‘ಸರ್ವ’ ವಿಧ ‘ಮಾನ್ಯತೆ’ ಪಡೆದ ಹೊಸಹಳ್ಳಿ

ಶ್ರವಣಬೆಳಗೊಳ: ಹೊಯ್ಸಳರ ಆಳ್ವಿಕೆ ನಂತರ ರೂಪುಗೊಂಡು, ಮೈಸೂರು ಒಡೆಯರ ಕಾಲದಲ್ಲಿ ಸುತ್ತಲಿನ ಹಳ್ಳಿಗಳಿಗಿಂತ ಉತ್ತುಂಗಕ್ಕೇರಿದ ಊರೇ ಶ್ರವಣಬೆಳಗೊಳ ಹೋಬಳಿಯ ಸರ್ವಮಾನ್ಯ ಹೊಸಹಳ್ಳಿ (ಎಸ್.ಹೊಸಹಳ್ಳಿ).

ಈ ಗ್ರಾಮಕ್ಕೆ ಸರ್ವಮಾನ್ಯ ಹೊಸಹಳ್ಳಿ ಎಂದು ಹೆಸರು ಬರಲು ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಐತಿಹ್ಯಗಳ ಪ್ರಕಾರ, ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿದೇವಿ (ಜಕ್ಕಳಮ್ಮ) ಊರಿನ ಕೆರೆ ಕೋಡಿಯಲ್ಲಿ ನೆಲೆಸಿರುವುದು ಹಾಗೂ ಅಂದು ಪ್ರವರ್ಧಮಾನದಲ್ಲಿದ್ದ ಜೈನ ಪರಂಪರೆ ಮತ್ತು ಆ ಸಮುದಾಯದ ಭೂಮಿಯನ್ನು ಗ್ರಾಮದ ಜನರು ರಕ್ಷಿಸುತ್ತಿದ್ದರು ಎಂಬ ಕಾರಣಕ್ಕೆ ಸರ್ವ ವಿಧದಲ್ಲೂ ಮಾನ್ಯತೆ ದೊರಕಿದೆ ಎಂದು ಹೇಳಲಾಗುತ್ತದೆ.

ಮತ್ತೊಂದು ಮೂಲದ ಪ್ರಕಾರ, ಈ ಹಳ್ಳಿ ಸ್ಥಾಪನೆಯಾಗುವುದಕ್ಕೂ ಮೊದಲು ಊರಿನ ಜನರ ಮೂಲಸ್ಥಳ ನಾಗಮಂಗಲ ತಾಲೂಕಿನ ‘ಸುಖಧರೆ’ ಎಂಬ ಗ್ರಾಮ. ಆಗ ಇಲ್ಲಿನ ಹಿಂದಲಹಳ್ಳಿ ಹಾಗೂ ಶ್ರವಣಬೆಳಗೊಳದಲ್ಲಿ ತಾಮ್ರ ಹಾಗೂ ಹಿತ್ತಾಳೆ ಪಾತ್ರೆ ತಯಾರಿಕಾ ಕಾರ್ಖಾನೆಗಳಿದ್ದವು. ಈ ಕಾರ್ಖಾನೆಗಳಿಗೆ ಸುಖಧರೆಯಿಂದ ಕೆಲವು ವರ್ತಕರು ಕತ್ತೆಯ ಮೇಲೆ ಇದ್ದಿಲನ್ನು ತಂದು ಪೂರೈಸುತ್ತಿದ್ದರು. ಆ ಸಂದರ್ಭದಲ್ಲಿ ಶ್ರವಣಬೆಳಗೊಳ ಭಾಗದಲ್ಲಿ ಕಳ್ಳತನ ಹೆಚ್ಚಾಗಿ, ದರೋಡೆಕೋರರು ವಿಪರೀತವಾಗಿ ಪೀಡಿಸುತ್ತಿದ್ದರು.

ಒಂದು ರಾತ್ರಿ ಸುಖಧರೆಯಿಂದ ಬಂದ ಇದ್ದಿಲು ವರ್ತಕರು ಕಳ್ಳರನ್ನು ಹಿಡಿದು ಪಾಳೆಗಾರರಿಗೆ ಒಪ್ಪಿಸುತ್ತಾರೆ. ವರ್ತಕರ ಶೌರ್ಯವನ್ನು ಮೆಚ್ಚಿ ಸಂತೋಷಗೊಂಡ ಪಾಳೆಗಾರ ಶ್ರವಣಬೆಳಗೊಳದ ಈಶಾನ್ಯ ಭಾಗದಲ್ಲಿ (ಈಗಿನ ಹೊಸಹಳ್ಳಿ ಗ್ರಾಮ) ಆ ವರ್ತಕರಿಗೆ ಜಮೀನು ನೀಡಿ ಅಲ್ಲೇ ನೆಲೆಸುವಂತೆ ಸೂಚಿಸುತ್ತಾರೆ. ಅಂದಿನಿಂದ ಈ ಊರಿಗೆ ‘ಹೊಸಹಳ್ಳಿ’ ಎಂಬ ಹೆಸರಿಟ್ಟು, ಈ ಗ್ರಾಮಕ್ಕೆ ಸರ್ವ ವಿಧದಲ್ಲೂ ಮಾನ್ಯತೆ ಸಲ್ಲಬೇಕೆಂದು ಸುತ್ತಲ ಹತ್ತೂರಿಗೂ ಆದೇಶ ಹೊರಡಿಸಿ ‘ಸರ್ವಮಾನ್ಯ ಹೊಸಹಳ್ಳಿ’ ಎಂದು ನಾಮಕರಣ ಮಾಡಿದರು ಎನ್ನಲಾಗಿದೆ.
ಗ್ರಾಮದಲ್ಲಿ 250 ಮನೆಗಳಿದ್ದು, 1200 ಜನರು ವಾಸವಿದ್ದಾರೆ. ಸರ್ಕಾರಿ ಶಾಲೆ, ಹಾಲಿನ ಡೇರಿ, ಪಶು ಆಸ್ಪತ್ರೆ ಇವೆ.

ಗಂಗರಾಜ ಕಟ್ಟಿಸಿದ ಕೆರೆ:
ಕ್ರಿ.ಶ.1120ರಲ್ಲಿ ಹೊಯ್ಸಳ ಸಾಮ್ರಾಜ್ಯದ ದೊರೆ ವಿಷ್ಣುರ್ವರ್ಧನನ ದಂಡನಾಯಕ ಗಂಗರಾಜನು ಕೆರೆಯೊಂದನ್ನು ಕಟ್ಟಿಸುತ್ತಾನೆ. ಅದೇ ಆಗಿನ ಗಂಗಸಮುದ್ರ ಹಾಗೂ ಇಂದಿನ ಹೊಸಹಳ್ಳಿ ದೊಡ್ಡಕೆರೆ (ಕೆರೆ ಕೋಡಿಯಲ್ಲಿರುವ ಜಕ್ಕಳಮ್ಮ ದೇವಾಲಯ ಮುಂಭಾಗದ ಬಂಡೆಯ ಮೇಲಿರುವ ಶಿಲಾಶಾಸನದ ಉಲ್ಲೇಖ). ಆದರೆ, ಆ ಸಂದರ್ಭದಲ್ಲಿ ಇಲ್ಲಿ ಜನವಸತಿ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಹಿಂದೆ ಈ ಕೆರೆ ಹೊಸಹಳ್ಳಿ ಸೇರಿದಂತೆ ಸುತ್ತಲಿನ ಸುಂಡಹಳ್ಳಿ, ಪರಮ, ಜಿನನಾಥಪುರ, ಜಿನನಾಥಪುರಕೊಪ್ಪಲು, ಬೆಕ್ಕ, ದೇವರಹಳ್ಳಿ ಮುಂತಾದ ಹತ್ತಾರು ಗ್ರಾಮಗಳ ರೈತರ ಜೀವನಾಡಿಯಾಗಿತ್ತು. ಆದರೆ, 14 ವರ್ಷಗಳಿಂದ ಕೆರೆ ನೀರಿಲ್ಲದೆ ಬತ್ತಿ ಹೋಗಿದ್ದು, ಗ್ರಾಮಸ್ಥರೇ ಹಣ ಸಂಗ್ರಹಿಸಿ ನೀರು ತುಂಬಿಸಲು ಮುಂದಾಗಿದ್ದಾರೆ.

ಮಳೆಗಾಗಿ ಹೆಡಿಗೆ ಜಾತ್ರೆ:
ಹೊಸಹಳ್ಳಿ ಕೆರೆ ತುಂಬಲೆಂದು ಪ್ರಾರ್ಥಿಸಿ ಜೈನ ಮಠದ ವತಿಯಿಂದ ಪ್ರತಿವರ್ಷ ಹೆಡಿಗೆ ಜಾತ್ರೆ ನಡೆಯುತ್ತಿತ್ತು. ಬಿದಿರಿನ ಬುಟ್ಟಿಯಲ್ಲಿ ಅಭಿಷೇಕ ಸಾಮಗ್ರಿಗಳನ್ನು ಹೊತ್ತು ಶ್ರವಣಬೆಳಗೊಳದಿಂದ ಹೊಸಹಳ್ಳಿ ಕೆರೆಕೋಡಿ ಜಕ್ಕಳಮ್ಮ ದೇವಾಲಯಕ್ಕೆ ಮೆರವಣಿಗೆ ಮೂಲಕ ಹೋಗಿ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ 2007 ಹೊರತುಪಡಿಸಿ ಸುಮಾರು 40 ವರ್ಷಗಳಿಂದ ಈ ಜಾತ್ರೆ ಸ್ಥಗಿತಗೊಂಡಿದೆ.

2007ರ ಏಪ್ರಿಲ್‌ನಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಹೆಡಿಗೆ ಜಾತ್ರೆ ಮಾಡಲಾಯಿತು. ಶ್ರೀಗಳೇ ಬುಟ್ಟಿ ಹೊತ್ತು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಳೆಗಾಗಿ ಪಾರ್ಥಿಸಿದ್ದರು.

ದೇವಾಲಯಗಳು:
ಈ ಊರಿನಲ್ಲಿ ಗ್ರಾಮದೇವತೆಗಳಾದ ಸತ್ಯಮ್ಮ ದೇವಿ, ಲಕ್ಷ್ಮೀದೇವಿ, ಏರಿಕಾಳಮ್ಮ, ಜಕ್ಕಳಮ್ಮ, ದೊಡ್ಡಮ್ಮದೇವಿ, ಶನಿದೇವರ ದೇವಾಲಯಗಳಿವೆ. ಕೆರೆ ಏರಿ ಸಮೀಪದಲ್ಲಿ ಹೊಯ್ಸಳರ ಕಾಲದ ಸಪ್ತ ಮಾತೃಕೆಯರ ವಿಗ್ರಹಗಳಿವೆ. ಸರ್ವಧರ್ಮ ಸಮನ್ವಯತೆಯೊಂದಿಗೆ ಒಕ್ಕಲಿಗ, ರಜಪೂತ, ದಲಿತ, ಗಂಗಾಮತಸ್ಥ ಜನಾಂಗದ ಜನರು ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ.

ತಲುಪುವ ಮಾರ್ಗ:
ಶ್ರವಣಬೆಳಗೊಳ ಹೋಬಳಿ ಕೇಂದ್ರದಿಂದ 2 ಕಿ.ಮೀ., ಚನ್ನರಾಯಪಟ್ಟಣ ತಾಲೂಕು ಕೇಂದ್ರದಿಂದ 15 ಕಿ.ಮೀ. ಹಾಗೂ ಹಾಸನದಿಂದ 50 ಕಿ.ಮೀ. ದೂರದಲ್ಲಿರುವ ಎಸ್.ಹೊಸಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕೆಎಸ್‌ಆರ್‌ಟಿಸಿ ಬಸ್ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆಯಿದೆ.

Leave a Reply

Your email address will not be published. Required fields are marked *