ಚಿಕ್ಕಮಗಳೂರು: ಬದುಕಿನಲ್ಲಿ ಯಶಸ್ಸು ಕಾಣಬೇಕಾದರೆ ಕ್ರೀಡೆಯಲ್ಲಿ ನಿಯಮದ ಚೌಕಟ್ಟು ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅಭಿಪ್ರಾಯಪಟ್ಟರು.
ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಪಂ, ತಾಪಂ, ಗ್ರಾಪಂ ಬಿಳೇಕಲ್ಲಹಳ್ಳಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು, ಸರಪನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಚಿಕ್ಕಮಗಳೂರು ತಾಲೂಕಿನ ಎಫ್ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ೨೦೨೪-೨೫ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಆತ್ಮ ವಿಶ್ವಾಸ ಮೂಡಿಸುತ್ತದೆ. ಈ ಮೂಲಕ ಗೆಲುವಿನ ಹಂಬಲವನ್ನಿಟ್ಟುಕೊAಡು ಹೋರಾಟ ಮಾಡಬೇಕು. ಇದನ್ನು ಸಮರ್ಪಕವಾಗಿ ಅನುಸರಿಸಿದಾಗ ಯಶಸ್ಸಿನ ಕಡೆಗೆ ಕೊಂಯೊಯ್ಯುತ್ತದೆ ಎಂದು ಹೇಳಿದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಸರ್ಕಾರಿ ಅನುದಾನಕ್ಕೆ ಆಸರೆಯಾಗದೆ ಸರಪನಹಳ್ಳಿ ಎಂಡಿಆರ್‌ಎಸ್ ಶಾಲೆ ಶಿಕ್ಷಕರು ಮತ್ತು ಪಾಲಕರು ತಮ್ಮ ನೆರವಿನಿಂದ ಈ ಕ್ರೀಡಾಕೂಟ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕ್ರೀಡೆಯಲ್ಲಿ ಭಾಗವಹಿಸಿ ಉತ್ಸಾಹದಿಂದ ಗೆಲುವು ಸಾಧಿಸಿ ಎಂದು ಹಾರೈಸಿದ ಅವರು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಡಿಎಆರ್‌ಎಸ್ ಶಾಲೆ ಶೇ.೧೦೦ ಫಲಿತಾಂಶ ಬಂದಿದೆ. ಇದೇ ರೀತಿ ಮುಂದಿನ ವರ್ಷವೂ ಶಿಕ್ಷಣದಲ್ಲಿ ಸಾಧನೆ ಮಾಡಿ ಎಂದು ಹಾರೈಸಿದರು.
ಎಂಡಿಆರ್‌ಎಸ್ ಪ್ರಾಚಾರ್ಯ ವೇಣುಗೋಪಾಲ್ ಮಾತನಾಡಿ, ಶಾಲೆಯ ವಿದ್ಯಾರ್ಥಿ ಪಾಲಕರ ಸಹಾಯ ಹಸ್ತದಿಂದ ಕ್ರೀಡಾಕೂಟಕ್ಕೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಬೇರೆ ಯಾರ ಬಳಿಯೂ ದೇಣಿಗೆ ಸಂಗ್ರಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶೈಕ್ಷಣಿಕ ಸಂಯೋಜಕ ಕೃಷ್ಣರಾಜ್ ಅರಸ್ ಮಾತನಾಡಿ, ತಾಲೂಕಿನಲ್ಲಿ ೮೬ ಪ್ರೌಢಶಾಲೆಗಳಿದ್ದು, ಈ ಪೈಕಿ ೬ ವಲಯಗಳಾಗಿ ವಿಂಗಡಿಸಲಾಗಿದೆ. ಇದು ಎಫ್ ವಲಯ ಮಟ್ಟದ ಕ್ರೀಡಾಕೂಟವಾಗಿದ್ದು, ೧೪ ಶಾಲೆಗಳ ಮಕ್ಕಳು ಭಾಗವಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಶೇರ್ ಅಲಿ, ಬಸವರಾಜಪ್ಪ, ಶಿವಕುಮಾರ್, ನಾಗೇಶ್ ಮತ್ತಿತರರು ಭಾಗವಹಿಸಿದ್ದರು.