‘ಡಿಂಗ’ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗ. ಇಡೀ ಚಿತ್ರವನ್ನು ಐ-ಫೋನ್ನಲ್ಲೇ ಚಿತ್ರೀಕರಣ ಮಾಡಿರುವುದು ವಿಶೇಷ. ಜ.31ರಂದು ಸಿನಿಮಾ ಬಿಡುಗಡೆ ಆಗಲಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.
‘ಕ್ಯಾನ್ಸರ್ ರೋಗಿ ಕೆಲ ದಿನಗಳಲ್ಲಿ ಸಾಯುತ್ತಾನೆ ಎಂದಾಗ, ತಾನು ಸಾಕಿದ್ದ ನಾಯಿಯನ್ನು ತನ್ನಷ್ಟೇ ಇಷ್ಟಪಟ್ಟು ಜೋಪಾನ ಮಾಡಲು ಬೇರೆಯವರನ್ನು ಹುಡುಕುವುದು ಚಿತ್ರಕಥೆ. ಇದರ ಮಧ್ಯೆ ಹಾಸ್ಯ-ಪ್ರೀತಿ ಬೆರೆಸಲಾಗಿದೆ’ ಎನ್ನುವ ನಿರ್ದೇಶಕ ಅಭಿಷೇಕ್, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಐ-ಫೋನ್ನಲ್ಲಿ ಚಿತ್ರೀಕರಣ ಮಾಡಿರುವುದು ಏಷ್ಯಾದಲ್ಲೇ ಮೊದಲ ಪ್ರಯೋಗ. ಪ್ರತಿ ದೃಶ್ಯ ಚೆನ್ನಾಗಿ ಬಂದಿದೆ. ಚಿತ್ರದ ಟ್ರೇಲರ್, ಹಾಡುಗಳು ಜನರಿಗೆ ಇಷ್ಟವಾಗಿದ್ದು, ಸಿನಿಮಾ ನೋಡುಗರಿಗೆ ಮನರಂಜನೆ ಜತೆ ಉತ್ತಮ ಸಂದೇಶ ಕೊಡುತ್ತದೆ’ ಎನ್ನುತ್ತಾರೆ ಅವರು.
‘ಭಾವುಕತೆಯಿಂದ ಕೂಡಿದ ಸಿನಿಮಾ ಇದು. ನಾಯಿ ಮತ್ತು ಮನುಷ್ಯನ ಬಾಂಧವ್ಯ ತಿಳಿಸುತ್ತದೆ. ಬೋಲ್ಡ್ ಮತ್ತು ಗ್ಲಾಮರಸ್ ಪಾತ್ರ ಮಾಡಿದ್ದೇನೆ. ನನ್ನ ಸಿನಿ ಬದುಕಿನಲ್ಲಿ ಇದು ಹೊಸ ಅನುಭವ’ ಎಂದರು ನಟಿ ಅನುಷಾ. ‘ಮಾಯಕಾರ ಪ್ರೊಡಕ್ಷನ್’ನಲ್ಲಿ ನಿರ್ಮಾಣ ಆಗಿರುವ ಈ ಚಿತ್ರಕ್ಕೆ 11 ನಿರ್ವಪಕರು.
ಆರವ್ ಗೌಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಶುದ್ಧೋ ರಾಯ್ ಸಂಗೀತ ನೀಡಿದ್ದು ಒಟ್ಟು ನಾಲ್ಕು ಹಾಡುಗಳಿವೆ. ಅನುರಾಧಾ ಭಟ್, ಅರ್ಜುನ್ ಜನ್ಯ, ಸಂಚಿತ್ ಹೆಗಡೆ ಗಾಯನದಲ್ಲಿ ಹಾಡುಗಳು ಮೂಡಿಬಂದಿವೆ. ಜಯಂತ್ ಮುಂಜುನಾಥ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.