More

    ಲಕ್ಷ್ಮೇಶ್ವರದಲ್ಲಿ ‘ಕಲಾ ವಿಭಾಗ’ಕ್ಕೆ ಕಗ್ಗಂಟು

    ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ 23 ವರ್ಷಗಳ ಹಿಂದೆಯೇ ಸರ್ಕಾರಿ ಪಿಯು ಕಾಲೇಜ್ ಪ್ರಾರಂಭವಾಗಿದ್ದರೂ ಇದುವರೆಗೂ ಕಲಾ (ಆರ್ಟ್ಸ್) ವಿಭಾಗ ಇಲ್ಲದಿರುವುದು ದುರ್ದೈವದ ಸಂಗತಿ.


    ಗದಗ ಜಿಲ್ಲೆಯಲ್ಲಿಯೇ ಲಕ್ಷ್ಮೇಶ್ವರ ತಾಲೂಕು ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿದೆ. ಲಕ್ಷ್ಮೇಶ್ವರ ಪ್ರತ್ಯೇಕ ತಾಲೂಕು ಕೇಂದ್ರವಾಗಿ 6 ವರ್ಷ ಕಳೆದಿದೆ. ಆದಾಗ್ಯೂ ಇಲ್ಲಿ ಕಲಾ ವಿಭಾಗ ಆರಂಭವಾಗಿಲ್ಲ. ತಾಲೂಕಿನಲ್ಲಿ ಪಿಯು ಕಾಲೇಜ್ ಇರುವುದು ಲಕ್ಷ್ಮೇಶ್ವರ ಮತ್ತು ಶಿಗ್ಲಿಯಲ್ಲಿ ಮಾತ್ರ.


    ತಾಲೂಕಿನ ಕೇಂದ್ರ ಸ್ಥಳ ಲಕ್ಷ್ಮೇಶ್ವರ ಪಟ್ಟಣ 50 ಸಾವಿರ ಜನಸಂಖ್ಯೆ ಹೊಂದಿದೆ. ಪಟ್ಟಣದಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜ್, ಪಾಲಿಟೆಕ್ನಿಕ್, ಐಟಿಐ, ಪದವಿ, ಪಿಯುಸಿ, ಹತ್ತಾರು ಹೈಸ್ಕೂಲ್‌ಗಳಿದ್ದು, ವಿದ್ಯಾಕೇಂದ್ರವೇ ಆಗಿದೆ. ಆದರೆ, ಸರ್ಕಾರಿ ಪದವಿ ಕಾಲೇಜು ಇಲ್ಲ. ಪಿಯು ಕಾಲೇಜ್ ಇದ್ದರೂ ಇಲ್ಲಿ ಆರ್ಟ್ಸ್ ವಿಭಾಗ ಇಲ್ಲದ್ದರಿಂದ ಆರ್ಟ್ಸ್ ಓದುವ ವಿದ್ಯಾರ್ಥಿಗಳು ನೆರೆಯ ತಾಲೂಕುಗಳಿಗೆ ಅಲೆದಾಡಬೇಕಾಗಿದೆ.


    ಲಕ್ಷ್ಮೇಶ್ವರ ತಾಲೂಕಿನಲ್ಲಿ ಪ್ರತಿ ವರ್ಷ ಅಂದಾಜು 2 ಸಾವಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆ ಹೊಂದುತ್ತಾರೆ. ಇವರಲ್ಲಿ ಬಡ ವಿದ್ಯಾರ್ಥಿಗಳೇ ಹೆಚ್ಚಿದ್ದು, ಅನಿವಾರ್ಯವಾಗಿ ಆರ್ಟ್ಸ್ ವಿಭಾಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಆರ್ಟ್ಸ್ ವಿಭಾಗದಲ್ಲಿ ಕಲಿಯಬೇಕೆಂದರೆ ಲಕ್ಷ್ಮೇಶ್ವರ ಪಟ್ಟಣ ಬಿಟ್ಟು ಶಿಗ್ಲಿ, ಮುಳಗುಂದ, ಗದಗನತ್ತ ಮುಖ ಮಾಡಬೇಕಾಗಿದೆ.


    23 ವರ್ಷಗಳ ಹಿಂದೆಯೇ ಪಿಯು ಕಾಲೇಜ್ ಪ್ರಾರಂಭವಾದರೂ ಸ್ವಂತ ಕಟ್ಟಡ ಇಲ್ಲದ್ದರಿಂದ ಕೆಲ ವರ್ಷ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು. 10 ವರ್ಷದ ಹಿಂದೆ ಕಡಿಮೆ ಕೊಠಡಿ ಇರುವ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿದೆ. 5 ವರ್ಷದಿಂದ ಹೆಚ್ಚುವರಿ ಕೊಠಡಿಗಳುಳ್ಳ ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಮಾತ್ರ ಇದೆ. ಆರ್ಟ್ಸ್ ಓದುವ ವಿದ್ಯಾರ್ಥಿಗಳು ನಿತ್ಯ ಬಸ್ಸಿನಲ್ಲಿ ಅಲೆಯಬೇಕು. ಇಲ್ಲವೇ ಇಷ್ಟವಿಲ್ಲದಿದ್ದರೂ ವಿಜ್ಞಾನ, ವಾಣಿಜ್ಯ ವಿಷಯ ಆಯ್ದುಕೊಳ್ಳಬೇಕಾಗಿದೆ.


    ಕಾಲೇಜು ಪ್ರಾರಂಭವಾಗಿ 2 ದಶಕ ಕಳೆದಿವೆ. ಇಲ್ಲಿ ಆರ್ಟ್ಸ್ ವಿಭಾಗಕ್ಕೆ ಅನುಮತಿ ಇದ್ದರೂ ಏಕೆ ಈ ಕಾಲೇಜಿನಲ್ಲಿ ಕಲಾ ವಿಭಾಗ ತೆರೆಯುತ್ತಿಲ್ಲ? ಇದು ಇಲ್ಲಿನ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಹೊಸ ಸರ್ಕಾರಿ ಪದವಿ ಕಾಲೇಜು ಜತೆಗೆ ಮತ್ತೊಂದು ಪಿಯು ಕಾಲೇಜು ಪ್ರಾರಂಭಿಸಬೇಕು. ಈಗಿರುವ ಪಿಯು ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಕಲಾ ವಿಭಾಗ ಪ್ರಾರಂಭಿಸಬೇಕು. ಈ ಬಗ್ಗೆ ಡಿಡಿಪಿಯು ಕೂಡಲೇ ಆದೇಶಿಸಬೇಕು.

    —ಮಹಾಂತೇಶ ಮಣಕವಾಡ-ಎಬಿವಿಪಿ ತಾಲೂಕು ಸಂಚಾಲಕ

    ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಲಕ್ಷ್ಮೇಶ್ವರ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಸೈನ್ಸ್, ಕಾಮರ್ಸ್ ಜತೆಗೆ ಆರ್ಟ್ಸ್ ವಿಭಾಗ ಪ್ರಾರಂಭಿಸುವಂತೆ ನಿರ್ದೇಶನ ನೀಡುತ್ತೇನೆ ಮತ್ತು ಪೂರಕ ಸಿಬ್ಬಂದಿ, ಸೌಲಭ್ಯ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
    — ಕರಿಸಿದ್ಧಪ್ಪ, ಡಿಡಿಪಿಯು


    ಖಾಸಗಿ ಕಾಲೇಜಿನಲ್ಲಿ ಹೆಚ್ಚು ಶುಲ್ಕ ಪಾವತಿಸಿ ಕಲಿಯುವುದು ನನ್ನಂತಹ ಬಡ ವಿದ್ಯಾರ್ಥಿಗಳಿಗೆ ಕಷ್ಟ. ಅಲ್ಲದೆ, ಮೊದಲೇ ಬಸ್‌ಗಳ ಕೊರತೆ ಇರುವುದರಿಂದ ನಿತ್ಯ ಬಸ್‌ನಲ್ಲಿ ಸಂಚರಿಸಿ ಬೇರೆ ಕಡೆ ಹೋಗಿ ಕಲಿಯುವುದು ತುಂಬಾ ಕಷ್ಟಕರ. ಆದ್ದರಿಂದ ಲಕ್ಷ್ಮೇಶ್ವರದಲ್ಲಿಯೇ ಇರುವ ಕಾಲೇಜಿನಲ್ಲಿ ಆರ್ಟ್ಸ್ ವಿಭಾಗ ಪ್ರಾರಂಭಿಸಿ ಅನುಕೂಲ ಕಲ್ಪಿಸಬೇಕಿದೆ.
    — ಶರಣು ಅಮರಪ್ಪನವರ, ವಿದ್ಯಾರ್ಥಿ ಲಕ್ಷ್ಮೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts