಿಕೊಳ್ಳಲಾಯಿತು. ಉಳಿದ ಆರೋಪಿಗಳನ್ನು ಬಂಧಿಸಿ ಅವರಿಂದ ಹತ್ತು ಲಕ್ಷ ರೂ.ಗಳನ್ನು ಜಪ್ತು ಮಾಡಲಾಯಿತು. ಎಲ್ಲರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಎಲ್ಲರೂ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ಮೋಸಹೋಗಲು ಎರಡು ದಾರಿಗಳಿವೆ. ಯಾವುದು ಸುಳ್ಳೋ ಅದನ್ನೇ ನಿಜವೆಂದು ನಂಬುವುದು ಒಂದಾದರೆ, ನಿಜವನ್ನು ನಿಜವೆಂದು ನಂಬದಿರುವುದು ಎರಡನೆಯದು ಎಂದ ಡೆನ್ಮಾರ್ಕಿನ ತತ್ವಜ್ಞಾನಿ ಸೋರೆನ್ ಕಿಯರ್ಕೆಗಾಡ್ನ ಮಾತುಗಳಿಗೆ ಪ್ರಶಾಂತನೇ ನಿದರ್ಶನ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಎನ್.ಎಂ. ಸುರೇಶ್ ಆಯ್ಕೆ