More

    ಗುರಿ ತಲುಪದ ಪೌಷ್ಠಿಕ ಆಹಾರ

    ಮಡಿಕೇರಿ:

    ರಾಜ್ಯದ ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳು ಹಾಗೂ ಗಿರಿಜನರ ಆರೋಗ್ಯವಂತ ಬದುಕಿಗಾಗಿ ಸರ್ಕಾರದಿಂದ ಪೌಷ್ಠಿಕ ಆಹಾರ ಪೂರೈಕೆ ಆಗುತ್ತಿದೆ. ಆದರೆ ಬಹುತೇಕ ಕಡೆಗಳಲ್ಲಿ ಈ ಆಹಾರ ಪದಾರ್ಥಗಳು ಫಲಾನುಭವಿಗಳ ಕೈ ತಪ್ಪುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ತಮಗೆ ಸಿಗುವ ಅಕ್ಕಿ ಸೇರಿದಂತೆ ಇತರ ಪದಾರ್ಥಗಳನ್ನು ಹಲವರು ಮಾರಾಟ ಮಾಡುವ ಮೂಲಕ ಸರ್ಕಾರದ ಆಶಯವನ್ನೇ ಮಣ್ಣುಪಾಲು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಪೂರೈಕೆ ಆಗುವ ಆಹಾರ ಪದಾರ್ಥಗಳನ್ನು ಅಂಗನವಾಡಿ ಮೂಲಕ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ. ಆದರೆ ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶದಲ್ಲಿ ನೆಲೆ ಕಂಡುಕೊAಡಿರುವ ಬಹುತೇಕ ಗಿರಿಜನರು, ಆದಿವಾಸಿಗಳಿಗೆ ಮಳೆಗಾಲದ ಅವಧಿಯಲ್ಲಿ ಆಹಾರದ ಕೊರತೆ ಉಂಟಾಗುತ್ತದೆ. ಉಳಿದ ದಿನಗಳಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ಸಿಗುವುದಿಲ್ಲ.

    ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶದಲ್ಲಿ ವಾಸ ಮಾಡುವ ಆದಿವಾಸಿಗಳು ಆಹಾರದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ಈ ಮೊದಲಿನ ಕಾಂಗ್ರೆಸ್ ಸÀರ್ಕಾರದ ಅವಧಿಯಲ್ಲಿ ಇಂಥವರಿಗೆ ಉಚಿತವಾಗಿ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಪೂರೈಕೆ ಯೋಜನೆ ಜಾರಿ ಮಾಡಲಾಯಿತು. ಮೊದಲು ವರ್ಷದಲ್ಲಿ ೬ ತಿಂಗಳು ಮಾತ್ರ ಆಹಾರ ವಸ್ತುಗಳನ್ನು ತಲುಪಿಸಲಾಗುತ್ತಿತ್ತು. ಈಗ ವರ್ಷದಲ್ಲಿ ೬ ಬಾರಿ ಪ್ರತಿ ೪೫ ದಿನಗಳಿಗೆ ಒಮ್ಮೆ ಪೂರೈಕೆ ಮಾಡಲಾಗುತ್ತಿದೆ.

    ಯೋಜನೆಯ ಆರಂಭದ ದಿನಗಳಲ್ಲಿ ೧೫ ಕೆಜಿ ಅಕ್ಕಿ, ೫ ಕೆಜಿ ತೊಗರಿ ಬೇಳೆ, ೪೫ ಮೊಟ್ಟೆ, ಎರಡು ಕೆ.ಜಿ. ತುಪ್ಪ, ೨ ಲೀ. ಎಣ್ಣೆ, ೩ ಕೆ.ಜಿ. ಕಡ್ಲೆಬೇಳೆ, ೨ ಕೆ.ಜಿ. ಹುರುಳಿ, ೧ ಕೆ.ಜಿ. ಹೆಸರುಕಾಳು, ೪ ಕೆ.ಜಿ. ಸಕ್ಕರೆ ಸಿಗುತ್ತಿತ್ತು. ಈ ಪ್ರಮಾಣ ಈಗ ಕಡಿತ ಮಾಡಲಾಗಿದ್ದು, ೮ ಕೆ.ಜಿ. ಅಕ್ಕಿ, ೩ ಕೆ.ಜಿ. ತೊಗರಿ ಬೇಳೆ, ೧ ಕೆ.ಜಿ. ಕಡ್ಲೆ, ೧ ಕೆ.ಜಿ. ಹುರುಳಿ ಅಥವಾ ೧ ಕೆ.ಜಿ. ಹೆಸರು ಕಾಳು ಆಥವಾ ೧ ಕೆ.ಜಿ. ಅಲಸಂದೆ ಕಾಳು, ೧ ಕೆ.ಜಿ. ಸಕ್ಕರೆ ಅಥವಾ ೨ ಕೆ.ಜಿ. ಬೆಲ್ಲ, ೩೦ ಮೊಟ್ಟೆ, ಅರ್ಧ ಕೆ.ಜಿ. ತುಪ್ಪ ಕೊಡಲಾಗುತ್ತಿದೆ.

    ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ ಮೂಲಕ ಬರುವ ಆಹಾರ ಪದಾರ್ಥಗಳನ್ನು ಅಂಗನವಾಡಿಗಳ ಸಹಾಯದಿಂದ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ. ಒಂದು ಫಲಾನುಭವಿ ಕುಟುಂಬಕ್ಕೆ ಆಹಾರ ಪದಾರ್ಥ ತಲುಪಿಸಲು ಇಲಾಖೆಯಿಂದ ಅಂಗನವಾಡಿಗೆ ೫ ರೂಪಾಯಿ ಕೊಡಲಾಗುತ್ತದೆ. ಅಂಗನವಾಡಿಗೆ ಬರುವ ಆಹಾರ ಪದಾರ್ಥಗಳನ್ನು ನಿಗದಿಯಂತೆ ಆದಿವಾಸಿ ಕುಟುಂಬಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ. ಆದರೆ ಬಹುತೇಕ ಫಲಾನುಭವಿಗಳು ತಮಗೆ ಸಿಗುವ ಆಹಾರ ಪದಾರ್ಥಗಳನ್ನು ಅಂಗನವಾಡಿಯಿAದ ಪಡೆದುಕೊಂಡು ನೇರವಾಗಿ ಬೇರೆಯವರಿಗೆ ಮಾರಾಟ ಮಾಡುತ್ತಾರೆ ಎನ್ನುವ ಆರೋಪಗಳಿವೆ.

    ಸÀರ್ಕಾರ ಉಚಿತವಾಗಿ ಪೂರೈಸಿದ ಪೌಷ್ಠಿಕ ಆಹಾರ ಪದಾರ್ಥಗಳನ್ನು ಆದಿವಾಸಿಗಳಿಂದ ಕಡಿಮೆ ದರಕ್ಕೆ ಖರೀದಿಸಿ ಬೇರೆಡೆಗೆ ತಲುಪಿಸುವ ಏಜೆಂಟರು ಗಿರಿಜನ ಹಾಡಿಗಳ ಬಳಿ ಹುಟ್ಟಿಕೊಂಡಿದ್ದಾರೆ. ಅಂಗನವಾಡಿಗೆ ಆಹಾರ ವಸ್ತುಗಳು ಪೂರೈಕೆ ಆಗುತ್ತಿದ್ದಂತೆಯೇ ಇವರುಗಳು ಎಚ್ಚೆತ್ತುಕೊಳ್ಳುತ್ತಾರೆ. ಕೂಡಲೇ ಫಲಾನುಭವಿಗಳನ್ನು ಸಂಪರ್ಕಿಸಿ ಅಂಗನವಾಡಿಯಿAದ ಪಡೆದುಕೊಳ್ಳುವ ಆಹಾರ ಪದಾರ್ಥಗಳು ಅವರ ಮನೆ ತಲುಪುವುದಕ್ಕೆ ಮೊದಲೇ ಖರೀದಿಸಿಬಿಡುತ್ತಾರೆ ಎನ್ನಲಾಗುತ್ತಿದೆ.
    ಈ ಬಗ್ಗೆ ಐಟಿಡಿಪಿ ಇಲಾಖೆಯಿಂದ ಫಲಾನುಭವಿಗಳಿಗೆ ಜಾಗೃತಿ ಮೂಡಿಸುವ ಪ್ರಯತ್ನ ಹಲವು ಬಾರಿ ನಡೆಸಲಾಗಿದೆ. ಮಾರಾಟ ಮಾಡಿದರೆ ಆಹಾರ ಕಡಿತದ ಎಚ್ಚರಿಕೆ ನೀಡಲಾಗಿದೆ. ಆದರೂ ಕೆಲವರು ತಮ್ಮ ಚಟ ಮುಂದುವರಿಸಿದ್ದಾರೆ. ಇವರನ್ನು ಸರಿದಾರಿಗೆ ತರುವುದು ಕಷ್ಟವಿದೆ ಎಂದು ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

    ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ವಾಸಿಸುವ ಮೂಲನಿವಾಸಿ ಪಂಗಡದವರಾದ ಕೊರಗ, ಜೇನುಕುರುಬ ಹಾಗೂ ಇತರೆ ಪರಿಶಿಷ್ಟ ಪಂಗಡದವರಾದ ಕಾಡುಕುರುಬ, ಸೋಲಿಗ, ಯರವ, ಮಲೆಕುಡಿಯ, ಕುಡಿಯ, ಸಿದ್ದಿ, ಗೌಡಲು, ಗೊಂಡ ಹಾಗೂ ಹಸಲರು ಜನಾಂಗದವರಿಗೆ ಪೌಷ್ಠಿಕ ಆಹಾರ ಕೊಡಲಾಗುತ್ತಿದೆ. ಹೆಚ್ಚಿನ ಫಲಾನುಭವಿಗಳು ತಮಗೆ ಸಿಕ್ಕಿದ ಆಹಾರ ಪದಾರ್ಥಗಳನ್ನು ಬಳಸದೆ ಹಾಳು ಮಾಡುತ್ತಿದ್ದಾರೆ. ಬೇಳೆಯ ಪ್ರಮಾಣ ಹೆಚ್ಚಾಯಿತು. ಕಡಿಮೆ ಕೊಡಿ. ಅಕ್ಕಿಯ ಪ್ರಮಾಣ ಕಡಿಮೆ ಆಯ್ತು ಹೆಚ್ಚು ಕೊಡಿ ಎನ್ನುವ ಬೇಡಿಕೆಗಳೂ ಇದೆ. ಇದನ್ನು ಮುಂದಿನ ಸಭೆಯಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

    ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಮೂಲನಿವಾಸಿ ಪಂಗಡ ಮತ್ತು ಇತರೆ ಪರಿಶಿಷ್ಟ ಪಂಗಡದವರಿಗೆ ಮಳೆಗಾಲದಲ್ಲಿ ಜೀವನ ನಿರ್ವಹಣೆಗೆ ತೊಂದರೆಯಾಗಿ, ಅಪೌಷ್ಠಿಕತೆಯಿಂದ ಬಳಲುವುದನ್ನು ತಪ್ಪಿಸಲು ೪೫ ದಿನಗಳಿಗೊಮ್ಮೆ ವರ್ಷಕ್ಕೆ ೬ ಬಾರಿ ಪ್ರತಿ ಕುಟುಂಬಕ್ಕೆ ಪೌಷ್ಠಿಕ ಆಹಾರ ಪದಾರ್ಥಗಳನ್ನು ಪಡಿತರ ಆಹಾರ ಧಾನ್ಯದ ಜೊತೆಗೆ ಹೆಚ್ಚುವರಿಯಾಗಿ ಉಚಿತವಾಗಿ ನೀಡಲಾಗುತ್ತಿದೆ. ಇದರ ದುರುಪಯೋಗ ತಡೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    • ಬಿ. ನಾಗೇಂದ್ರ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ
    • ಇದೊAದು ಉತ್ತಮ ಯೋಜನೆ. ನಮ್ಮಲ್ಲಿ ನಮಗೆ ಮತ್ತು ಮಗನ ಕುಟುಂಬಕ್ಕೆ ಈ ಸವಲತ್ತು ಸಿಗುತ್ತಿದೆ. ಇದರಿಂದ ನಮಗೆ ತುಂಬಾ ಅನುಕೂಲ ಆಗಿದೆ. ಮೊದಲು ಆಹಾರ ವಸ್ತುಗಳ ಗುಣಮಟ್ಟ ಚೆನ್ನಾಗಿರಲಿಲ್ಲ. ಈಗ ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಕೊಡುತ್ತಿದ್ದಾರೆ. ಮೊಟ್ಟೆ, ಅಕ್ಕಿ, ಎಣ್ಣೆ ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ. ಕೆಲವರು ಸರ್ಕಾರದ ಈ ಸವಲತ್ತು ದುರುಪಯೋಗ ಮಾಡುತ್ತಿದ್ದಾರೆ. ಇದು ಸರಿಯಲ್ಲ.
    • ಮಹೇಶ್, ಯೋಜನೆಯ ಫಲಾನುಭವಿ, ಬಸವನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts