ಬೆಂಗಳೂರು: ಈ ಹಿಂದೆ ‘ರಂಕಲ್ ರಾಟೆ’ ಚಿತ್ರ ನಿರ್ದೇಶಿಸಿದ್ದ ಗೋಪಿ ಕೆರೂರ್, ಇದೀಗ ‘ಮದುವೆ ಮಾಡ್ರಿ ಸರಿಹೋಗ್ತಾನೆ’ ಚಿತ್ರ ಮಾಡಿದ್ದಾರೆ.
ಹೆಸರಿನಂತೆ ಚಿತ್ರವೂ ಸಾಕಷ್ಟು ವಿಶೇಷತೆ ಒಳಗೊಂಡಿದೆ. ಚಿತ್ರದಲ್ಲಿ 11 ಹಾಡುಗಳಿದ್ದು, ಸಂಪೂರ್ಣ ಸಂಗೀತಮಯವಾಗಿದೆ. ಇತ್ತೀಚೆಗೆ ಚಿತ್ರತಂಡ ಧ್ವನಿಸುರುಳಿ ಬಿಡುಗಡೆ ಮಾಡಿತು. ಹಿರಿಯ ನಟ ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿದ್ದಾರೆ. ‘ಇಲ್ಲಿನ ಪಾತ್ರ ನನ್ನ ನಿಜಬದುಕಿಗೆ ತದ್ವಿರುದ್ಧ. ನನಗೆ ಹಾಡಲು ಬರುವುದಿಲ್ಲವಾದರೂ ಈ ಚಿತ್ರದಲ್ಲಿ ಹಾಡುತ್ತೇನೆ. ಸುಖ್ವಿಂದರ್ ಸಿಂಗ್ ಅವರ ಹಾಡುಗಳನ್ನು ಆಲಾಪಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ರಮೇಶ್ ಭಟ್ ಹೇಳಿದರು.
‘ಸಂಭಾಷಣೆ ಮೂಲಕ ಕಥೆ ಹೇಳುವ ಪ್ರಯತ್ನ ಎಲ್ಲ ಸಿನಿಮಾಗಳಲ್ಲಿ ಮಾಡಲಾಗಿರುತ್ತದೆ. ಆದರೆ ನಾವು ಹಾಡುಗಳ ಮೂಲಕ ಚಿತ್ರದ ಕಥೆ ಹೇಳುವ ಮೂಲಕ ವಿಭಿನ್ನ ಪ್ರಯತ್ನ ಮಾಡಿದ್ದೇವೆ. ಮನುಷ್ಯ ಪ್ರೀತಿಯ ಬಲೆಗೆ ಸಿಲುಕಿದಾಗ ಅದು ಹೇಗೆ ಆತನನ್ನು ದಡ ಸೇರಿಸುತ್ತದೆ ಎಂಬುದೇ ಚಿತ್ರಕಥೆ. ಜತೆಗೆ ಸಂಗೀತ- ಹಾಸ್ಯಕ್ಕೆ ಪ್ರಾಧಾನ್ಯತೆ ಕೊಡಲಾಗಿದೆ’ ಎಂದರು ಗೋಪಿ.
‘11 ಹಾಡುಗಳನ್ನು ಪ್ರೇಕ್ಷಕ ಅರಗಿಸಿಕೊಳ್ಳಲು ಸಾಧ್ಯವೇ ಎಂಬ ಶಂಕೆ ಇತ್ತು. ಆದರೆ ಸಂಗೀತ ಚೆನ್ನಾಗಿ ಮೂಡಿಬಂದಿದೆ, ಹಾಡುಗಳು ಎಲ್ಲರಿಗೂ ಇಷ್ಟವಾಗುತ್ತವೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ಅವಿನಾಶ್ ಬಾಸೂತ್ಕರ್. ಐಸಿಐಸಿಐ ಬ್ಯಾಂಕ್ನ ಡೆಪ್ಯುಟಿ ಮ್ಯಾನೇಜರ್ ಶಿವಚಂದ್ರಕುಮಾರ್ ನಟನಾಗಬೇಕೆಂಬ ತಮ್ಮ ಕನಸನ್ನು ಈ ಚಿತ್ರದ ಮೂಲಕ ನನಸು ಮಾಡಿಕೊಂಡಿದ್ದಾರೆ. ನಟಿ ಆರಾಧ್ಯ ಕೂಡ ಚಿತ್ರರಂಗಕ್ಕೆ ಹೊಸಬರು. ‘ನಿರ್ದೇಶಕರ ಪ್ರೋತ್ಸಾಹದಿಂದ ಚೆನ್ನಾಗಿ ಅಭಿನಯಿಸಿದ್ದೇನೆ. ಪಾತ್ರ ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರಕ್ಕೆ ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ಬಂಡವಾಳ ಹೂಡಿದ್ದಾರೆ.