ವಿಜಯಪುರ: ಮಹಾನ್ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರು ಸಂಶೋಧನೆ ಜತೆಗೆ ಸೃಜನ ಸಾಹಿತ್ಯ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡಿದ್ದಾರೆ. ಕೆಟ್ಟಿತು ಕಲ್ಯಾಣ ಎಂಬ ನಾಟಕ ಕೂಡ ಅವರ ಸೃಜನಶೀಲ ಬರಹಗಳ ಸಾಲಿಗೆ ಸೇರುತ್ತದೆ ಎಂದು ಚಡಚಣದ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎಸ್. ಮಾಗಣಗೇರಿ ಹೇಳಿದರು.
ಇಲ್ಲಿನ ರಾಧಾಕೃಷ್ಣನ್ ನಗರದ ಶಿವಬಸವ ಯೋಗಾಶ್ರಮದಲ್ಲ್ಲಿ ಓದುಗರ ಚಾವಡಿ, ರಾಜೇಂದ್ರಕುಮಾರ ಬಿರಾದಾರ ಸಾಂಸ್ಕೃತಿಕ ವೇದಿಕೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರ ಕೆಟ್ಟಿತು ಕಲ್ಯಾಣ ಕೃತಿ ಪರಿಚಯಿಸಿ ಮಾತನಾಡಿದ ಅವರು, ಕೆಟ್ಟಿತು ಕಲ್ಯಾಣ ಕೃತಿಯಲ್ಲಿ ಬಸವಣ್ಣನವರ ಜೀವನ ಮೂರು ಸಂಸ್ಕೃತಿಗಳಲ್ಲಿ ಸಾಗಿ ಬಂದಿದೆ ಎಂದರು.
ಶರಣ ಪರಂಪರೆಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಕಲಬುರ್ಗಿ ಅವರು ಕಲ್ಯಾಣದ ಅವಸಾನದ ದಿನಗಳನ್ನು ನಾಟಕ ರೂಪದಲ್ಲಿ ಹೆಣೆದಿದ್ದಾರೆ. ಶರಣ ಚಳವಳಿ ಅಂತ್ಯದ ಬಗ್ಗೆ ಅನೇಕ ನಾಟಕಗಳು ಬಂದಿವೆಯಾದರೂ ಈ ನಾಟಕ ಬಸವಣ್ಣನ ಸಮಗ್ರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಬಾಲ್ಯದಲ್ಲಿ ಬಸವಣ್ಣ ಜನಿವಾರ ತ್ಯಜಿಸಿ ಒಂದು ಧರ್ಮಕ್ಕೆ ಒಂದು ಸಮಾಜಕ್ಕೆ ಸೀಮಿತನಾಗುವುದು ಬೇಡ ಎಂಬ ಉದಾತ್ತ ನಿಲುವಿನಿಂದ ನಾಟಕ ಪ್ರಾರಂಭವಾಗಿ ಕಲ್ಯಾಣದ ಕ್ರಾಂತಿಯ ಸಮಗ್ರ ಚಿತ್ರಣವನ್ನು ಮೂಡಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಿವಬಸವ ಯೋಗಾಶ್ರಮದ ದಾನಮ್ಮ ತಾಯಿಯವರು ಮಾತನಾಡಿ, ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವನ್ನು ಆಧ್ಯಾತ್ಮಿಕ ಅನುಭವದ ಕೇಂದ್ರವನ್ನಾಗಿಸಿ ಪುರುಷ ಮತ್ತು ಮಹಿಳೆಯನ್ನು ಸಮಾನವಾಗಿ ಕಂಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶರಣು ಸಬರದ ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಉದ್ದೇಶ ಚಾವಡಿಯದಾಗಿದೆ ಎಂದು ತಿಳಿಸಿದರು.
ನಿವೃತ್ತ ಮುಖ್ಯಶಿಕ್ಷಕ ಬಿ. ಕೆ. ಗೋಟ್ಯಾಳ ಮಾತನಾಡಿದರು. ಬಳಗದ ಸದಸ್ಯರಾದ ಮನು ಪತ್ತಾರ, ರಾಜಶೇಖರ ಉಮರಾಣಿ, ಶರಣಗೌಡ ಪಾಟೀಲ, ಡಾ. ಸುಭಾಷಚಂದ್ರ ಕನ್ನೂರ, ಎಂ.ಎಸ್. ಹುಗ್ಗಿ, ಸುರೇಶ ಗಬ್ಬೂರು, ರಾಘವೇಂದ್ರ ಗೊದಿ, ಸಿದ್ದನಗೌಡ ಪಾಟೀಲ ಮತ್ತಿತರರಿದ್ದರು. ಬಸವರಾಜ ಕುಂಬಾರ ನಿರೂಪಿಸಿದರು. ಮೋಹನ ಕಟ್ಟಿಮನಿ ವಂದಿಸಿದರು.