ಅರ್ಧ ಶತಮಾನ ಕಳೆದರೂ ಡಾಂಬರು ಕಾಣದ ರಸ್ತೆ!

>>

ವಿಜಯವಾಣಿ ಸುದ್ದಿಜಾಲ ಶಿರ್ವ
ಮುದರಂಗಡಿ-ಶಿರ್ವ ರಸ್ತೆಯಿಂದ ಶಿರ್ವ ತೊಟ್ಲಗುರಿ ಬಂಗ್ಲೆ ಮೈದಾನಕ್ಕೆ ಹೋಗಲು ಕಚ್ಚಾ ರಸ್ತೆ ನಿರ್ಮಾಣಗೊಂಡು ಅರ್ಧ ಶತಮಾನ ಕಳೆದರೂ ಇನ್ನೂ ಡಾಂಬರು ಕಾಣದೆ ಜನರು ಧೂಳು ಸಹಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿರ್ವ ಗ್ರಾಪಂ ವ್ಯಾಪ್ತಿಯ ತೊಟ್ಲಗುರಿ ವಾರ್ಡ್‌ನ ಬಂಗ್ಲೆ ಗುಡ್ಡೆ ಮೈದಾನದ ಸುಮಾರು ಐದು ಎಕರೆ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆ, ನಿರ್ವಹಣೆಯಿಲ್ಲದ ಪ್ರವಾಸಿ ಮಂದಿರ, ಜೇನು ಸಂಸ್ಕರಣಾ ಕೇಂದ್ರ ಹಾಗೂ ಜಿಪಂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವಿದೆ. ದಶಕಗಳ ಹಿಂದೆ ಬಂಗ್ಲೆ ಮೈದಾನದಲ್ಲಿ ಪೊಲೀಸ್ ಪರೇಡ್ ಕೂಡ ನಡೆಯುತ್ತಿತ್ತು.

ಬಾಡಿಗೆಗೆ ಬರಲು ಹಿಂದೇಟು!: ಈ ಪ್ರದೇಶದಲ್ಲಿ ಸುಮಾರು 75ಕ್ಕೂ ಹೆಚ್ಚು ಮನೆಗಳಿವೆ. ರಸ್ತೆ ತುಂಬ ಹದಗೆಟ್ಟಿರುವುದರಿಂದ ರಿಕ್ಷಾ ಚಾಲಕರು ಕೂಡ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಗಿ, ಬೇಸಿಗೆಯಲ್ಲಿ ಧೂಳುಮಯವಾಗಿ ಪರಿವರ್ತನೆಗೊಳ್ಳುತ್ತಿದ್ದು, ಜನರ ಸಂಚರಿಸಲು ಪರದಾಡುತ್ತಿದ್ದಾರೆ. ಜನಪ್ರತಿನಿಧಿಗಳು ಎಚ್ಚೆತ್ತು ತಮ್ಮ ಪಾಲಿನ ಅನುದಾನ ನೀಡಿ ಜನರ ಸಮಸ್ಯೆಗೆ ಸ್ಪಂದಿಸಿ ರಸ್ತೆಯನ್ನು ದುರಸ್ತಿಗೊಳಿಸಬೇಕೆಂಬುದು ಈ ಭಾಗದ ಜನರ ಬೇಡಿಕೆ.

ಬಂಗ್ಲೆ ಮೈದಾನ ಬಳಿ ಹಲವಾರು ಕುಟುಂಬಗಳಿದ್ದು, ಜನಪ್ರತಿನಿಧಿಗಳು ಚುನಾವಣೆ ಸಮಯ ಮಾತ್ರ ಮತ ಕೇಳಲು ಬರುತ್ತಾರೆ. ಕರ್ನಾಟಕ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ದಿ.ವಸಂತ ವಿ.ಸಾಲ್ಯಾನ್, ವಿನಯ ಕುಮಾರ್ ಸೊರಕೆ, ಶಾಸಕ ಲಾಲಾಜಿ ಮೆಂಡನ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಈ ಭಾಗವನ್ನು ಪ್ರತಿನಿಧಿಸಿದ್ದರೂ ಈವರೆಗೂ ರಸ್ತೆ ಡಾಂಬರು ಕಂಡಿಲ್ಲದಿರುವುದು ದುರಂತ.
– ಡೆನ್ನಿಸ್ ಲೋಬ, ಸ್ಥಳೀಯ ನಿವಾಸಿ

Leave a Reply

Your email address will not be published. Required fields are marked *