| ವಿಜಯವಾಣಿ ಸುದ್ದಿಜಾಲ, ಶಿವಮೊಗ್ಗ
ಹೊಯ್ಸಳರ ಕಾಲದ ಅಪರೂಪದ ಗರುಡ ಪದ್ಧತಿಯ ಶಿರಚ್ಛೇದನ ಸ್ಮಾರಕ ಶಿಲ್ಪ ತೀರ್ಥಹಳ್ಳಿ ತಾಲೂಕು ಆರಗದಲ್ಲಿ ಪತ್ತೆಯಾಗಿದೆ. ಈ ಶಿಲ್ಪವನ್ನು ಗರುಡ ಸ್ತಂಭವೆಂದು ಕರೆಯುತ್ತಾರೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಪ್ರಭಾರ ನಿರ್ದೇಶಕ ಡಾ. ಆರ್.ಶೇಜೇಶ್ವರ ಕ್ಷೇತ್ರ ಕಾರ್ಯ ಕೈಗೊಂಡಾಗ ಆರಗದ ವೀರಭದ್ರ ದೇವಾಲಯದ ಆವರಣದಲ್ಲಿ ಎರಡು ಮೀಟರ್ ಉದ್ದದ ಗ್ರಾ್ಯನೈಟ್ ಶಿಲೆಯ ಗರುಡ ಪದ್ಧತಿಯ ಶಿರಚ್ಛೇದನ ಸ್ಮಾರಕ ಶಿಲ್ಪ ಪತ್ತೆಯಾಗಿದೆ.
ಶಿಲ್ಪವು ಮೂರು ಪಟ್ಟಿಕೆಗಳಿಂದ ಕೂಡಿದೆ. ಕೆಳಗಿನದರಲ್ಲಿ ವೇಳಾವಳಿ ಅಥವಾ ಗರುಡ ಹೋಗುವ ವೀರ ಕುದುರೆ ಮೇಲೆ ಕುಳಿತು ಕತ್ತಿ ಹಿಡಿದಿದ್ದಾನೆ. ಅವನ ಹಿಂಭಾಗದಲ್ಲಿ ಸೇವಕ ಛತ್ರಿ ಹಿಡಿದಿದ್ದಾನೆ. ಆದ್ದರಿಂದ ಇವನನ್ನು ರಾಜಪ್ರಮುಖನೆಂದೂ ಕರೆಯಬಹುದು. ಹಿಂಭಾಗದಲ್ಲಿ ಮಹಿಳೆ ಕತ್ತಿ ಹಿಡಿದಿದ್ದಾಳೆ. ಎರಡನೇ ಪಟ್ಟಿಕೆಯಲ್ಲಿ ಗರುಡ ವೀರಾಸನದಲ್ಲಿ ನಿಂತಿದ್ದಾನೆ. ರುಂಡ ಕತ್ತರಿಸಿದ್ದು, ಬಲಗೈಯಲ್ಲಿ ಕತ್ತಿ ಹಿಡಿದು ಮುಂಡದ ಮೇಲೆ ಹಲಗೆಯ ರೀತಿ ಹೊತ್ತುಕೊಂಡು ಅದನ್ನು ಕೈಯಲ್ಲಿ ಹಿಡಿದಿರುವಂತಿದೆ. ಈ ಶಿರಚ್ಛೇದನ ಶಿಲ್ಪದ ಪಕ್ಕದಲ್ಲಿ ಮಹಿಳೆಯು ಕತ್ತರಿಸಲ್ಪಟ್ಟ ರುಂಡವನ್ನು ಕೈಯಲ್ಲಿ ಹಿಡಿದು ನಿಂತಿದ್ದಾಳೆ. ಮೂರನೇ ಪಟ್ಟಿಕೆಯಲ್ಲಿ ಲಿಂಗದ ರೀತಿ ಇರುವ ಕಂಬವಿದೆ. ಅದರಲ್ಲಿ ಲಿಂಗದ ಉಬ್ಬು ಶಿಲ್ಪವಿದೆ. ಈ ಲಿಂಗ ಅಥವಾ ಕಂಬದ ಮೇಲೆ ಸಮತಟ್ಟಾಗಿರುವುದು ವಿಶೇಷ ಎಂದು ಡಾ. ಆರ್.ಶೇಜೇಶ್ವರ್ ತಿಳಿಸಿದ್ದಾರೆ.
ಶಿಲ್ಪದ ಮಹತ್ವ: ಆತ್ಮ ಬಲಿದಾನ ಹಿಂದುಗಳ ದೃಷ್ಟಿಯಲ್ಲಿ ಮಹತ್ವಪೂರ್ಣ. ಆತ್ಮ ಬಲಿದಾನ ಮಾಡಿಕೊಳ್ಳಲು ಶುಭ, ತಿಥಿಗಳು ಒಳ್ಳೆಯವು ಎಂಬ ನಂಬಿಕೆಯಿದೆ. ವ್ಯಕ್ತಿಗಳು ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುವಂತಹ ಅಥವಾ ಇನ್ನೊಬ್ಬರ ಸಹಾಯದಿಂದ ಮಾಡಿಕೊಳ್ಳುವಂಥದ್ದು ಆತ್ಮ ಬಲಿದಾನ (ದೇಹತ್ಯಾಗ). ಆತ್ಮ ಬಲಿದಾನವು ಆತ್ಮಹತ್ಯೆಗಿಂತ ವಿಶೇಷ. ಇದು ಸಮಾಜದ ಒಳತಿಗೋಸ್ಕರ ಆಗಿರುವಂಥದ್ದು, ಪೂರ್ವ ನಿಯೋಜಿತ. ಇಂಥ ಅನೇಕ ಶಿಲ್ಪಗಳು ಕರ್ನಾಟಕದಲ್ಲಿವೆ ಎನ್ನುತ್ತಾರೆ ಶೇಜೇಶ್ವರ್. ಸ್ಮಾರಕ ಶಿಲ್ಪದ ಸಂಶೋಧನೆಗೆ ಡಾ. ದೇವರಾಜಸ್ವಾಮಿ, ಡಾ. ಜಗದೀಶ. ಟಿ.ಎಂ.ಕೇಶವ ಡಾ. ಗಂಗಾಂಬಿಕೆ ಗೋವರ್ಧನ, ಶಿಕ್ಷಕ ರಮೇಶ ಹಿರೇಜಂಬೂರು, ಶಶಿಧರ ಹಾಗೂ ಮೋಹನ್ ಸಹಕರಿಸಿದ್ದಾರೆ ಎಂದು ಡಾ. ಆರ್. ಶೇಜೇಶ್ವರ ತಿಳಿಸಿದ್ದಾರೆ.
ಸ್ಮಾರಕದ ವಿಶೇಷಗಳು
- ಆರಗದಲ್ಲಿ ದೊರೆತಿರುವ ಸ್ಮಾರಕ ಶಾಸನರಹಿತ
- ಇದುವರೆಗೆ ದೊರೆತ ಶಿರಚ್ಛೇದನ ಶಿಲ್ಪಗಳಲ್ಲಿ ಅಪರೂಪದ್ದು
- ಹೊಯ್ಸಳರ ಕಾಲದಲ್ಲಿದ್ದ ಗರುಡ ಪದ್ಧತಿ ವಿಜಯನಗರ ಅರಸರ ಕಾಲಕ್ಕೂ ಮುಂದುವರಿಕೆ
- ಮೇಲ್ಭಾಗದಲ್ಲಿ ಲಿಂಗದ ಆಕೃತಿ, ಕೆಳಭಾಗದಲ್ಲಿ ಚೌಕಾಕಾರವಾಗಿದ್ದು ಶಿಲ್ಪಗಳಿಂದ ಕೂಡಿದೆ
- ಸ್ತಂಭದ ಮೇಲ್ಭಾಗ ಚಪ್ಪಟೆಯಾಗಿದ್ದು, ಶಿವಲಿಂಗವೆಂದು ಹೇಳುವುದು ಕಷ್ಟ
- ಸ್ತಂಭದ ಬುಡದಲ್ಲಿ ಯಾವುದೇ ಚಿಕಣಿ ಶಿಲ್ಪಗಳಿಲ್ಲ
- ಕೈಯಲ್ಲಿ ಹಿಡಿದಿರುವ ರುಂಡವನ್ನು ಮಹಿಳೆಯು ದೇವರಿಗೆ ಅರ್ಪಿಸಿ ಸತಿ ಹೋಗಿರಬಹುದು
- ಗರುಡ ಪದ್ಧತಿಯಲ್ಲಿ ಇದೇ ರೀತಿಯ ಸ್ತಂಭಗಳನ್ನು ಸ್ಥಾಪಿಸಿರಬಹುದು.
ಅಬ್ಬಾ! ಎಂತಹ ಜಾಗದಲ್ಲಿ ಅಡಗಿದೆ MH370 ವಿಮಾನ: ನಿಗೂಢ ನಾಪತ್ತೆ ಕೇಸ್ ಬಗೆಹರಿದಿದೆ ಎಂದ ವಿಜ್ಞಾನಿ