More

    ನೂತನ ರೀತಿಯ ಪ್ರತೀಕಾರ: ಆ ಕ್ಷಣ ಅಂಕಣ..

    ನೂತನ ರೀತಿಯ ಪ್ರತೀಕಾರ: ಆ ಕ್ಷಣ ಅಂಕಣ..ವಾಹನ ಅಪಘಾತಕ್ಕೆ ಸಿಲುಕಿದ್ದ 66 ವರ್ಷದ ವ್ಯಕ್ತಿಯನ್ನು 2018ರ ಮೇ 1ರ ಮಧ್ಯಾಹ್ನ 3 ಗಂಟೆಗೆ ತಾಲೂಕು ಆಸ್ಪತ್ರೆಯೊಂದಕ್ಕೆ ಕರೆತರಲಾಯಿತು. ಆತ ಆಗಲೇ ಸತ್ತಿರುವುದನ್ನು ಗಮನಿಸಿದ ವೈದ್ಯರು ಪೊಲೀಸರಿಗೆ ಮಾಹಿತಿಯಿತ್ತರು. ಸ್ಥಳಕ್ಕೆ ಬಂದ ಪೊಲೀಸರಿಗೆ ಮೃತನ ಭಾವಮೈದ ಬೋರಯ್ಯ ಹೀಗೆಂದ:‘ ‘ನನ್ನ ಸೋದರಿ ಕೆಂಪಮ್ಮ, ಭಾವ ಬೋರಯ್ಯ ಮತ್ತು ನಾನು ಇಂದು ಬೆಳಗ್ಗೆ 10ರ ಸುಮಾರಿಗೆ ನಮ್ಮ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆವು. ಆಗ ವೇಗವಾಗಿ ಬಂದ ಕರಿಯ ಬಣ್ಣದ ಕಾರಿನ ಚಾಲಕ ಅಡ್ಡಾದಿಡ್ಡಿಯಾಗಿ ವಾಹನವನ್ನು ಚಲಾಯಿಸಿ ಬೋರಯ್ಯನಿಗೆ ಡಿಕ್ಕಿ ಹೊಡೆದು ಪರಾರಿಯಾದ. ಕಾರಿನ ನೋಂದಣಿ ಸಂಖ್ಯೆಯನ್ನು ನೋಟ್ ಮಾಡಿಕೊಂಡ ನಾನು ಲಾರಿಯೊಂದರಲ್ಲಿ ಬೋರಯ್ಯನನ್ನು ಹಾಕಿಕೊಂಡು ಇಲ್ಲಿಗೆ ಕರೆತಂದೆ. ಕಾರಿನ ಚಾಲಕನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ’.

    ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದಾದ ಸಾವಿನ ಪ್ರಕರಣವನ್ನು ಪೊಲೀಸರು ದಾಖಲಿಸಿದರು. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ತಲೆ ಮತ್ತು ಬೆನ್ನಿಗೆ ಭಾರಿ ಪೆಟ್ಟುಗಳಾಗಿರುವ ಕಾರಣದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿ, ವೇಗವಾಗಿ ಬಂದ ವಾಹನದ ಡಿಕ್ಕಿಯ ಪರಿಣಾಮವಾಗಿ ಈ ಗಾಯಗಳು ಉಂಟಾಗಿರಬಹುದೆಂದರು.

    ಏತನ್ಮಧ್ಯೆ ಅಜಯ್ ಎನ್ನುವವನು ಪೊಲೀಸ್ ಠಾಣೆಗೆ ಬಂದು ತಾನೇ ಬೋರಯ್ಯನಿಗೆ ಡಿಕ್ಕಿ ಹೊಡೆದ ವಾಹನದ ಚಾಲಕ ಎಂದು ಹೇಳಿ ಶರಣಾದ. ಅಲ್ಲಿದ್ದವರು ರೊಚ್ಚಿಗೆದ್ದು ತನ್ನನ್ನು ಕೊಂದು ವಾಹನವನ್ನು ಸುಡಬಹುದೆಂಬ ಭಯದಿಂದ ಅಪಘಾತವಾದಾಗ ವಾಹನವನ್ನು ನಿಲ್ಲಿಸಲಿಲ್ಲ ಎಂದ. ಅವನನ್ನು ಬಂಧಿಸಿ ಪ್ರಕರಣದ ತನಿಖೆಯನ್ನು ಬೇಗನೇ ಮುಗಿಸಿದ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಿದರು. ನ್ಯಾಯಾಲಯವು ಅಜಯ್ಗೆ 25,000 ರೂಗಳ ದಂಡ ವಿಧಿಸಿ ಬಿಡುಗಡೆ ಮಾಡಿತು. ಅಷ್ಟರಲ್ಲಿ ಕೆಂಪಮ್ಮ ತನ್ನ ಪತಿ ಅಪಘಾತದ ವಿಮೆ ಮಾಡಿಸಿದ್ದ ವಿಮಾ ಕಂಪನಿಗೆ ವಿಮೆಯ ಹಣವನ್ನು ಕೊಡಲು ಅರ್ಜಿ ಸಲ್ಲಿಸಿದಳು. ವಿಮಾ ಕಂಪನಿಯು ಸಂಬಂಧಪಟ್ಟ ದಾಖಲೆಗಳನ್ನು ತರಿಸಿ ಪರಿಶೀಲಿಸಿ ಬೋರಯ್ಯನ ವಿಮಾ ಹಣವಾದ 10 ಲಕ್ಷ ರೂಗಳನ್ನು ಕೆಂಪಮ್ಮಳಿಗೆ ಹಸ್ತಾಂತರಿಸಿತು.

    ಈ ಪ್ರಕರಣವಾದ ಅಂದಾಜು 15 ದಿನಗಳ ನಂತರ ಇನ್ನೊಂದು ಖಾಸಗಿ ವಿಮಾ ಕಂಪನಿಗೆ ಪಕ್ಕದ ಜಿಲ್ಲೆಯೊಂದರಿಂದ ವಾಹನ ಅಪಘಾತದ ಪರಿಹಾರದ ಕ್ಲೇಮ್ ಬಂದಿತು. ಅರ್ಜಿದಾರ ರಾಜಾರಾಂ, ಬೇಸಾಯಗಾರನಾಗಿದ್ದ ತನ್ನ ತಂದೆ ನಾರಾಯಣ ಅದೇ ಕಂಪನಿಯಿಂದ ವಿಮೆ ಪಡೆದಿದ್ದು, 15 ದಿನಗಳ ಹಿಂದೆ ಆತ ರಸ್ತೆಯಲ್ಲಿ ಸೈಕಲ್ ಮೇಲೆ ಹೋಗುತ್ತಿದ್ದಾಗ ಯಾವುದೋ ವಾಹನವು ಅವನಿಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟನೆಂದು ತಿಳಿಸಿ, ತತ್ಸಂಬಂಧದ ಎಲ್ಲ ದಾಖಲೆಗಳನ್ನೂ ಲಗತ್ತಿಸಿ ನಾರಾಯಣ ಮಾಡಿಸಿದ್ದ ಅಪಘಾತ ವಿಮೆ ಮೊತ್ತವಾದ 12 ಲಕ್ಷ ರೂಪಾಯಿಗಳನ್ನು ಪಾಲಿಸಿಯ ನಾಮಿನಿಯಾಗಿರುವ ತನಗೆ ಸಂದಾಯ ಮಾಡಬೇಕೆಂದು ಕೋರಿದ್ದ. ವಿಮಾ ಕಂಪನಿ ವಿಚಾರಣೆ ನಡೆಸಿ ವಿಮಾ ಮೊತ್ತವನ್ನು ರಾಜಾರಾಂಗೆ ನೀಡಿತು.

    ಅದೇ ವರ್ಷ ಅದೇ ರಾಜ್ಯದಲ್ಲಿ ಖಾಸಗಿ ವಿಮಾ ಕಂಪನಿಗಳಿಗೆ ಅಪಘಾತ ವಿಮೆಯ ಇಂತಹ ಕ್ಲೇಮುಗಳು ಪದೇಪದೆ ಬರತೊಡಗಿದಾಗ ಅವು ಪರಸ್ಪರ ಸಭೆಯೊಂದನ್ನು ನಡೆಸಿ ರ್ಚಚಿಸಿದವು. ಆಗ ಹಲವಾರು ಸತ್ಯಗಳು ಬೆಳಕಿಗೆ ಬಂದವು. ಕಳೆದ ವರ್ಷಗಳಿಗಿಂತ ಆ ವರ್ಷ ಬಂದಂತಹ ಕ್ಲೇಮುಗಳು ಮೂರು ಪಟ್ಟು ಜಾಸ್ತಿಯಾಗಿದ್ದವು. ಪ್ರತಿಯೊಂದು ಪ್ರಕರಣದಲ್ಲಿಯೂ ವಿಮಾ ಪಾಲಿಸಿ ಮಾಡಿಸಿದ ಆರು ತಿಂಗಳ ಅವಧಿಯ ಒಳಗೇ ಪಾಲಿಸಿದಾರನ ಅಪಘಾತವಾಗಿ ಸಾವಾಗಿತ್ತು. ಎಲ್ಲ ಪ್ರಕರಣಗಳಲ್ಲಿಯೂ ವಿಮಾ ಮೊತ್ತವು 5 ಲಕ್ಷ ರೂ ಅಥವಾ ಅದಕ್ಕಿಂತ ಹೆಚ್ಚಿತ್ತು. ಅಪಘಾತಗಳೆಲ್ಲವೂ ಅಕ್ಕಪಕ್ಕದಲ್ಲಿರುವ ಎರಡು ಜಿಲ್ಲೆಗಳಲ್ಲಿಯೇ ಸಂಭವಿಸಿದ್ದು ಎರಡು ಪೊಲೀಸ್ ಠಾಣೆಗಳಲ್ಲಿ ಮಾತ್ರ ದಾಖಲಾಗಿದ್ದವು. ಎಲ್ಲಾ ಇಂತಹ ಪ್ರಕರಣಗಳಲ್ಲಿಯೂ ತನಿಖಾಧಿಕಾರಿ ಒಬ್ಬರೇ ಆಗಿದ್ದರು. ಇಂತಹ ಅಂದಾಜು 30 ಪ್ರಕರಣಗಳನ್ನು ಅನುಮಾನಾಸ್ಪದ ಪ್ರಕರಣಗಳೆಂದು ಗುರುತಿಸಿದ ವಿಮಾ ಕಂಪನಿಗಳು ತಮ್ಮ ಆಂತರಿಕ ತನಿಖಾ ತಂಡಗಳಿಂದ ಹೆಚ್ಚಿನ ವಿಚಾರಣೆ ನಡೆಸಿದವು. ಆಗ ಇನ್ನೊಂದು ಆಘಾತಕಾರಿ ಅಂಶವು ಹೊರಬಂದಿತು. ಈ ಎಲ್ಲ ಪ್ರಕರಣಗಳಲ್ಲಿಯೂ ಶವದ ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ್ದ ವೈದ್ಯರು ಇಬ್ಬರೇ ಆಗಿದ್ದರು ಮತ್ತು ಅವರಿಬ್ಬರೂ ಸಲ್ಲಿಸಿದ್ದ ಎಲ್ಲ ವರದಿಗಳೂ ಒಂದೇ ರೀತಿ ಇದ್ದವು. ಆಗ ವಿಮಾ ಕಂಪನಿಗಳ ಅಧಿಕಾರಿಗಳು ರಾಜ್ಯದ ಪೊಲೀಸ್ ಮುಖ್ಯಸ್ಥರನ್ನು ಭೇಟಿಯಾಗಿ ಈ ಪ್ರಕರಣಗಳನ್ನು ಸಿ.ಐ.ಡಿ ವಿಚಾರಣೆಗೆ ಒಪ್ಪಿಸಬೇಕೆಂದು ವಿನಂತಿಸಿದರು.

    ಅದರಂತೆಯೇ ಸಿ.ಐ.ಡಿ 12 ಪ್ರಕರಣಗಳನ್ನು ತನಿಖೆಗಾಗಿ ತೆಗೆದುಕೊಂಡಿತು. ಅವುಗಳಲ್ಲಿ 7 ಪ್ರಕರಣಗಳು ಒಂದು ಜಿಲ್ಲೆಯದಾಗಿದ್ದರೆ, 5 ಪ್ರಕರಣಗಳು ಅದರ ಪಕ್ಕದ ಜಿಲ್ಲೆಯದಾಗಿದ್ದವು. ಆರಂಭದಲ್ಲಿ ತನಿಖಾಧಿಕಾರಿಯು ಅಷ್ಟೂ ಪ್ರಕರಣಗಳ ಪೋಸ್ಟ್​ಮಾರ್ಟಂ ವರದಿಗಳನ್ನು ಪರಿಶೀಲಿಸಿದರು. ಪ್ರತಿಯೊಂದು ವರದಿಯಲ್ಲಿಯೂ ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಗಾಯಾಳು ಮೃತಪಟ್ಟಿದ್ದ. ಮೃತದೇಹದ ಮೇಲಾಗಿದ್ದ ಗಾಯಗಳ ವಿವರಣೆ ಹಾಗೂ ಸಾವಿಗೆ ಕೊಟ್ಟ ಕಾರಣವೂ ಒಂದೇ ಆಗಿತ್ತು. ಆಗ ಪೋಸ್ಟ್​ಮಾರ್ಟಂ ಮಾಡಿದ ಸರ್ಕಾರಿ ವೈದ್ಯರನ್ನು ಕರೆದು ವಿಚಾರಿಸಿದಾಗ ಇನ್ನೊಂದು ಆಘಾತಕಾರಿ ವಿಷಯವು ಹೊರಹೊಮ್ಮಿತು. ಅದೇನೆಂದರೆ ಮೃತ ವ್ಯಕ್ತಿಗಳ ಸಾವು ವಾಹನ ಅಪಘಾತದಿಂದ ಆಗಿರದೇ ಬೇರೆ ಬೇರೆ ಕಾರಣದಿಂದ ಆಗಿತ್ತು ಎನ್ನುವುದು. ಎಲ್ಲ ಸಾವುಗಳೂ ಅಪಘಾತದಿಂದಲೇ ಸಂಭವಿಸಿದೆಯೆಂದು ಬರೆಯಲು ತಮಗೆ ಮಧ್ಯವರ್ತಿಯೊಬ್ಬನು ತಲಾ 25,000 ರೂ.ಗಳನ್ನು ಕೊಟ್ಟನೆಂದು ವೈದ್ಯರು ತಿಳಿಸಿ ಆ ವ್ಯಕ್ತಿಯ ಹೆಸರನ್ನು ಹೇಳಿದರು. ಅನಂತರ ಎಲ್ಲ ವಾಹನ ಅಪಘಾತಗಳ ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿ ತನಿಖೆ ಮಾಡಿದ್ದ ಇಬ್ಬರು ತನಿಖಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ತಾವು ದಾಖಲಿಸಿದ ಅಷ್ಟೂ ಪ್ರಕರಣಗಳು ಸುಳ್ಳೆಂದು ಹೇಳಿ ಎಲ್ಲಾ ಪ್ರಕರಣಗಳನ್ನೂ ವಾಹನ ಅಪಘಾತಗಳ ಹಿಟ್ ಅಂಡ್ ರನ್ ಪ್ರಕರಣಗಳೆಂದು ದಾಖಲಿಸಿ ಅದೇ ರೀತಿ ತನಿಖೆ ನಡೆಸಲು ತಮಗೆ ಪ್ರಕರಣವೊಂದಕ್ಕೆ ತಲಾ 75,000 ರೂ, ನೀಡಲಾಯಿತೆಂದು ತಿಳಿಸಿ ಹಣ ನೀಡಿದ ವ್ಯಕ್ತಿಯ ಹೆಸರನ್ನು ಹೇಳಿದರು. ಆತ ವೈದ್ಯರು ಹೇಳಿದ್ದವನೇ ಆಗಿದ್ದ.

    ಮುಂದೆ ಸಿ.ಐ.ಡಿ ಅಧಿಕಾರಿಗಳು ವಿಮಾ ಹಣವನ್ನು ಕ್ಲೇಮ್ ಮಾಡಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ ಮೃತ ವ್ಯಕ್ತಿಗಳು ಅಪಘಾತದಲ್ಲಿ ಸಾಯದೇ ರೋಗ ಬಂದು ಸತ್ತಿದ್ದರೆಂದೂ ಜ್ಯೋತಿಪ್ರಕಾಶ್ ಎನ್ನುವ ವ್ಯಕ್ತಿಯೊಬ್ಬನ ಕುಮ್ಮಕ್ಕಿನಿಂದ ತಾವು ಸುಳ್ಳು ಪ್ರಕರಣಗಳನ್ನು ದಾಖಲಿಸಿ ವಿಮೆಯನ್ನು ಪಡೆದಿದ್ದವೆಂದೂ ತಿಳಿಸಿದರು. ಆಗ ಜ್ಯೋತಿಪ್ರಕಾಶ್​ನನ್ನು ಕರೆಸಿ ವಿಚಾರಿಸಿದಾಗ ಆತ ಹೀಗೆಂದ: ‘ನಾನು ಖಾಸಗಿ ವಿಮಾ ಕಂಪನಿಯೊಂದರಲ್ಲಿ ನೌಕರಿಯಲ್ಲಿದ್ದೆ. ಯಾವುದೋ ಕ್ಷುಲ್ಲಕ ಕಾರಣದ ಮೇಲೆ ನನ್ನನ್ನು ನೌಕರಿಯಿಂದ ತೆಗೆಯಲಾಯಿತು. ಆಗ ನಾನು ವಿಮಾ ಕಂಪನಿಗೆ ಬುದ್ಧಿ ಕಲಿಸಬೇಕೆಂದು ತೀರ್ವನಿಸಿದೆ. ಅದೇ ಸಮಯಕ್ಕೆ ನನಗೆ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಡಾಟಾ ಆಪರೇಟರ್ ಆಗಿದ್ದ ಸುರೇಶ್ ಎಂಬುವವನ ಪರಿಚಯವಾಯಿತು. ಆತ ಆ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದ ಎಲ್ಲ ರೋಗಿಗಳ ವಿವರಗಳೂ ತನ್ನ ಬಳಿ ಇರುವುದಾಗಿ ಹೇಳಿದ. ಆಗ ನನಗೊಂದು ಪ್ಲಾನ್ ಹೊಳೆಯಿತು. ಅದರಂತೆ ಮುಂದಿನ ಆರು ತಿಂಗಳಲ್ಲಿ ಸಾಯುವಂತಹ ರೋಗಿಗಳ ಪಟ್ಟಿಯೊಂದನ್ನು ಮಾಡಿಕೊಡಲು ನಾನವನಿಗೆ ಕೋರಿ ಅವನಿಂದ ನೂರು ಜನರ ಹೆಸರು ವಿಳಾಸಗಳನ್ನು ಪಡೆದೆ. ಅವರಲ್ಲಿ ಯಾರು ಆಶಿಕ್ಷಿತರೋ, ಗ್ರಾಮವಾಸಿಗಳೋ ಅಂತಹವರ ಮನೆಗಳಿಗೆ ಹೋಗಿ ಅವರೆಲ್ಲರ ಅಪಘಾತ ವಿಮೆ ಮಾಡಿಸಲು ಹೇಳಿದೆ. ವಿಮಾ ಪ್ರೀಮಿಯಂ ಅನ್ನು ನಾನೇ ತುಂಬುವುದಾಗಿಯೂ, ರೋಗಿ ಸತ್ತನಂತರ ಐವತ್ತು ಸಾವಿರ ರೂಗಳನ್ನು ಅವರಿಗೆ ಕೊಡುವುದಾಗಿಯೂ ಹೇಳಿ ಅವರ ಮನವೊಲಿಸಿದೆ.

    ಆನಂತರ ಅವರಿಂದ ವಿಮೆಯ ಅರ್ಜಿಗಳನ್ನು ಬರೆಸಿ, ನಾನೇ ಪ್ರೀಮಿಯಂ ಕಟ್ಟಿ ತಲಾ 5ರಿಂದ 10 ಲಕ್ಷ ರೂಗಳ ಅಪಘಾತ ವಿಮೆಯನ್ನು ಮಾಡಿಸಿದೆ. ಕ್ಯಾನ್ಸರ್ ರೋಗಿ ಸತ್ತ ಕೂಡಲೇ ನನಗೆ ಮಾಹಿತಿ ನೀಡಲು ಆತನ ವಾರಸುದಾರರಿಗೆ ಕೋರಿದೆ. ಆ ರೋಗಿ ಸತ್ತ ನಂತರ ಅವನ ಮನೆಗೆ ಹೋಗಿ ಶವವನ್ನು ಪಡೆದು ಅದನ್ನು ನಿರ್ಜನ ಪ್ರದೇಶಕ್ಕೆ ಒಯ್ದು ನನ್ನ ಚಾಲಕನ ಮುಖಾಂತರ ಮೃತದೇಹದ ಮೇಲೆ ಒಂದು ಕಾರನ್ನು ಹಾಯಿಸಿದೆ. ಇದರಿಂದ ಶವದ ಹೊರದೇಹಕ್ಕೆ ಪೆಟ್ಟುಗಳಾದವು. ನಂತರ ಗಾಯಗೊಂಡ ಮೃತದೇಹವನ್ನು ವಾಹನದಲ್ಲಿ ಹಾಕಿಕೊಂಡು ಮೃತನ ಸಂಬಂಧಿಕರ ಜತೆ ಅದನ್ನು ಆಸ್ಪತ್ರೆಗೊಯ್ಯುತ್ತಿದ್ದೆ. ಎರಡು ಪೊಲೀಸ್ ಠಾಣೆಗಳಲ್ಲಿ ಠಾಣಾಧಿಕಾರಿಗಳನ್ನು ಪರಿಚಯ ಮಾಡಿಕೊಂಡು ಅವರಿಗೆ ಆ ಪ್ರಕರಣಗಳನ್ನು ಹಿಟ್ ಆಂಡ್ ರನ್ ಅಪಘಾತದ ಪ್ರಕರಣಗಳಂತೆ ತನಿಖೆ ಮಾಡಲು ಕೋರಿದ್ದೆ. ಆಸ್ಪತ್ರೆಯ ವೈದ್ಯಾಧಿಕಾರಿಗೆ ಸಾವು ಅಪಘಾತದಿಂದಾಯಿತು ಎಂದು ವರದಿ ನೀಡಲು ಕೋರಿದ್ದೆ. ವಿಮೆಯ ಮೊತ್ತವು ವಾರಸುದಾರನಿಗೆ ಬಂದ ನಂತರ ಅದರಲ್ಲಿ 50 ಸಾವಿರ ರೂ.ಗಳನ್ನು ವಾರಸುದಾರರಿಗೆ ಕೊಟ್ಟು ಒಂದು ಲಕ್ಷ ರೂ.ಗಳನ್ನು ಪೊಲೀಸರು ಮತ್ತು ವೈದ್ಯರಿಗೆ ಹಂಚಿ ಉಳಿದಿದ್ದನ್ನು ನಾನಿಟ್ಟುಕೊಳ್ಳುತ್ತಿದ್ದೆ. ಈ ರೀತಿಯಲ್ಲಿ ಇಲ್ಲಿಯವರೆಗೆ ನಾನು 2 ಕೋಟಿ ರೂ.ಗಳನ್ನು ಗಳಿಸಿ ವಿಮಾ ಕಂಪನಿಗಳಿಗೆ ಬುದ್ಧಿ ಕಲಿಸಿರುವೆ’.

    ಈ ವಂಚನೆಯ ಜಾಲದಲ್ಲಿದ್ದ 24 ಜನರನ್ನು ಬಂಧಿಸಿದ ಸಿ.ಐ.ಡಿ ತನಿಖಾಧಿಕಾರಿ ಆರೋಪಪಟ್ಟಿಯನ್ನು ಸಲ್ಲಿಸಿದಾಗ ನ್ಯಾಯಾಲಯವು ಜ್ಯೋತಿಪ್ರಕಾಶ್​ಗೆ ಮೂರು ಪ್ರಕರಣಗಳಲ್ಲಿ 5 ವರ್ಷ ಸೆರೆಮನೆಯ ಶಿಕ್ಷೆಯನ್ನು ನೀಡಿ ಉಳಿದವರಿಗೆ 2 ರಿಂದ 5 ವರ್ಷಗಳ ಸೆರೆವಾಸ ವಿಧಿಸಿತು. ‘ಪ್ರತೀಕಾರದ ಬಗ್ಗೆಯೇ ಚಿಂತಿಸುತ್ತಿದ್ದರೆ ಕಾಲಕ್ರಮೇಣ ಮಾಯವಾಗುತ್ತಿದ್ದ ನಿಮ್ಮ ಗಾಯಗಳು ಮಾಯದೇ ಉಳಿದುಬಿಡುತ್ತವೆ’ ಎನ್ನುತ್ತಾಳೆ ಚೀನೀ-ಅಮೆರಿಕನ್ ವೈದ್ಯೆ ಅಡೆಲಿನ್ ಯೆನ್ ಮಾ. ವಿಮಾ ಕಂಪನಿಯಿಂದ ವಜಾ ಆದ ನಂತರ ತನಗಾದ ಅವಮಾನವನ್ನು ಜ್ಯೋತಿಪ್ರಕಾಶ್ ಮರೆತಿದ್ದರೆ ಅವನಿಗೆ ಜೈಲುವಾಸವಾಗದೆ ಗಾಯ ಮಾಗುತ್ತಿತ್ತು.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಭಾಜಪದ ಮತ್ತೊಂದು ವಿಕೆಟ್ ಪತನ, ಶೆಟ್ಟರ್​ ಬಿಜೆಪಿಗೆ ಗುಡ್​ಬೈ; ನಾಳೆಯೇ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts