ಈತ ತನ್ನ ಎಂಟು ತಿಂಗಳ ಮಗನನ್ನು ಕ್ರೂರವಾಗಿ ಹಿಂಸಿಸಿ ಕೊಲ್ಲಲು ಕಾರಣ ಏನು ಗೊತ್ತಾ?

ಲಖನೌ: ಪತ್ನಿಯೊಂದಿಗೆ ಜಗಳವಾಡಿಕೊಂಡ ಭೂಪ ತನ್ನ ಎಂಟು ತಿಂಗಳ ಮಗನನ್ನು ಹತ್ಯೆಗೈದ ಘಟನೆ ನಿಗೋಹಾ ಏರಿಯಾದಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಎಸ್​ಪಿ ವಿಕ್ರಾಂತ್​ ವೀರ್​ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿ ಸುರೇಂದ್ರ ಸಾಹು (30) ಕೂಲಿ ಕಾರ್ಮಿಕ. ಈತ ಮಂಗಳವಾರ ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ಆಗಮಿಸಿದ್ದಾನೆ. ಆತನ ಪತ್ನಿ ಲಕ್ಷ್ಮೀ ಬಾಗಿಲು ತೆಗೆದಿದ್ದಾರೆ. ನಂತರ ತಮ್ಮ ಪಾಡಿಗೆ ಕೆಲಸ ಮಾಡಲು ಒಳಗೆ ಹೋಗಿದ್ದಾರೆ. ಆದರೆ ಸುರೇಂದ್ರ ಸಾಹು ಆಕೆ ತನಗೆ ನೀರು ಕೊಡಲಿಲ್ಲ ಎಂಬ ಸಣ್ಣ ಕಾರಣಕ್ಕೆ ಕೋಪದಿಂದ ಕೂಗಾಡಲು ಶುರು ಮಾಡಿದ್ದಾನೆ. ಅಲ್ಲದೆ ಪತ್ನಿಯನ್ನು ನಿಂದಿಸತೊಡಗಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ ಅಲ್ಲಿಯೇ ಕಾಟ್​ ಮೇಲೆ ಮಲಗಿ ನಿದ್ರಿಸುತ್ತಿದ್ದ ಎಂಟು ತಿಂಗಳ ಗಂಡುಮಗುವನ್ನು ರಭಸದಿಂದ ಎತ್ತಿಕೊಂಡು ಕೋಣೆಯ ಇನ್ನೊಂದು ಕಡೆಗೆ ಹಾರಿಸಿದ. ಇದರ ಪರಿಣಾಮ ಮಗು ಗೋಡೆಗೆ ಜಪ್ಪಿ ನೆಲದ ಮೇಲೆ ಬಿತ್ತು. ಮಗು ಅತ್ತಷ್ಟೂ ಸಾಹು ಕೋಪ ಇನ್ನಷ್ಟು ಹೆಚ್ಚಿತು. ಆ ಮಗು ಸಾಯುವವರೆಗೂ ಅದನ್ನು ಎತ್ತಿಎತ್ತಿ ನೆಲದ ಮೇಲೆ ಎಸೆದಿದ್ದಾನೆ. ಆತನ ಪತ್ನಿ ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದೆಲ್ಲ ಘಟನೆಯನ್ನೂ ಸಾಹು ಪತ್ನಿ ಲಕ್ಷ್ಮೀ ನಮಗೆ ವಿವರಿಸಿದ್ದಾರೆ ಎಂದು ಎಸ್​ಪಿ ತಿಳಿಸಿದ್ದಾರೆ.

ಇಷ್ಟೆಲ್ಲ ಆದಮೇಲೆ ಸಾಹು ಮನೆಯಿಂದ ಓಡಿಹೋಗಿದ್ದಾನೆ. ಲಕ್ಷ್ಮೀ ನೆರೆಹೊರೆಯವರ ಸಹಾಯದಿಂದ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋದರು. ಆದರೆ ಅಷ್ಟರಲ್ಲಾಗಲೇ ಆ ಮಗು ಮೃತಪಟ್ಟಿತ್ತು. ಮಗುವಿನ ತಲೆಗೆ ತೀವ್ರ ಏಟು ಬಿದ್ದಿದೆ. ಹಾಗೇ ಭುಜ, ಕಾಲುಗಳು ಸ್ಥಾನಪಲ್ಲಟ ಆಗಿದೆ. ಮುಖ ಕೂಡ ವಿರೂಪಗೊಂಡಿದೆ ಎಂಬುದು ಪೋಸ್ಟ್​ ಮಾರ್ಟಮ್​ ವೇಳೆ ತಿಳಿದುಬಂದಿದೆ. ಆರೋಪಿ ಕೂಡ ಅವನೇ ಬಂದು ತನ್ನ ಮಗನನ್ನು ಕೊಂದಿದ್ದಾಗಿ ಒಪ್ಪಿಕೊಂಡ. ಆತನ ಕಣ್ಣಲ್ಲಿ ಒಂದು ಸ್ವಲ್ಪವೂ ಪಶ್ಚಾತ್ತಾಪ ಇರಲಿಲ್ಲ. ಆತ ಸದ್ಯ ಜೈಲಿನಲ್ಲಿ ಇದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

Leave a Reply

Your email address will not be published. Required fields are marked *