More

    ಏಕಕಾಲ ಚುನಾವಣೆ ವರದಿ ಬೆನ್ನಲ್ಲೇ ಪರ-ವಿರೋಧ ಚರ್ಚೆ

    ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಸಮಿತಿ ಏಕಕಾಲ ಚುನಾವಣೆ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುಮುಗೆ ವರದಿ ಸಲ್ಲಿಸಿದ ಬೆನ್ನಲ್ಲೇ, ಇದಕ್ಕೆ ಪರ-ವಿರೋಧಗಳು ವ್ಯಕ್ತವಾಗಿವೆ. ಏಕಕಾಲ ಚುನಾವಣೆ ಯನ್ನು ವಿರೋಧಿಸಿದವರಲ್ಲಿ ಮೂವರು ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಒಬ್ಬ ಮಾಜಿ ರಾಜ್ಯ ಚುನಾವಣಾ ಆಯುಕ್ತರು ಕೂಡ ಸೇರಿದ್ದಾರೆ.

    ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ರಂಜನ್ ಗೊಗೋಯ್, ಶರದ್ ಅರವಿಂದ್ ಬೋಬ್ಡೆ ಮತ್ತು ಯು.ಯು. ಲಲಿತ್ ಈ ಪ್ರಸ್ತಾವದ ಪರ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ. ಹೈಕೋರ್ಟ್​ಗಳ ಮುಖ್ಯ ನ್ಯಾಯಮೂರ್ತಿಗಳಲ್ಲಿ, ಒಂಬತ್ತು ಮಂದಿ ಪ್ರಸ್ತಾವಕ್ಕೆ ಬೆಂಬಲಿಸಿದ್ದಾರೆ. ದಿಲ್ಲಿ ಹೈಕೋರ್ಟ್ ಮಾಜಿ ಮುಖ್ಯನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ, ಕಲ್ಕತ್ತಾ ಹೈಕೋರ್ಟ್ ಮಾಜಿ ಸಿಜೆ ಸಂಜೀವ್ ಬ್ಯಾನರ್ಜಿ ಇದನ್ನು ವಿರೋಧಿಸಿದ್ದಾರೆ. ಮಾಜಿ, ಹಾಲಿ ಚುನಾವಣಾ ಆಯುಕ್ತರಲ್ಲಿ ತಮಿಳುನಾಡಿನ ಹಾಲಿ ಚುನಾವಣಾ ಆಯುಕ್ತ ಪಳನಿಕುಮಾರ್ ಪ್ರಸ್ತಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

    ಯಾರ ಬೆಂಬಲ, ಯಾರ ವಿರೋಧ?: ವರದಿ ಸಿದ್ಧಪಡಿಸಲು ಕೋವಿಂದ್ ಸಮಿತಿಯು 62 ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸಿದೆ. ಅದರಲ್ಲಿ 47 ಪಕ್ಷಗಳು ತಮ್ಮ ಪ್ರತಿಕ್ರಿಯೆ ನೀಡಿವೆ. 32 ಪಕ್ಷಗಳು ಏಕಕಾಲದ ಚುನಾವಣೆಯನ್ನು ಬೆಂಬಲಿಸಿದರೆ, 15 ಪಕ್ಷಗಳು ತಮ್ಮ ವಿರೋಧ ಹೊರಹಾಕಿವೆ. ರಾಷ್ಟ್ರೀಯ ಪಕ್ಷಗಳ ಪೈಕಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್​ವಾದಿ) ಏಕಕಾಲಕ್ಕೆ ಚುನಾವಣೆ ವಿರೋಧಿಸಿದರೆ ಬಿಜೆಪಿ, ನ್ಯಾಷನಲ್ ಪೀಪಲ್ಸ್ ಪಾರ್ಟಿ ಬೆಂಬಲಿಸಿವೆ. 47 ರಾಜಕೀಯ ಪಕ್ಷಗಳಿಂದ ಪ್ರತಿಕ್ರಿಯೆ ಬಂದಿದೆ. 15 ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ, ಉಳಿದ 32 ರಾಜಕೀಯ ಪಕ್ಷಗಳು ಏಕಕಾಲದಲ್ಲಿ ಚುನಾವಣೆಗಳ ವ್ಯವಸ್ಥೆಯನ್ನು ಬೆಂಬಲಿಸಿವೆ. ಅಲ್ಲದೆ, ಸಂಪನ್ಮೂಲಗಳನ್ನು ಉಳಿಸಲು, ಸಾಮಾಜಿಕ ಸಾಮರಸ್ಯ ಕಾಪಾಡಲು, ಆರ್ಥಿಕ ಅಭಿವೃದ್ಧಿ ಉತ್ತೇಜನಕ್ಕೆ ಇದು ಪೂರಕವಾಗಿವೆ ಎಂದು ಅಭಿಪ್ರಾಯ ನೀಡಿವೆ ಎಂದು ಸಮಿತಿ ತಿಳಿಸಿದೆ.

    ವಿದೇಶಿ ವ್ಯವಸ್ಥೆಗಳ ಅಧ್ಯಯನ: ಕೋವಿಂದ ನೇತೃತ್ವದ ಉನ್ನತ ಸಮಿತಿ ದಕ್ಷಿಣ ಆಫ್ರಿಕಾ, ಸ್ವೀಡನ್ ಮತ್ತು ಬೆಲ್ಜಿಯಂ ಸೇರಿ 6 ದೇಶಗಳಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಅಧ್ಯಯನ ನಡೆಸಿವೆ. ಜರ್ಮನಿ, ಜಪಾನ್, ಇಂಡೋನೇಷ್ಯಾ, ಫಿಲಿಪ್ಪೀನ್ಸ್ ಮತ್ತು ಬೆಲ್ಜಿಯಂ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಇತರ ದೇಶಗಳಾಗಿವೆ.

    ದಕ್ಷಿಣ ಆಫ್ರಿಕಾದಲ್ಲಿ ಮತದಾರರು ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಶಾಸಕಾಂಗಗಳಿಗೆ ಏಕಕಾಲದಲ್ಲಿ ಮತ ಚಲಾಯಿಸುತ್ತಾರೆ. ಆದಾಗ್ಯೂ, ಪುರಸಭೆಯ ಚುನಾವಣೆಗಳನ್ನು ಪ್ರಾಂತೀಯ ಚುನಾವಣೆಗಳಿಂದ ಪ್ರತ್ಯೇಕವಾಗಿ ಐದು ವರ್ಷಗಳ ಅವಧಿಯಲ್ಲಿ ನಡೆಸಲಾಗುತ್ತದೆ. ಮೇ 29ರಂದು ದಕ್ಷಿಣ ಆಫ್ರಿಕಾ ತನ್ನ ಸಾರ್ವತ್ರಿಕ ಚುನಾವಣೆ ನಡೆಸುತ್ತದೆ. ಪ್ರತಿ ಪ್ರಾಂತ್ಯಕ್ಕೆ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಶಾಸಕಾಂಗದ ಚುನಾವಣೆ ನಡೆಯುತ್ತದೆ ಎಂದು ವರದಿ ಹೇಳಿದೆ.

    ವಿರೋಧ ಏಕೆ?: ಇದು ಸಂವಿಧಾನದ ಮೂಲ ರಚನೆ ಉಲ್ಲಂಘಿಸಬಹುದು. ಪ್ರಜಾಪ್ರಭುತ್ವ ವಿರೋಧಿ ಮತ್ತು ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಲಿದೆ. ಪ್ರಾದೇಶಿಕ ಪಕ್ಷಗಳನ್ನು ಧ್ವನಿ ಕಳೆದುಕೊಳ್ಳುವಂತೆ ಮಾಡಿ, ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯ ಪೋ›ತ್ಸಾಹಿಸಲಿದೆ ಮತ್ತು ಅಧ್ಯಕ್ಷೀಯ ಸ್ವರೂಪದ ಸರ್ಕಾರಕ್ಕೆ ಕಾರಣವಾಗಬಹುದು ಎಂದು ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts