ಇಸ್ಲಮಾಬಾದ್: ಗ್ರಾಹಕರನ್ನು ಸೆಳೆಯಲು ಪಾಕಿಸ್ತಾನದ ಹೋಟೆಲ್ವೊಂದು ಮಾಡಿರುವ ಯೋಜನೆ ನೋಡಿದರೆ ನಿಜಕ್ಕೂ ನೀವು ಬೆರಗಾಗ್ತೀರಾ. ಅದರಲ್ಲೂ ಪುರುಷ ಗ್ರಾಹಕರೇ ಹೆಚ್ಚಾಗಿ ಬರಬೇಕೆಂದು ಚಿತ್ರದಲ್ಲಿ ಆಲಿಯಾ ಭಟ್ ನಟಿಸಿರುವ ದೃಶ್ಯವೊಂದನ್ನು ಬಳಸಿಕೊಂಡಿದ್ದಾರೆ.
ಇದೇ ವರ್ಷದಲ್ಲಿ ತೆರೆಕಂಡ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದಲ್ಲಿ ಆಲಿಯಾ ಭಟ್ ಚಿತ್ರವನ್ನು ಹೋಟೆಲ್ ಮುಂದೆ ಅಂಟಿಸಿ, ಗ್ರಾಹಕರನ್ನು ಸೆಳೆಯುವ ಯತ್ನ ಮಾಡುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಹೋಟೆಲ್ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ.
ಮುಂಬೈನ ಕಾಮಾಟಿಪುರದ ಗಂಗೂಬಾಯಿ ಕಾಥಿಯಾವಾಡಿ ಅವರು ಜೀವನಾಧಾರಿತ ಚಿತ್ರದಲ್ಲಿ ಆಲಿಯಾ ಭಟ್ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಕರಾಚಿಯ ಈ ರೆಸ್ಟೋರೆಂಟ್ ಆಲಿಯಾ ಭಟ್ ಅವರ ದೃಶ್ಯವೊಂದನ್ನು ಬಳಸಿರುವುದಲ್ಲದೇ ಹೋಟೆಲ್ ಮುಂದೆ ಪೋಸ್ಟರ್ ಸಹ ಅಂಟಿಸಿದ್ದಾರಂತೆ. ಅಲ್ಲದೇ ಪುರುಷರಿಗೆ ಶೇ.25ರಷ್ಟು ರಿಯಾಯಿತಿ ಕೂಡ ಇದೆ ಎಂದು ಈ ಹೋಟೆಲ್ ಹೇಳಿಕೊಂಡಿದೆ.
ಚಿತ್ರದಲ್ಲಿ ಪುರುಷರನ್ನು ಕರೆಯುವ ದೃಶ್ಯವನ್ನೇ ಇಲ್ಲಿ ಬಳಕೆ ಮಾಡಿಕೊಂಡಾಗಿನಿಂದ ಗ್ರಾಹಕರು ಹೆಚ್ಚಾಗಿದೆ ಎಂದೂ ಸಹ ಹೋಟೆಲ್ ಸಿಬ್ಬಂದಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)