ತಾಳಿಕೋಟೆ: ಜಿಲ್ಲೆಯಲ್ಲಿ ಖಾಸಗಿ ಏಜನ್ಸಿಗಳ ಮೂಲಕ ಕಳಪೆ ತೊಗರಿ ಬೀಜ ವಿತರಿಸಿದ್ದರ ಪರಿಣಾಮ 5.34 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆ ಮಾಡಿದ ಬೆಳೆ ಕಾಳುಕಟ್ಟದೆ ರೈತರಿಗೆ ನಷ್ಟ ಉಂಟಾಗಿದೆ. ಕಿವುಡ ಸರ್ಕಾರ ರೈತರು ಚಾಟಿ ಬೀಸುವ ಮುಂಚೆ ಕೂಡಲೇ ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಜತೆಗೆ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಗುಡುಗಿದರು.
ತೊಗರಿ ಬೆಳೆ ಹಾನಿ ಕುರಿತು ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ, ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಟ್ರಾೃಕ್ಟರ್ ರ‌್ಯಾಲಿಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಳಪೆ ಬೀಜದಿಂದ ರೈತರಿಗೆ ಆದ ನಷ್ಟವನ್ನು ತುಂಬಿಕೊಡುವ ನಿಟ್ಟಿನಲ್ಲಿ ಸರ್ಕಾರ ಅಧಿಕೃತವಾಗಿ ಸರ್ವೇ ಮಾಡಲು ಆದೇಶ ಮಾಡಬೇಕು. ಕನಿಷ್ಠ 4 ರಿಂದ 5 ಸಾವಿರ ಕೋಟಿ ರೂ. ಕಳಪೆ ಬೀಜದಿಂದ ನಷ್ಟ ಆಗಿದೆ. ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಜೀವಂತ ಇದ್ದಾರೋ ಇಲ್ಲವೋ ಗೊತ್ತಿಲ್ಲ. ರೈತರಿಗೆ ಇಷ್ಟೆಲ್ಲ ನಷ್ಟವಾಗಿ ಜಿಲ್ಲೆಯ ಎಲ್ಲ ಭಾಗಗಳಲ್ಲಿಯೂ ಹೋರಾಟ ಮಾಡುತ್ತಿದ್ದರೂ ತುಟಿ ಪಿಟಕ್ ಎನ್ನದೆ ಮೌನವಹಿಸಿರುವ ಒಳಗುಟ್ಟೇನು? ಎಂದು ಮಾಜಿ ಶಾಸಕ ನಡಹಳ್ಳಿ ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ರೈತರು ಬದುಕಿದ್ದಾರೋ ಸತ್ತಿದ್ದಾರೋ ಕೇಳುತ್ತಿಲ್ಲ. ತೊಗರಿ ಬೆಳೆ ಹಾನಿಯ ಬಗ್ಗೆ ಒಂದೇ ಒಂದು ಮಾತು ಎತ್ತುತ್ತಿಲ್ಲ. ಕೂಡಲೇ ಎಕರೆಗೆ 50 ಸಾವಿರ ರೂ. ಪರಿಹಾರವನ್ನು ರೈತರಿಗೆ ಸರ್ಕಾರ ನೀಡಬೇಕು. ಕಳಪೆ ಬೀಜ ಕೊಟ್ಟ ಖಾಸಗಿ ಏಜನ್ಸಿ ವಿರುದ್ಧ ಎರಡು ದಿನದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ನಡಹಳ್ಳಿ ಅವರು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಮಾತನಾಡಿ, ಶಾಸಕ ರಾಜುಗೌಡ ಪಾಟೀಲ ಅವರು ಮಾಜಿ ಶಾಸಕ ನಡಹಳ್ಳಿ ಅವರ ಪಕ್ಷಾತೀತ ಹೋರಾಟಕ್ಕೆ ಬೆಂಬಲಿಸಲು ಎಲ್ಲರಿಗೂ ಕರೆ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಸರ್ಕಾರದ ಗಮನ ಸೆಳೆಯುವಂತಹ ಕೆಲಸ ರಾಜುಗೌಡರು ಮಾಡಲಿದ್ದಾರೆ ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ, ರೈತ ಮುಖಂಡ ಗಂಗಾಧರ ನಾಡಗೌಡ, ಮಲಕೇಂದ್ರಾಯಗೌಡ ಪಾಟೀಲ ಮಾತನಾಡಿದರು.
ನೂರಾರು ಟ್ರಾೃಕ್ಟರ್‌ಗಳೊಂದಿಗೆ ಸಾವಿರಾರು ರೈತರು ದೇವರಹಿಪ್ಪರಗಿ ರಸ್ತೆ, ಹುಣಸಗಿ ಮತ್ತು ವಿಜಯಪುರ ರಸ್ತೆಗಳ ಮೂಲಕ ತೊಗರಿ ಗಿಡಗಳನ್ನು ಪ್ರದರ್ಶಿಸುತ್ತ ರ‌್ಯಾಲಿ ನಡೆಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದರು. ಅಂದಾಜು 3 ಗಂಟೆ ರಸ್ತೆ ತಡೆ ನಡೆಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ ಮಾತನಾಡಿ, ತೊಗರಿ ಬೆಳೆ ಹಾನಿಯ ಬಗ್ಗೆ ಸರ್ಕಾರದ ಗಮನಕ್ಕೆ ತದ್ದಿದ್ದರ ಪ್ರತಿಯನ್ನು ಧರಣಿಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ನಡಹಳ್ಳಿ ಅವರಿಗೆ ನೀಡಿದರು. ಧರಣಿ ನಿರತರಿಂದ ಮನವಿ ಸ್ವೀಕರಿಸಿದರು.
ಮುಖಂಡರಾದ ಎಂ.ಎಸ್.ಪಾಟೀಲ(ನಾಲತವಾಡ), ಜೆಡಿಎಸ್ ತಾಲೂಕು ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಶಂಕರಗೌಡ ಹಿಪ್ಪರಗಿ, ಪರಶುರಾಮ ಕಟ್ಟಿಮನಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಸಾಹೇಬಗೌಡ ವಣಕ್ಯಾಳ, ಪ್ರಭುಗೌಡ ಬಿರಾದಾರ (ಅಸ್ಕಿ), ಕಾಶಿನಾಥ ಮುರಾಳ, ಸಾಹೇಬಣ್ಣ ಆಲ್ಯಾಳ, ಮುತ್ತುಸಾಹುಕಾರ ಅಂಗಡಿ, ಎಂ.ಎಸ್.ಸರಶೆಟ್ಟಿ, ಪ್ರಕಾಶ ಹಜೇರಿ, ವಾಸುದೇವ ಹೆಬಸೂರ, ರಾಜುಗೌಡ ಗುಂಡಕನಾಳ, ಎಂ.ಎಂ.ಪಾಟೀಲ, ರಾಜುಗೌಡ ಕೊಳೂರ, ಸುವರ್ಣಾ ಬಿರಾದಾರ ಇತರರಿದ್ದರು.
ತೊಗರಿ ಬೆಳೆ ಹಾನಿಗೆ ಕಳಪೆ ಬೀಜವೇ ಕಾರಣವಾಗಿರುವುದು ಉಸ್ತುವಾರಿ ಮಂತ್ರಿಗಳಿಗೆ ಗೊತ್ತಿದೆ. ಸಾವಿರಾರು ರೈತರು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ ಧ್ವನಿ ಹಾಕಿದರೂ ಅವರಿಗೆ ಕೇಳಿಸುತ್ತಿಲ್ಲ. ವಿಧಾನಸಭೆಯ ಅಧಿವೇಶನದಲ್ಲಿ ತೊಗರಿ ಬೆಳೆ ಹಾನಿಯ ಬಗ್ಗೆ ಉತ್ತರ ಕರ್ನಾಟಕದ ಬಹುತೇಕ ಶಾಸಕರು ಗುಡಗಲಿದ್ದಾರೆ. ರೈತರ ಪರವಾಗಿ ಸರ್ಕಾರಕ್ಕೆ ಚಾಟಿ ಬೀಸಲಿದ್ದಾರೆ.
ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಶಾಸಕರು, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರು