ಲೈಂಗಿಕ ಕಿರುಕುಳ ಕೊಟ್ಟ ಸ್ನೇಹಿತನ ಕೊಂದ ದಂಪತಿ

ಬೆಂಗಳೂರು: ಲೈಂಗಿಕ ಕಿರುಕುಳ ಕೊಡುತ್ತಿದ್ದ ಕ್ಯಾಬ್ ಚಾಲಕನನ್ನು ಪತಿಯ ಜತೆ ಸೇರಿ ಪತ್ನಿ ಬರ್ಬರವಾಗಿ ಹತ್ಯೆ ಮಾಡಿದ್ದು, ರಾಜಗೋಪಾಲನಗರ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

ಹುಳಿಮಾವು ನಿವಾಸಿ ಮಧು (30) ಕೊಲೆಯಾದವ. ಈ ಸಂಬಂಧ ಲಗ್ಗೆರೆಯ ಲವಕುಶನಗರದ ಮೋಹನ್ (29) ಮತ್ತು ರಮ್ಯಾ (25) ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊಳೇನರಸೀಪುರ ತಾಲೂಕಿನ ಗೋಪಾಲಹಳ್ಳಿಯ ಮೋಹನ್ ಮತ್ತು ರಮ್ಯಾ ಲವಕುಶನಗರದಲ್ಲಿ ನೆಲೆಸಿದ್ದರು. ಮಧು ಸಹ ಗೋಪಾಲಹಳ್ಳಿಯವನಾಗಿದ್ದು ಮೋಹನ್ ಸಂಬಂಧಿ ಹಾಗೂ ಆತ್ಮೀಯನಾಗಿದ್ದ. ಮಧು ಹುಳಿಮಾವಿನಲ್ಲಿ ಸ್ನೇಹಿತರ ಜತೆ ನೆಲೆಸಿದ್ದ. ಇಬ್ಬರೂ ಕಾರು ಖರೀದಿಸಿ ಖಾಸಗಿ ಕಂಪನಿಗೆ ಬಿಟ್ಟಿದ್ದರು.

ಮೋಹನ್ ಮನೆಗೆ ಮಧು ಆಗಾಗ ಬರುತ್ತಿದ್ದ. ರಮ್ಯಾ ತಂಗಿ ರಾಜರಾಜೇಶ್ವರಿನಗರದಲ್ಲಿ ಹಾಗೂ ಅಕ್ಕ ಅರಕಲಗೂಡಿನಲ್ಲಿ ನೆಲೆಸಿದ್ದರು. ಅವರಿಬ್ಬರ ಮೊಬೈಲ್ ನಂಬರ್ ಪಡೆದಿದ್ದ ಮಧು, ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ. ನಿನ್ನನ್ನು ಇಷ್ಟಪಟ್ಟಿದ್ದೇನೆ. ನನ್ನ ಜತೆ ಬಾ ಎಂದು

ಒತ್ತಾಯಿ ಸುತ್ತಿದ್ದ. ಇದೇ ರೀತಿ ರಮ್ಯಾಗೂ ಕರೆ ಮಾಡಿ ‘ನಾನು ಹೇಳಿದಂತೆ ಕೇಳದಿದ್ದರೆ ಆರೋಪ ಹೊರಿಸಿ ಮರ್ಯಾದೆ ತೆಗೆಯುತ್ತೇನೆ’ ಎಂದು ಬೆದರಿ ಸುತ್ತಿದ್ದ. ಈ ವಿಚಾರವನ್ನು ರಮ್ಯಾ ತನ್ನ ಪತಿ ಬಳಿ ಹೇಳಿದ್ದಳು. ಮಧುವಿಗೆ ಮೋಹನ್ ದಂಪತಿ ಒಮ್ಮೆ ಎಚ್ಚರಿಕೆ ನೀಡಿದ್ದರು. ಆದರೆ, ಆತ ಅದೇ ಚಾಳಿ ಮುಂದುವರಿಸಿದ್ದ ಎನ್ನಲಾಗಿದೆ.

ಕಬ್ಬಿಣದ ಸರಳಿನಿಂದ ಏಟು ತಿಂದು ಸಾವು

ಶನಿವಾರ (ಏ.13) ಮನೆ ಸಮೀಪದ ಬಾರ್​ನಲ್ಲಿ ಮಧು ಮತ್ತು ಮೋಹನ್ ಮದ್ಯ ಸೇವಿಸಿದ್ದರು. ಸಹೋದರಿ ಮನೆಗೆ ಇತ್ತೀಚೆಗೆ ರಮ್ಯಾ ಅಕ್ಕ ಸಹ ಬಂದಿದ್ದರು. ಸಂಜೆ 5 ಗಂಟೆಗೆ ಪಾನಮತ್ತ ಮಧು ಸ್ನೇಹಿತನ ಜತೆ ಮನೆಗೆ ಬಂದಿದ್ದ. ಕೊಠಡಿಯಲ್ಲಿ ಮಲಗಿದ್ದ ರಮ್ಯಾ ಅಕ್ಕನ ಬಳಿ ತೆರಳಿ ಅಲ್ಲಿ ಮಲಗಿದ್ದ. ಗಾಬರಿಗೊಂಡು ಮೇಲೆದ್ದ ಆಕೆ ಮಧುವನ್ನು ಪ್ರಶ್ನಿಸಿದ್ದರು. ಕುಪಿತಗೊಂಡ ಮಧು, ಆಕೆಯ ಮುಖಕ್ಕೆ ಗುದ್ದಿ ಗಾಯಗೊಳಿಸಿದ್ದಾನೆ.

ಅಡುಗೆ ಮನೆಯಲ್ಲಿದ್ದ ರಮ್ಯಾ ಕೂಡಲೇ ಓಡಿಬಂದು ಅಕ್ಕನ ರಕ್ಷಣೆಗೆ ನಿಂತಾಗ ಆಕೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಪತ್ನಿಯ ರಕ್ಷಣೆಗೆ ಬಂದ ಮೋಹನ್, ಆತನನ್ನು ಹಿಂದಿನಿಂದ ಹಿಡಿದುಕೊಂಡಿದ್ದಾನೆ. ಸಿಟ್ಟಿಗೆದ್ದ ರಮ್ಯಾ ರಾಡ್​ನಿಂದ ಮಧು ತಲೆಗೆ ಹೊಡೆದಿದ್ದಾಳೆ. ಚೀರಾಟ ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ನಮ್ಮ-100ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಮಧು ಮೃತಪಟ್ಟಿದ್ದ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 Replies to “ಲೈಂಗಿಕ ಕಿರುಕುಳ ಕೊಟ್ಟ ಸ್ನೇಹಿತನ ಕೊಂದ ದಂಪತಿ”

  1. ಜನರಲ್ಲಿ ಉತ್ತಮ ಸಂಸ್ಕಾರ ತರುವುದು ಶಾಲೆಗಳ, ಗುರು ಹಿರಿಯರ, ಸ್ನೇಹಿತರ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ. ಎಲ್ಲಿ ಸಂಸ್ಕಾರ ಇರುವುದೂ ಅಲ್ಲಿ ವಂಚನೆಯ ಗುಣಗಳು, ಹಾದರತನ, ದೌರ್ಜನ್ಯ, ದುಷ್ಟತನ, ಅಪ್ರಾಮಾಣಿಕತೆ, ಸ್ವಾರ್ಥತೆ, ದುರಾಲೋಚನೆ, ದುರಹಂಕಾರ, ಒರಟುತನ, ಕ್ರೌರ್ಯತೆ, ಪೀಡಕತನ, ಕುಟಿಲತೆ, ಧೂರ್ತತೆ, ವಿಚಾರಶೂನ್ಯತೆ, ದುರಾಸೆಗಳು ಇರುವುದಿಲ್ಲ. ಇಂತಹ ಕಹಿ ಘಟನೆಗಳು ನಡೆಯುವುದಿಲ್ಲ. – ಗುಂಜ್ಮ೦ಜ (GUNJMANJA)

Comments are closed.