More

    ಕಾವೇರಿ ನದಿಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಮನವಿ


    ಚಾಮರಾಜನಗರ: ಪ್ರವಾಹದಿಂದ ನದಿ ಪಾತ್ರದ ಗ್ರಾಮಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಕಾವೇರಿ ನದಿಗೆ ಶಾಶ್ವತ ತಡೆಗೋಡೆ ನಿರ್ಮಿಸುವಂತೆ ಕೊಳ್ಳೇಗಾಲದ ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ ಮಾಡಿದರು.


    ವಿಧಾನಮಂಡಲ ಕಲಾಪದಲ್ಲಿ ಗುರುವಾರ ಮಾತನಾಡಿದ ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾದರೆ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಲಿವೆ. ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಬಿಡುವುದರಿಂದ ತಾಲೂಕಿನ ಕಾವೇರಿ ನದಿ ಪಾತ್ರದ ಮುಳ್ಳೂರು, ಹಳೇ ಹಂಪಾಪುರ, ಹಳೇ ಅಣಗಳ್ಳಿ ದಾಸನಪುರ, ಹರಳೆ ಹೊಳೆ ಸಾಲಿನ ಇನ್ನಿತರ ಎಂಟತ್ತು ಗ್ರಾಮಗಳು ಮುಳುಗಡೆಯಾಗುತ್ತವೆ.

    ಇದರಿಂದ ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಾರ್ವಜನಿಕ ಆಸ್ತಿ-ಪಾಸ್ತಿಗಳು, ಬೆಳೆ ಹಾನಿಯಾಗುತ್ತದೆ. ಆದ್ದರಿಂದ ನದಿ ಪಾತ್ರದ ಗ್ರಾಮಗಳ ಜನ-ಜಾನುವಾರು ರಕ್ಷಣೆಗೆ ನದಿಯಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಿದರೆ ಪ್ರವಾಹವನ್ನು ತಡೆಗಟ್ಟಬಹುದು ಎಂದು ಮನವರಿಕೆ ಮಾಡಿದರು.


    ಅಲ್ಲದೆ, ಈ ವರ್ಷದ ಆಯ-ವ್ಯಯದಲ್ಲಿನ ಹೆಚ್ಚುವರಿ ಅನುದಾನವನ್ನು ಈ ಕಾಮಗಾರಿಗೆ ಬಿಡುಗಡೆ ಮಾಡಿಕೊಡಬೇಕೆಂದು ಸಂಬಂಧಪಟ್ಟ ಸಚಿವರಿಗೆ ಕೋರಿದರು. ಇದಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಹೇಳಿದಂತೆ ಪ್ರವಾಹದಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿರುವುದು ನಿಜ. ಕಾವೇರಿ ನದಿಗೆ ಸುಮಾರು 8 ಕಿ.ಮೀ. ತಡೆಗೋಡೆ ನಿರ್ಮಿಸುವುದು ಅವಶ್ಯಕತೆ ಇದೆ.

    ಕಾಲುವೆಗಳಿಗಾದರೆ ಸಾಲಿಸಾಗಿ ಮಾಡಬಹುದಿತ್ತು. 8 ಕಿ.ಮೀ. ತಡೆಗೋಡೆಗೆ 150 ಕೋಟಿ ರೂ. ಹಣದ ಅಗತ್ಯವಿದೆ. ಈ ವಿಚಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನದಲ್ಲಿದೆ. ಈಗಾಗಲೇ ಈ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿದ್ದಾರೆ. ಅನುದಾನ ಲಭ್ಯತೆ ನೋಡಿಕೊಂಡು ಕಾವೇರಿ ನೀರಾವರಿ ನಿಗಮದ ಅಡಿಯಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts