ಸೊರಬ: ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಂಸ್ಕಾರ ಅಳವಡಿಸಿಕೊಂಡಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪೋಕ್ಸೋ, ಬಾಲ್ಯವಿವಾಹ ನಿಷೇಧ, ಎಸ್‌ಸಿ ಮತ್ತು ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಅಮೂಲ್ಯ. ಪಾಲಕರು ಬಹುನಿರೀಕ್ಷೆ ಇಟ್ಟುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಹಂಬಲ ಹೊಂದಿರುತ್ತಾರೆ. ವಿದ್ಯಾರ್ಥಿಗಳು ಪಾಲಕರ ಭರವಸೆಗಳನ್ನು ಹುಸಿಗೊಳಿಸಬಾರದು. ಮೊದಲು ಉತ್ತಮ ಸಂಸ್ಕಾರವಂತರಾಗಬೇಕು. ಒಳ್ಳೆಯ ವಿಷಯಗಳನ್ನು ಆಲಿಸಬೇಕು. ಸಂವಹನ ಕೌಶಲ ಹೊಂದಬೇಕು ಎಂದು ತಿಳಿಸಿದರು.
ಬಾಲ್ಯವಿವಾಹ ಸಮಾಜಕ್ಕೆ ಗಂಡಾತರವಾಗಿದ್ದು, ಕಾನೂನಿನಲ್ಲಿ ಬಾಲ್ಯವಿವಾಹ ತಡೆಗೆ ವಿಶೇಷ ಕಾಯ್ದೆಗಳು ಜಾರಿಯಲ್ಲಿವೆ. 18 ವರ್ಷದೊಳಗಿನ ಮಕ್ಕಳನ್ನು ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧ. ಜಿಲ್ಲೆಯಲ್ಲಿ 247 ಬಾಲ್ಯಗರ್ಭಿಣಿ ಪ್ರಕರಣ ಪತ್ತೆಯಾಗಿರುವುದು ಆತಂಕದ ವಿಷಯ. ಜನವರಿಂದ ಅಕ್ಟೋಬರ್‌ವರೆಗೆ 33 ಬಾಲ್ಯವಿವಾಹ ತಡೆಯಲಾಗಿದ್ದು, 77 ಬಾಲ್ಯವಿವಾಹ ನಡೆದಿವೆ. 185 ಪೋಕ್ಸೋ ಪ್ರಕರಣ ದಾಖಲಾಗಿವೆ.
ಎಂ.ಎಸ್.ಸಂತೋಷ್
ಹಿರಿಯ ಸಿವಿಲ್ ನ್ಯಾಯಾಧೀಶ
ಪ್ರಸ್ತುತ ದಿನಗಳಲ್ಲಿ ಮೊಬೈಲ್ ಅಗತ್ಯ ವಸ್ತು. ಆಧುನಿಕ ತಂತ್ರಜ್ಞಾನವನ್ನು ಶಿಕ್ಷಣಕ್ಕೆ ಪೂರಕವಾಗಿ ಬಳಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡಬಾರದು. ಜಾಲತಾಣಗಳಲ್ಲಿ ಪ್ರಕಟವಾಗುವ ಸುಳ್ಳು ಮಾಹಿತಿಯನ್ನು ಅನ್ಯರೊಂದಿಗೆ ಹಂಚಿಕೊಳ್ಳಬಾರದು. ಅಪರಿಚಿತರೊಂದಿಗೆ ಸ್ನೇಹ ಬೆಳೆಸುವುದು ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು. ಪ್ರತಿದಿನ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಜ್ಞಾನ ವೃದ್ಧಿಯಾಗುವ ಜತೆಯಲ್ಲಿ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿದರೆ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯ. ಗ್ರಾಪಂ, ಪಪಂ, ಪುರಸಭೆ, ಸ್ಥಳೀಯ ಸಂಸ್ಥೆಗಳು, ಪ್ರೌಢಶಾಲಾ ಮಟ್ಟದಲ್ಲಿ ಇಂತಹ ಕಾನೂನು ಅರಿವು ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಎಚ್.ಎಂ.ಸುರೇಶಪ್ಪ, ಸೊರಬ ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ರಾಜು ಕೆ. ಶೇಡಬಾಳಕರ್, ಬಿಇಒ ಆರ್.ಪುಷ್ಪಾ, ಸಿಪಿಐ ಎಲ್.ರಾಜಶೇಖರ್, ವಕೀಲರ ಸಂಘದ ಅಧ್ಯಕ್ಷ ಸಿ.ವೈ.ಅಶೋಕ್, ಸದಸ್ಯೆ ಮಂಜುಳಾ, ಉಪನ್ಯಾಸಕರಾದ ವಿಜಯಕುಮಾರ್ ದಟ್ಟೇರ್, ಚಿದಾನಂದಪ್ಪ, ಸಂಗೀತಾ ಇತರರಿದ್ದರು.