ಹಾಸನದಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಾರಾ ಮಾಜಿ ಸಚಿವ ಎ.ಮಂಜು?

ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ವಿರೋಧಿಸಿಕೊಂಡು ಬರುತ್ತಿರುವ ಮಾಜಿ ಸಚಿವ ಎ. ಮಂಜು ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿರುವುದು ಇದಕ್ಕೆ ಕಾರಣ.

ಜೆಡಿಎಸ್​ನಿಂದ ಈ ಬಾರಿ ತಮ್ಮ ಮೊಮ್ಮಗ ಹಾಗೂ ರೇವಣ್ಣ ಅವರ ಪುತ್ರ ಪ್ರಜ್ವಲ್​ ರೇವಣ್ಣ ಹಾಸನದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ಈಗಾಗಲೆ ಘೋಷಿಸಿದ್ದಾರೆ. ಈ ಕ್ಷೇತ್ರವನ್ನು ಕಾಂಗ್ರೆಸ್​ ತನ್ನ ಮಿತ್ರಪಕ್ಷ ಜೆಡಿಎಸ್​ಗೆ ಬಿಟ್ಟು ಕೊಡುತ್ತಿರುವ ಕಾರಣ ಕಾಂಗ್ರೆಸ್​ನ ಎ. ಮಂಜು ಪಕ್ಷ ಬದಲಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

1 ಲಕ್ಷ ಮತಗಳ ಅಂತರದ ಸೋಲು
ಕಳೆದ ಬಾರಿ ಜೆಡಿಎಸ್​ನಿಂದ ಮಾಜಿ ಪ್ರಧಾನಿ ದೇವೇಗೌಡ ಸ್ಪರ್ಧಿಸಿದ್ದರು. ಇವರ ವಿರುದ್ಧ ಕಾಂಗ್ರೆಸ್​ನಿಂದ ಎ. ಮಂಜು ಕಣಕ್ಕಿಳಿದಿದ್ದರು. ಆಗ ಅವರು 1 ಲಕ್ಷ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಎ. ಮಂಜು ಬಿಜೆಪಿ ಸೇರ್ಪಡೆಗೊಂಡು ದೇವೇಗೌಡರ ಕುಟುಂಬದವರಿಗೆ ಪ್ರಬಲ ಪೈಪೋಟಿ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)