More

    ಎರಡು ವರ್ಷದ ಮಗು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

    ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ತನ್ನ ಎರಡು ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ತಾನೂ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಮಾ.೧೭ ರಂದು ಕೆ.ಆರ್.ಪುರದ ಸೀಗೆಹಳ್ಳಿಯಲ್ಲಿ ಈ ಘಟನೆ ನಡೆದಿದೆ.
    ಶೃತಿಕಾ (೨) ಕೊಲೆಯಾದ ಮಗು. ಕೃತ್ಯ ಎಸಗಿದ ಆಕೆಯ ತಾಯಿ ಚಿನ್ನಾ(೨೪) ಎಂಬಾಕೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಚಿನ್ನಾಳ ಪತಿ ಲಕ್ಷ್ಮೀನಾರಾಯಣ ನೀಡಿದ ದೂರಿನ ಮೇರೆಗೆ ಸದ್ಯ ಕೊಲೆ ಹಾಗೂ ಆತ್ಮಹತ್ಯೆಗೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಲಕ್ಷ್ಮೀನಾರಾಯಣ ೨೦೨೧ರಲ್ಲಿ ಚಿನ್ನಾಳನ್ನು ಮದುವೆಯಾಗಿದ್ದು, ದಂಪತಿಗೆ ಎರಡು ವರ್ಷದ ಹಿಂದೆ ಶೃತಿಕ ಜನಿಸಿದ್ದಳು. ಕಳೆದ ಡಿಸೆಂಬರ್‌ನಲ್ಲಿ ದಂಪತಿ ಕುಟುಂಬ ಸಮೇತ ಕೆ.ಆರ್.ಪುರದ ಸೀಗೆಹಳ್ಳಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಲಕ್ಷ್ಮೀನಾರಾಯಣ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಚಿನ್ನಾ ಗೃಹಿಣಿಯಾಗಿದ್ದಳು.ಈ ಮಧ್ಯೆ ಚಿನ್ನಾ ಡೆಲಿವರಿ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಬಳಿಕ ಸೂಕ್ತ ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ಆದರೆ, ಬೆಂಗಳೂರಿಗೆ ಬಂದಾಗಲೂ ಸಣ್ಣ-ಪುಟ್ಟ ವಿಚಾರಕ್ಕೆ ಪತಿ ಜತೆ ಗಲಾಟೆ ಮಾಡಿ, ಮಗುವನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುತ್ತಿದ್ದಳು. ಆಗ ಪತಿ ಬುದ್ದಿವಾದ ಹೇಳಿ ಆಕೆಗೆ ಸಮಾಧಾನ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕತ್ತುಕೊಯ್ದುಕೊಂಡು ಆತ್ಮಹತ್ಯೆ
    ಪತಿ ಜತೆಗಿನ ಕೌಟುಂಬಿಕ ವಿಚಾರ ಹಾಗೂ ತನ್ನ ಆರೋಗ್ಯ ಸಮಸ್ಯೆಯಿಂದ ಬೇಸತ್ತಿದ್ದ ಚಿನ್ನಾ ಮಾ.೧೭ರಂದು ಪತಿ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ತೆರಳಿದ್ದಾಗ, ಹಾಸಿಗೆ ಮೇಲೆ ಮಲಗಿದ್ದ ಮಗವನ್ನು ಉಸಿರುಗಟ್ಟಿಸಿಕೊಲೆಗೈದು, ಬಳಿಕ ಚಾಕುವಿನಿಂದ ತಾನೂ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೆಲ ಹೊತ್ತಿನ ಪತಿ ಮನೆಗೆ ಬಂದಾಗ ಚಿನ್ನಾ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕೂಡಲೇ ಸ್ಥಳೀಯರ ನೆರವು ಪಡೆದು ಪತ್ನಿ ಮತ್ತು ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ೧೧೨ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆದರೆ, ಮಗು ಈಗಾಗಲೇ ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದರು. ಬಳಿಕ ಪತ್ನಿ ಚಿನ್ನಾಗೆ ಭಾರೀ ರಕ್ತಸ್ರಾವವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಪತಿ ಲಕ್ಷ್ಮೀನಾರಾಯಣ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts