ಹೊರಟಿದ್ದು ಅತ್ತೆ ಮನೆಗೆ, ಸೇರಿದ್ದು ಆಸ್ಪತ್ರೆಗೆ… ಆಪತ್ತು ತಂದ ಆ ಚಿಕ್ಕದೊಂದು ಅನುಮಾನ ಏನು ಗೊತ್ತಾ…?

ಬಾರಾಬಂಕಿ: ಆತ ಅತ್ತೆ ಮನೆಗೆ ಹೋಗಿ ಪತ್ನಿಯ ಕೈ ಅಡುಗೆ ಉಂಡು ಮಲಗುವ ಆಲೋಚನೆಯಲ್ಲಿ ರಾತ್ರಿ ಕತ್ತಲೆಯಲ್ಲೇ ಹೆಜ್ಜೆ ಹಾಕುತ್ತಿದ್ದ. ಆತನ ದುರದೃಷ್ಟ, ಬೀದಿ ನಾಯಿಗಳು ಬೆನ್ನಟ್ಟಿದವು. ಅವುಗಳಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ಇದ್ದ ಮನೆಯೊಳಗೆ ತೂರಿಕೊಂಡ…

ಕಳ್ಳನಿರಬೇಕು ಎಂಬ ಅನುಮಾನದಲ್ಲಿ ಆತನನ್ನು ಹಿಡಿದ ಗ್ರಾಮಸ್ಥರು ಚೆನ್ನಾಗಿ ಥಳಿಸಿದರು. ತಾನು ಕಳ್ಳನಲ್ಲ ಎಂದು ಹೇಳುತ್ತಿದ್ದರೂ ಕೇಳದೆ, ಆತನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದರು… ಅದೃಷ್ಟವಶಾತ್​ ಯಾರೋ ಆತನ ಗುರುತು ಹಿಡಿದು, ಬೆಂಕಿ ಆರಿಸಿ ಆಸ್ಪತ್ರೆಗೆ ದಾಖಲಿಸಿದರು…

ಇದು ಉತ್ತರ ಪ್ರದೇಶದ ಬಾರಾಬಂಕಿ ಬಳಿಯ ರಾಘೋಪುರ್​ ಎಂಬ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿರುವ ಘಟನೆ ಇದು. ತಿಂದೋಲಾ ಗ್ರಾಮದ ನಿವಾಸಿ ಸುಜಿತ್​ ಕುಮಾರ್​ ಟಾಯಿ ಕಲಾ ಗ್ರಾಮದಲ್ಲಿರುವ ತನ್ನ ಅತ್ತೆ ಮನೆಗೆ ತೆರಳುತ್ತಿದ್ದ. ವೃತ್ತಿಯಿಂದ ಪೇಂಟರ್​ ಆಗಿರುವ ಈತ ತಡರಾತ್ರಿ 1.30ರಲ್ಲಿ ಏನೋ ಆಲೋಚನೆ ಮಾಡಿಕೊಂಡು ಹೋಗುತ್ತಿದ್ದಾಗ ನಾಯಿಗಳು ಬೆನ್ನಟ್ಟಿದ್ದರಿಂದ ಅವುಗಳಿಂದ ಬಚಾವಾಗಲು ಪಕ್ಕದಲ್ಲೇ ಇದ್ದ ಮನೆಯೊಳಗೆ ಹೊಕ್ಕಿದ್ದ.

ಆದರೆ ಆ ಮನೆಯವರು ಈತನನ್ನು ಕಳ್ಳ ಎಂದು ಭಾವಿಸಿ, ಹಿಡಿದು ಕಟ್ಟಿ ಹಾಕಿ ಚೆನ್ನಾಗಿ ಥಳಿಸಿದರು. ಬಳಿಕ ಗ್ರಾಮಸ್ಥರೆಲ್ಲರೂ ಸೇರಿ ಆತನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಲು ಯತ್ನಿಸಿದರು. ಯಾರೋ ಪರಿಚಯದವರು ಆತನನ್ನು ಬಚಾವ್​ ಮಾಡಿದರು. ಈತನ ಪತ್ನಿ ಪೂನಂ ನೀಡಿದ ದೂರು ಆಧರಿಸಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಸದ್ಯ ಆತನನ್ನು ಲಕ್ನೋ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗ ಆತನನ್ನು ಕೊಲ್ಲಲು ಯತ್ನಿಸಿದ ಆರೋಪದಲ್ಲಿ ಉಮೇಶ್​ ಯಾದವ್​ ಮತ್ತು ಶ್ರವಣ್​ ಯಾದವ್​ ಅವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಬಾರಾಬಂಕಿ ಜಿಲ್ಲೆಯ ಎಸ್​ಪಿ ಆಕಾಶ್​ ತೋಮರ್​ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *