ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಉಡುಪಿಯಲ್ಲಿ ಮಿಶ್ರ ಪ್ರತಿಕ್ರಿಯೆ


ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2 ದಿನ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದು, ಮಂಗಳವಾರ ಉಡುಪಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾರಿಗೆ ಸೇವೆ ವ್ಯತ್ಯವಾಗಿದ್ದು, ಅಂಗಡಿ, ಮುಂಗಟ್ಟು, ಹೋಟೆಲ್‌ಗಳು ಎಂದಿನಂತೆ ಕಾರ‌್ಯಾಚರಿಸಿವೆ. ನಗರದಲ್ಲಿ ಸ್ವಂತ ಬೈಕ್, ಕಾರುಗಳಲ್ಲಿ ಜನರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸರು ಭದ್ರತೆಯಲ್ಲಿದ್ದರು.

ಕಾರ್ಮಿಕ ಸಂಘಟನೆಗಳ ಪ್ರತಿಭಟನೆ: ರಾಷ್ಟ್ರವ್ಯಾಪಿ ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲೆಯ ಕಾರ್ಮಿಕ ಸಂಘಟನೆ ಜಂಟಿ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದಲ್ಲಿ ನಡೆಯಿತು. ಬೆಳಗ್ಗೆ ಅಜ್ಜರಕಾಡಿನ ಎಲ್‌ಐಸಿ ಕಚೇರಿ ಆವರಣದಿಂದ ಮೆರವಣಿಗೆ ಆರಂಭಗೊಂಡು ಜೋಡುಕಟ್ಟೆ, ಕೆ.ಎಂ. ಮಾರ್ಗ ಮುಖಾಂತರ ಮಹಾತ್ಮ ಗಾಂಧಿ ಪ್ರತಿಮೆ ಸುತ್ತುವರಿದು, ಬಿಎಸ್‌ಎನ್‌ಎಲ್ ಕಚೇರಿ ರಸ್ತೆಯಿಂದ ಕಾರ್ಪೋರೇಶನ್ ಬ್ಯಾಂಕ್‌ನ ಕಚೇರಿ ಆವರಣದಲ್ಲಿ ಸಮಾರೋಪಗೊಂಡಿತು. ವಿಜಯ ಬ್ಯಾಂಕ್ ವಿಲೀನ ವಿಚಾರ ಸಂಬಂಧಿಸಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಜಯ ಬ್ಯಾಂಕ್‌ನ್ನು ನಷ್ಟದಲ್ಲಿರುವ ದೇನಾ ಮತ್ತು ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸುವ ಮೂಲಕ ಸಾಲ ವಾಪಸ್ಸು ನೀಡದ ದೊಡ್ಡ ಉದ್ದಿಮೆದಾರರನ್ನು ಕೇಂದ್ರ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಸಿಐಟಿಯು ಮುಖಂಡ ಪಿ.ವಿಶ್ವನಾಥ್ ರೈ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಸಂಘಟನೆ ಜಂಟಿ ಸಮಿತಿ ಸಂಚಾಲಕ ಕೆ. ಶಂಕರ್ ಮಾತನಾಡಿದರು. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸಂಚಾಲಕ ಎ.ಶ್ರೀಪತಿ ಆಚಾರ್ಯ ವಿವಿಧ ಕಾರ್ಮಿಕ ಸಂಘಟನೆ ಮುಖಂಡರಾದ ಗಣೇಶ್ ಕೋಟ್ಯಾನ್, ಕೆ.ವಿ. ಭಟ್, ರಾಮ್‌ಮೋಹನ್, ಶಶಿಧರ ಗೊಲ್ಲ, ರವೀಂದ್ರ ಎ, ಪ್ರಭಾಕ ಬಿ.ಕುಂದರ್ ಮೊದಲಾದವರಿದ್ದರು.

ಬೆಲೆಗಳು ಹೆಚ್ಚುತ್ತಿರುವ ಹಿಂದಿನ ಪರಿಸ್ಥಿತಿಯಲ್ಲಿ ಕಾರ್ಮಿಕ ಕನಿಷ್ಠ ವೇತನ 18 ಸಾವಿರ ರೂ. ನಿಗದಿಪಡಿಸಬೇಕು. ಕುಶಲತೆ ಆಧಾರದಲ್ಲಿ ಸಂಬಳ ಹೆಚ್ಚಳ ಮಾಡಬೇಕು.
| ಕೆ. ಶಂಕರ್, ಕಾರ್ಮಿಕ ಸಂಘಟನೆ ಜಂಟಿ ಸಮಿತಿ ಸಂಚಾಲಕ

ಎನ್‌ಪಿಎಸ್ ಹಿಂಪಡೆಯಲು ಅಂಚೆ ನೌಕರರ ಒತ್ತಾಯ
ಉಡುಪಿ: ಕೇಂದ್ರ ಸರ್ಕಾರ ಹೊಸತಾಗಿ ಜಾರಿಗೊಳಿಸಿದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಹಿಂಪಡೆದು, ಹಿಂದಿನ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಬೇಕು ಮತ್ತು ಇತರ ಬೇಡಿಕೆಗಳಿಗೆ ಆಗ್ರಹಿಸಿ ರಾಷ್ಟ್ರೀಯ ಅಂಚೆ ಇಲಾಖೆ ನೌಕರರ ಸಂಘ ಮತ್ತು ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘಟನೆ ಮಂಗಳವಾರ ನಗರದ ಪ್ರಧಾನ ಅಂಚೆ ಕಚೇರಿ ಮುಂದೆ ಮುಷ್ಕರ ನಡೆಸಿತು.

ಅಂಚೆ ಸೇವೆಗಳ ಖಾಸಗೀಕರಣ, ವಾಣಿಜ್ಯೀಕರಣ ಮತ್ತು ಹೊರಗುತ್ತಿಗೆ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಗ್ರಾಮೀಣ ಅಂಚೆ ನೌಕರರ ಬಗ್ಗೆ ಕಮಲೇಶ್ ಚಂದ್ರ ಸಮಿತಿ ಮಾಡಿರುವ ಶಿಫಾರಸ್ಸು ಜಾರಿಗೆ ತರಬೇಕು ಮತ್ತು ಕಾರ್ಮಿಕರ ಮಾನ್ಯತೆ ನೀಡಬೇಕು, ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ವೇತನ ಮತ್ತು ಇತರ ಭತ್ಯೆಗಳ ಹೆಚ್ಚಳದ ಆದೇಶ ತಕ್ಷಣ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಂಚೆ ಇಲಾಖೆ ವಾರದಲ್ಲಿ 5 ದಿನಗಳ ಸೇವೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು. ಅಖಿಲ ಭಾರತ ಅಂಚೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಜಯ ನಾಯರಿ, ರಾಷ್ಟ್ರೀಯ ಅಂಚೆ ಇಲಾಖೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹೇಮಂತ ಕುಮಾರ್, ರಾಷ್ಟ್ರೀಯ ಗ್ರಾಮೀಣ ಅಂಚೆಸೇವಕರ ಸಂಘಟನೆ ಜಿಲ್ಲಾ ಅಧ್ಯಕ್ಷ ಹಿರಿಯಣ್ಣ ಮಡಿವಾಳ ಮೊದಲಾದವರಿದ್ದರು.

ಗೋಳಿಯಂಗಡಿಯಲ್ಲಿ ಮುಷ್ಕರ ನೀರಸ: ಗೋಳಿಯಂಗಡಿ ಪೇಟೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರ್ತಕರು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರು. ರಿಕ್ಷಾ, ಸರಕು ಸಾಗಣಿಕೆ ಬಾಡಿಗೆ ವಾಹನಗಳು ಎಂದಿನಂತೆ ಕಾರ‌್ಯಾಚರಿಸಿವೆ. ಖಾಸಗಿ ಬಸ್‌ಗಳು ಸಂಚರಿಸದಿರುವುದರಿಂದ ಪೇಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು.

ಗಂಗೊಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮಂಗಳವಾರ ಗಂಗೊಳ್ಳಿಯಲ್ಲಿ ನೀರಸ, ತ್ರಾಸಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳವಾರ ಬೆಳಗ್ಗಿನಿಂದಲೇ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆಟೋ ರಿಕ್ಷಾ ಸಂಚಾರ ವಿರಳವಾಗಿತ್ತು. ಲಾರಿ ಮತ್ತಿತರ ವಾಹನಗಳು ಎಂದಿನಂತೆ ಸಂಚರಿಸುತ್ತಿದ್ದುವು. ಮಂಗಳವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಅಂಗಡಿ ಮುಂಗ್ಗಟ್ಟುಗಳು ತೆರೆದಿದ್ದು, ವ್ಯಾಪಾರಸ್ಥರು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ನಿರತರಾಗಿದ್ದರು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಿತ್ತು. ಗಂಗೊಳ್ಳಿ ಹಾಗೂ ಮರವಂತೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆ ಯಾವುದೇ ಅಡೆತಡೆ ಇಲ್ಲದೆ ಸಾಗಿತ್ತು.

ತ್ರಾಸಿಯಲ್ಲಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಟೋ ರಿಕ್ಷಾಗಳು ಸಂಚಾರ ಸ್ಥಗಿತಗೊಳಿಸಿದ್ದವು. ಅಂಗಡಿ ಮುಂಗ್ಗಟ್ಟುಗಳು ಮುಚ್ಚಿದ್ದವು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪ್ರಯಾಣಿಕರಿಂದ ಸದಾ ಜಿನುಗುಡುತ್ತಿದ್ದ ತ್ರಾಸಿ ಜಂಕ್ಷನ್ ಇಂದು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು.

ರಸ್ತೆ ತಡೆ, ಮಾತಿನ ಚಕಮಕಿ: ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಗಂಗೊಳ್ಳಿ ರಾಮ ಮಂದಿರದ ಬಳಿ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದರು. ಅಲ್ಲದೆ ಗಂಗೊಳ್ಳಿಯಲ್ಲಿ ಅಂಗಡಿಗಳನ್ನು ಮುಚ್ಚುವಂತೆ ಬಲವಂತಪಡಿಸಿದರು. ಅಂಗಡಿಗಳನ್ನು ಮುಚ್ಚುವಂತೆ ಬಲವಂತ ಮಾಡುತ್ತಿದ್ದಾಗ ಅಂಗಡಿ ಮಾಲೀಕರು ಹಾಗೂ ಕಾರ್ಮಿಕ ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಗಂಗೊಳ್ಳಿ ಪೊಲೀಸರು ವಾಹನ ಸಂಚಾರಕ್ಕೆ ಅಡ್ಡಪಡಿಸುತ್ತಿದ್ದ ಕಾರ್ಮಿಕ ಸಂಘಟನೆ ಕಾರ್ಯಕರ್ತರನ್ನು ಚದುರಿಸಿ ಬಲವಂತದ ಬಂದ್ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಮೆರವಣಿಗೆ
ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಹಿನ್ನೆಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಗಂಗೊಳ್ಳಿ ಶ್ರೀ ರಾಮ ಮಂದಿರದ ಬಳಿಯಿಂದ ಬಂದರು ಪೋರ್ಟ್ ಆಫೀಸ್ ತನಕ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ವಾಸಪ್ಪ ನಾಯ್ಕ ನೇತೃತ್ವದಲ್ಲಿ ಎಲ್ಲೆಡೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಬ್ರಹ್ಮಾವರದಲ್ಲಿ ರಾಷ್ಟ್ರವ್ಯಾಪಿ ಮುಷ್ಕರ ನೀರಸ: ಬ್ರಹ್ಮಾವರ ಪರಿಸರದಲ್ಲಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಪ್ರಯುಕ್ತ ಬಸ್ ಸಂಚಾರ ಸ್ಥಗಿತದಿಂದ ಪ್ರಯಾಣಿಕರಿಗೆ ತೊಂದರೆ ಹೊರತಾಗಿ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇಲ್ಲಿನ ಪರಿಸರದ ಬಾರಕೂರು, ಕುಂಜಾಲು, ಪೇತ್ರಿ, ನೀಲಾವರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಂಗಡಿಗಳು ಎಂದಿನಂತೆ ತೆರೆದಿತ್ತು. ಬಾರಕೂರಿನಲ್ಲಿ ಆಟೋಗಳು ಟ್ಯಾಕ್ಸಿಗಳು ಎಂದಿನಂತೆ ನಿಲ್ದಾಣದಲ್ಲಿ ಇತ್ತು. ಬ್ಯಾಂಕ್, ತಾಲೂಕು ಕಚೇರಿ, ಆಸ್ಪತ್ರೆಗಳು, ಬೃಹತ್ ಮಾರಾಟ ಮಳಿಗೆಗಳು ಎಂದಿನಂತೆ ತೆರೆದಿತ್ತು.