More

  ಇತಿಹಾಸಕ್ಕೆ ಜೀವಂತಿಕೆ ನೀಡುವ ಕಾದಂಬರಿ

  ಕನ್ನಡದ ಖ್ಯಾತ ಕಥೆಗಾರ ವಸುಧೇಂದ್ರ ಅವರ ಹೊಸ, ಬೃಹತ್ ಕಾದಂಬರಿ ಜ. 5ರಂದು (ಭಾನುವಾರ) ಬಿಡುಗಡೆಯಾಗುತ್ತಿದೆ. ವಿಜಯನಗರ, ಬಹಮನಿ, ಪೋರ್ಚುಗೀಸ್ ಕಾಲದ ಕಥಾವಸ್ತು ಹೊಂದಿರುವ ಈ ಕಾದಂಬರಿ ಲೋಕಾರ್ಪಣೆಗೆ ಮೊದಲೇ ಸಂಚಲನ ಮೂಡಿಸಿದೆ. ಕಥನದ ವಸ್ತು, ಪಾತ್ರ ಸೃಜನೆ, ಚಾರಿತ್ರಿಕ ಬದ್ಧತೆ, ಆಳರಸರ ಬಗೆಗಿನ ಒಳನೋಟಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಹುಟ್ಟುಹಾಕಿರುವ ಕಾದಂಬರಿ ಇದು.

  ಕಾದಂಬರಿಯೊಂದು ಹಳತೇ ಆಗಿರಲಿ ಅಥವಾ ಹೊಸತೇ ಆಗಲಿ ಅದು ‘ಗತ’ವಾಗಿರಲು ಸಾಧ್ಯವಿಲ್ಲ. ಆ ಕಾರಣ ಕೃತಿಯೊಂದನ್ನು ‘ಐತಿಹಾಸಿಕ ಕಾದಂಬರಿ’ ಎನ್ನುವುದು ಪೂರ್ಣವಾಗಿ ಸರಿ ಎನ್ನಲಾಗದು. ಹೀಗಾಗಿ ಚರಿತ್ರೆಗೆ ಸಂಬಂಧಿಸಿದ ಕಥನವನ್ನು ‘ಪೀರಿಯಡ್ ಫಿಕ್ಷನ್’ ಎಂದು ಕರೆಯುವುದು ರೂಢಿಯಲ್ಲಿದೆ. ಇಂಗ್ಲಿಷಿನಲ್ಲಿ ಅದು ಸಾಕಷ್ಟು ಪ್ರಚಲಿತ ಪ್ರಕಾರವೂ ಹೌದು. ಕನ್ನಡದಲ್ಲಿಯೂ ಇವುಗಳ ಪರಂಪರೆ ದೊಡ್ಡದಿದೆ. ಮದಕರಿ ನಾಯಕನ ಕತೆಯುಳ್ಳ ‘ದುರ್ಗಾಸ್ತಮಾನ’, ಟಿಪ್ಪು ಸುಲ್ತಾನನ ಸುತ್ತ ಹೆಣೆದ ‘ದೌಲತ್’, ಮರಾಠಿಯಿಂದ ಅನುವಾದಿತ ‘ದಂಗೆಯ ದಿನಗಳು’ ಇವೆಲ್ಲ ಆ ಸಾಲಿಗೆ ಸೇರಬಲ್ಲ ಕಾದಂಬರಿಗಳು. ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ಯೂ ಇದೇ ವೈಖರಿಯದು. ಇತ್ತೀಚೆಗೆ ಇಂಥ ಪ್ರಯೋಗಗಳು ಕನ್ನಡದಲ್ಲಿ ಕಡಿಮೆಯಾಗುತ್ತಿವೆಯೋ ಎನ್ನಿಸುವ ಹೊತ್ತಿನಲ್ಲಿ, ವಸುಧೇಂದ್ರರ ‘ತೇಜೋ-ತುಂಗಭದ್ರಾ’ ಆ ಕೊರತೆಯನ್ನು ನೀಗಿಸಿದೆ.

  ಭಾರತದ ಮಸಾಲೆ ಪದಾರ್ಥಗಳು ದೂರದ ಪೋರ್ಚುಗಲ್ ದೇಶಕ್ಕೆ ಹಿಡಿಸಿದ ಹುಚ್ಚಿನ ಕಥೆಯಿಂದ ಶುರುವಾಗುವ ಈ ಕಾದಂಬರಿ, ನಂತರದ ಪುಟಗಳಲ್ಲಿ ಲಂಘಿಸುವ ಆಯಾಮ ಹಾಗೂ ಪಡೆದುಕೊಳ್ಳುವ ವಿಸ್ತಾರ ಬೆರಗುಗೊಳಿಸುತ್ತದೆ. ಅಲ್ಬೂಕರ್ಕನ ಸಾಗರೋಲ್ಲಂಘನ, ಆದಿಲ್​ಷಾನ ರಣನೀತಿ, ಕೃಷ್ಣದೇವರಾಯನ ರಾಜ್ಯಭಾರದ ರೀತಿ-ರಿವಾಜುಗಳು ಇಲ್ಲಿ ಕಾಣಿಸಲ್ಪಟ್ಟ ಬಗೆ ಗಮನಾರ್ಹ. ಈ ಕಾದಂಬರಿಯ ವಿಸõತ ಕತೆಯನ್ನು ಪೊರೆಯಲು ಸೃಜಿಸಲ್ಪಟ್ಟ ಅಸಂಖ್ಯ ಪಾತ್ರಗಳು, ಹರವನ್ನು ನಿರ್ವಹಿಸಲು ಅಳವಡಿಸಿದ ಹಲವಾರು ಘಟನೆಗಳು ಎಲ್ಲಿಯೂ ಲೇಖಕನ ಹದ ತಪ್ಪಿಲ್ಲ. ತನ್ನ ಗಟ್ಟಿತನ ಬಿಟ್ಟುಕೊಟ್ಟಿಲ್ಲ. ಸಮುದ್ರ ಯಾನ, ಮುದ್ರಣ ಯಂತ್ರದ ಆವಿಷ್ಕಾರ, ಧರ್ಮದ ಹೆಸರಿನಲ್ಲಿ ಹತ್ಯಾಕಾಂಡ, ಊರಿನ ಹೆಸರು ಬದಲಿಸುವ ರಾಜಕೀಯ, ಆ ಕಾಲದ ‘ಹಾರ್ಸ್ ಟ್ರೇಡಿಂಗ್’ ಇತ್ಯಾದಿ ಸಂಗತಿಗಳು ಅಚ್ಚರಿಯಿಂದ ಓದಿಸಿಕೊಂಡರೆ; ವ್ಯಕ್ತಿಯೋರ್ವ ‘ಲೆಂಕ’ನಾಗುವ ಪ್ರಸಂಗ ಮನಸನ್ನು ಕಲಕಿಬಿಡುತ್ತದೆ. ರಾಜ-ಮಹಾರಾಜರುಗಳ ಚರಿತ್ರೆಯನ್ನು ಸಾರುವ ಹಲವು ಗ್ರಂಥಗಳಲ್ಲಿ, ಇತಿಹಾಸದ ಅನೇಕ ಪುಟಗಳಲ್ಲಿ ಈ ಲೆಂಕತನದಂತಹ ಕ್ರೂರ ಪದ್ಧತಿ ನಮ್ಮ ಕಣ್ತಪ್ಪಿ ಹೋದದ್ದೇಕೆ ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ. ಸತಿಯನ್ನು ಸಜೀವವಾಗಿ ಹೂಳುವ ಅಮಾನುಷ ಕ್ರಿಯೆ, ದೀರ್ಘಾ ವಧಿಯ ನೌಕಾ ಪಯಣದ ಕರುಣಾಜನಕ ಪ್ರಸಂಗಗಳು, ಧರ್ಮ ದುರಾಸೆಗಳ ಕರಾಳ ಮುಖವನ್ನು ಅನಾವರಣಗೊಳಿಸುತ್ತವೆ.

  ‘ಅಧ್ಯಯನ’ ಪೀರಿಯಡ್ ಕಾದಂಬರಿಯೊಂದರ ರಚನೆಯ ಮೂಲಸ್ಥಂಭ. ಆದರೆ ಆ ಅಧ್ಯಯನ ವರ್ತಮಾನದ ತಳಹದಿಯಲ್ಲೇ ನಡೆಯಬೇಕಾದುದು ಅಗತ್ಯ. ಹಾಗಾದಾಗ ಮಾತ್ರ ಯಾವುದೋ ಕಾಲಘಟ್ಟದ ಕಥೆಯೊಂದು ಇಂದಿಗೂ ಪ್ರಸ್ತುತವೆನಿಸಲು ಸಾಧ್ಯ. ಎರಡನೆಯದಾಗಿ ವಿವರಗಳು. ಇಂದಿಗೆ ಸಲ್ಲದ ಕಾಲದ ಕಥೆಯನ್ನು ಕಟ್ಟಿಕೊಡುವಾಗ ವಿವರಗಳು ಹೆಚ್ಚಿನ ಮಹತ್ವ ವಹಿಸುತ್ತವೆ. ಇಂತಹ ಕಾದಂಬರಿಯಲ್ಲಿ ವಿವರಗಳನ್ನು ಬಳಸಿಕೊಳ್ಳುವು ದೆಂದರೆ ಸಡಗರದ ಮದುವೆಯಲ್ಲಿ ಗೆಳತಿಯ ಫೋಟೋ ತೆಗೆಯುವ ಕಷ್ಟದಂತೆ.

  ಫೋಟೋದಲ್ಲಿ ಮದುವೆ ಸಂಭ್ರಮವೂ ಎದ್ದು ಕಾಣಬೇಕು. ಹಿನ್ನೆಲೆಯ ಹೂವು, ಮಂಟಪ, ದೀಪ, ಪತಾಕೆಗಳೆಲ್ಲವೂ ಬೇಕು; ಆದರೆ ಅತ್ತಿಂದಿತ್ತ ಓಡಾಡುವ ಜನರು ಮಾತ್ರ ಬೇಡ. ಮದುವೆಯ ಮನೆಯಲ್ಲಿ ಜನರನ್ನು ದೂರ ಮಾಡುವುದಾದರೂ ಹೇಗೆ? ಅಥವಾ ಅವರೇ ದೂರಾಗುವವರೆಗೂ ಕಾಯಲು ಸಾಧ್ಯವೇ? ಈ ಎಲ್ಲ ತಾಪತ್ರಯಗಳ ನಡುವೆಯೂ ಗೆಳತಿಯ ಫೋಟೋ ಚಂದ ಬರಬೇಕಾದ ಜರೂರು ಬೇರೆ. ಈ ಸಂದರ್ಭದಲ್ಲಿ ಫೋಟೋಗ್ರಾಫರ್ ಬಳಸುವ ತಂತ್ರ ಹಾಗೂ ಜಾಣ್ಮೆಯನ್ನೆ, ಲೇಖಕನಾದವ ಕಾದಂಬರಿಯಲ್ಲಿ ವಿವರಗಳನ್ನು ಬಳಸಿಕೊಳ್ಳುವಲ್ಲಿಯೂ ಅನ್ವಯಿಸಬೇಕಾಗುತ್ತದೆ. ಇಲ್ಲದಿದ್ದರೆ ಕಥನದ ಶಕ್ತಿಯಾಗಬೇಕಾಗಿದ್ದ ವಿವರಗಳು ಅದರ ದೌರ್ಬಲ್ಯವಾಗುವ ಸಾಧ್ಯತೆಯೂ ಇದೆ. ಈ ಕಾದಂಬರಿಯ ರಚನೆಯಲ್ಲಿ ವಸುಧೇಂದ್ರರ ಆಳವಾದ ಅಧ್ಯಯನ ಹಾಗೂ ಸಂಶೋಧನೆ ಸ್ಪಷ್ಟವಾಗಿ ಗೋಚರಿಸುತ್ತದೆ. ನಮ್ಮದಲ್ಲದ ಕಾಲದ ಅಂಶಗಳನ್ನು ತಮ್ಮ ಕಥೆಗೆ ಒಗ್ಗಿಸಿಕೊಂಡ ಕುಸುರಿ, ಕಾಯ್ದುಕೊಂಡ ಸಮತೋಲನ ಪ್ರಾಧಾನ್ಯವೆನಿಸುತ್ತದೆ. ಹಾಗಂತ ಅಲ್ಲಲ್ಲಿ ವಿವರಗಳನ್ನು ಹೃಸ್ವಗೊಳಿಸಬಹುದಿತ್ತು ಅನ್ನಿಸುವುದೂ ಸುಳ್ಳಲ್ಲ. ಆದರೆ- ನಾವೆಯಲ್ಲಿ ಹಸಿವಾದಾಗ ಇಲಿಯನ್ನೇ ಬೇಯಿಸಿ ತಿನ್ನುವ, ಕಾಡಿನಲ್ಲಿ ದೊಂದಿಯ ಬೆಂಕಿ ಆರದಂತೆ ನೋಡಿಕೊಳ್ಳಲು ಪರದಾಡುವ, ಪರ್ಷಿಯನ್ ಕುದುರೆಗಳು ಭಾರತದ ನೆಲದಲ್ಲಿ ಸಂತಾನೋತ್ಪತ್ತಿಯನ್ನೇ ಮಾಡದಂತಹ ಹತ್ತು-ಹಲವಾರು ಸಂಗತಿಗಳು ಓದುಗನಿಗೆ ಕಟ್ಟಿಕೊಡುವ ಅನುಭವವನ್ನು ಅಲ್ಲಗಳೆಯುವಂತಿಲ್ಲ. ಇನ್ನೊಂದೆಡೆ, ವಿಜಯನಗರದ ಕಥೆಗಿಂತ ಪೋರ್ಚುಗೀಸರ ವಗೈರೆಗಳೇ ಹೆಚ್ಚು ರೋಚಕವಾಗಿ ಕಂಡರೆ ಅದು ನನ್ನಂಥ ಓದುಗನ ಹಿಸ್ಟರಿ ಕುರಿತ ಪೂರ್ವಗ್ರಹವಾಗಿರಲೂ ಸಾಕು.

  ಮೆಣಸಿನ ಕಾಳುಗಳನ್ನರಸಿ ಜೀವವನ್ನೇ ಪಣಕ್ಕಿಟ್ಟು ಭಾರತಕ್ಕೆ ಬರುವ ಪೋರ್ಚುಗೀಸರು, ಇಲ್ಲಿಯ ಜನ ಎಂದೂ ಕೇಳರಿಯದ ಮೆಣಸಿನ ಬೆಳೆಯನ್ನು ಕೊಟ್ಟು ಹೋಗುವ ಅಚ್ಚರಿಯಿದೆಯಿಲ್ಲಿ. ಅಧಿಕಾರಕ್ಕಾಗಿ ಯುದ್ಧ, ಹಣಕ್ಕಾಗಿ ವಲಸೆ, ಮತಕ್ಕಾಗಿ ಮಾರಣ ಹೋಮ, ಪ್ರೀತಿಗಾಗಿ ತ್ಯಾಗ ಇವೆಲ್ಲವುಗಳನ್ನು ವರ್ಣಿಸುತ್ತಲೇ, ಈ ಜಗದಲ್ಲಿ ಎಲ್ಲವೂ ಲೊಳಲೊಟ್ಟೆ ಎಂದು ಸಾರುವ ಪರತತ್ವವಿದೆ ಇಲ್ಲಿ. ಜಗದೆಲ್ಲ ಅಡರು ತೊಡರುಗಳನ್ನು ಮೀರಿ ನಿಲ್ಲುವುದು ಮಾನವೀಯತೆಯೊಂದೇ ಎಂದು ತೋರುವ ಮೌಲ್ಯವಿದೆಯಿಲ್ಲಿ. ‘ಸರ್ವನಾಶವಾಗಿ ಹೋಗಲಿ’ ಎಂದು ತಾನು ಶಾಪ ಕೊಟ್ಟ ದೇಶವನ್ನೇ ಅರಸಿ ಬರುವ ಹೆಣ್ಣೊಬ್ಬಳ ಅಸಹಾಯಕತೆ, ‘ಸತಿ’ಯನ್ನು ಧಿಕ್ಕರಿಸಿ ಉರಿವ ಚಿತೆಯೆದುರೇ ನಡೆದು ಬರುವ ಇನ್ನೊಬ್ಬಳ ಗಟ್ಟಿತನಗಳ ಮುಖಾಮುಖಿಯಿದೆಯಿಲ್ಲಿ. ಹೀಗೆ- ಪೋರ್ಚುಗಲ್ಲಿನ ಲಿಸ್ಬನ್ ನಗರದಲ್ಲಿ ಹರಿಯುವ ತೇಜೋ ನದಿ, ಕರ್ನಾಟಕದ ವಿಜಯನಗರದ ತುಂಗಭದ್ರೆಯಲ್ಲಿ ಸಮ್ಮಿಳನಗೊಳ್ಳುವ ಸೋಜಿಗವನ್ನು ಅವುಗಳ ದಡಗುಂಟ ನಡೆದು, ಚರಿತ್ರೆಯ ತಲ್ಲಣಗಳಿಗೆ ಸಾಕ್ಷಿಯಾಗುತ್ತಾ ಅನುಭವಿಸುವ ಮುದವನ್ನು ಈ ಕಾದಂಬರಿ ಓದುಗನಿಗೆ ದೊರಕಿಸಿಕೊಡಬಲ್ಲದು.

  ಇತಿಹಾಸ ಜನರೇನು ಮಾಡಿದರು ಎನ್ನುವುದನ್ನು ಹೇಳುತ್ತದೆಯೇ ಹೊರತು, ಜನರ ಭಾವನೆಗಳನ್ನು ಅರುಹುವುದಿಲ್ಲ. ಆ ಕೆಲಸವನ್ನು ಮಾಡುವುದು ಐತಿಹಾಸಿಕ ಕಾದಂಬರಿ ಅನ್ನುವ ಒಂದು ಮಾತಿದೆ. ತಮ್ಮ ‘ದುರ್ಗಾಸ್ತಮಾನ’ ಕಾದಂಬರಿಯ ಮುನ್ನುಡಿಯಲ್ಲಿ ತರಾಸು- ‘ಚಿತ್ರದುರ್ಗವೆಂದರೆ ಅದೊಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ. ನಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು’ ಎಂಬುದಾಗಿ ಹೇಳುತ್ತಾರೆ. ವಸುಧೇಂದ್ರರ ಕಾದಂಬರಿಯನ್ನು ಓದುವಾಗ ಈ ಮಾತುಗಳೆಲ್ಲ ಮತ್ತೆ ನೆನಪಿಗೆ ಬರುತ್ತವೆ. ಇಲ್ಲಿಯ ವಿಜಯನಗರ, ಗೋವಾ, ಲಿಸ್ಬನ್ ಕೇವಲ ಇತಿಹಾಸದಲ್ಲಿ ದಾಖಲಾದ ಊರುಗಳಾಗದೇ, ಅದರ ಮಣ್ಣಿನ ವಾಸನೆಯನ್ನೂ ನಮಗೆ ದಕ್ಕಿಸಿಕೊಡುತ್ತದೆ. ಗೆಬ್ರಿಯಲ್, ಬೆಲ್ಲಾ, ಕೇಶವ, ಹಂಪಮ್ಮರ ಎದೆಬಡಿತಗಳು ಓದುಗನ ಮನಸ್ಸನ್ನೂ ಆವರಿಸುತ್ತವೆ. ಈ ನಿಟ್ಟಿನಲ್ಲಿ ‘ತೇಜೋ-ತುಂಗಭದ್ರಾ’ ಇತಿಹಾಸಕ್ಕೊಂದು ಜೀವಂತಿಕೆ ತಂದುಕೊಟ್ಟ ಕಾದಂಬರಿ ಎಂದು ನಿಸ್ಸಂದೇಹವಾಗಿ ಹೇಳಬಹುದು.

  (ಲೇಖಕರು ಕನ್ನಡದ ಪ್ರಮುಖ ಕಥೆಗಾರರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts