ಜಮಖಂಡಿ: ನಗರಸಭೆಯಲ್ಲಿ ಪಾರದರ್ಶಕ ಆಡಳಿತ ನೀಡುವುದರೊಂದಿಗೆ ನಗರದ ಜನತೆಗೆ ಮೂಲಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತೇನೆ ಎಂದು ನಗರಸಭೆ ನೂತನ ಅಧ್ಯಕ್ಷ ಪರಮಾನಂದ ಗವರೋಜಿ ಹೇಳಿದರು.
ಸ್ಥಳೀಯ ನಗರಸಭೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಎಲ್ಲ ಸದಸ್ಯರ ವಿಶ್ವಾಸ ಪಡೆದು ಜನತೆಗೆ ಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಹೇಳಿದರು. ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ ಮತ್ತಿತರ ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ ಜನರ ನಂಬಿಕೆ ಉಳಿಸಿಕೊಳ್ಳುವೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುವುದು. ಈ ಅವಕಾಶ ಬಳಸಿಕೊಂಡು ಉತ್ತಮ ಸೇವೆ ನೀಡಲು ಶ್ರಮಿಸುವುದಾಗಿ ಹೇಳಿದರು.
ನೂತನ ಅಧ್ಯಕ್ಷ ಪರಮಗೊಂಡ ಗವರೋಜಿ ಹಾಗೂ ಉಪಾಧ್ಯಕ್ಷೆ ರೇಖಾ ಕಾಂಬಳೆ ಅವರು ಅಧಿಕಾರ ಸ್ವೀಕರಿಸಿದರು. ಪದಗ್ರಹಣ ಸಮಾರಂಭದಲ್ಲಿ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ವಿಶ್ವನಾಥ ಶಾಸಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಮುಖಂಡ ಬಸವರಾಜ ನ್ಯಾಮಗೌಡ, ತೌಫೀಕ ಪಾರ್ಥನಳ್ಳಿ, ನಗರಸಭೆ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಇದ್ದರು.
ನಗರಸಭೆ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.