ಯಳಂದೂರು: ವಿವಾಹಿತ ಅಪ್ರಾಪ್ತೆ ಗರ್ಭಿಣಿಯಾಗಿದ್ದು, ಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾದೇಶ್ ಎಂಬಾತ ಒಂದು ವರ್ಷದ ಹಿಂದೆ ಬಾಲಕಿಯನ್ನು ಮದುವೆಯಾಗಿದ್ದ. ಹಲವು ತಿಂಗಳು ಈಕೆ ಜತೆ ಸಂಸಾರ ನಡೆಸಿದ್ದ ಈತ ಕೆಲ ದಿನಗಳ ಹಿಂದೆ ಇವಳನ್ನು ತನ್ನ ಅಜ್ಜಿ ಊರಾದ ಬಿಳಿಗಿರಂಗನ ಬೆಟ್ಟದಲ್ಲಿ ಬಿಟ್ಟು, ಕೆಲಸಕ್ಕೆ ಬೇರೆ ಕಡೆ ತೆರಳಿದ್ದ. ಮಂಗಳವಾರ ಬಾಲಕಿ ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಪಾಲಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಈಕೆಯ ವಯಸ್ಸಿನ ಬಗ್ಗೆ ಅನುಮಾನ ಬಂದು ದಾಖಲಾತಿ ಪರಿಶೀಲನೆ ನಡೆಸಿದಾಗ ಈಕೆ ಅಪ್ರಾಪ್ತೆ ಎಂಬುದು ಗೊತ್ತಾಗಿದೆ. ಕೂಡಲೇ ಶಿಶು ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಇವರಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಸರಸ್ವತಿ ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪತಿ ಮಾದೇಶ್ ವಿರುದ್ಧ ಬುಧವಾರ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ.