ಗಜೇಂದ್ರಗಡ: ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವದೇಗೊಳ ಗ್ರಾಮದ ತೋಟವೊಂದರಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಮಂಗಳವಾರ ತಡರಾತ್ರಿ ಚಿರತೆಯೊಂದು ಸೆರೆಯಾಗಿದೆ.
ಹಲವು ದಿನಗಳಿಂದ ಚಿರತೆ ಕಾಣಿಸುತ್ತಿದೆ ಎಂದು ಗ್ರಾಮಸ್ಥರು, ರೈತರು ದೂರುತ್ತಿದ್ದರು. ದೂರಿನನ್ವಯ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸುಮಾರು ಒಂದು ವರ್ಷದ ಹೆಣ್ಣು ಚಿರತೆ ಬಿದ್ದಿದ್ದು, ಜನರಲ್ಲಿ ನಿರಾಳ ಜತೆಗೆ ಆತಂಕವನ್ನು ಹೆಚ್ಚಿಸಿದೆ. ಸೆರೆ ಸಿಕ್ಕಿರುವುದು ಮರಿ ಚಿರತೆ ಆಗಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನಷ್ಟು ಚಿರತೆಗಳು ಇರಬಹುದು ಎಂದು ರೈತರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೆರೆ ಸಿಕ್ಕಿರುವ ಚಿರತೆಯ ತಾಯಿ ಸಿಟ್ಟಿನಿಂದ ಯಾರ ಮೇಲಾದರೂ ದಾಳಿ ನಡೆಸಿದರೆ ಏನು ಗತಿ? ಎಂದು ಆತಂಕಗೊಂಡಿದ್ದಾರೆ.
ತಾಲೂಕಿನ ನಾನಾ ಗ್ರಾಮಗಳ ಗುಡ್ಡದಲ್ಲಿ ಇನ್ನೂ ಮೂರ್ನಾಲ್ಕು ಚಿರತೆಗಳಿದ್ದು ಸೆರೆ ಹಿಡಿಯಬೇಕು ಹಾಗೂ ಇನ್ನಷ್ಟು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ ರಾತ್ರಿ ಗಸ್ತು ಹೆಚ್ಚಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.
‘ಈಗ ಚಿರತೆ ಮರಿ ಸೆರೆಯಾಗಿದ್ದು, ಇನ್ನು ಅನೇಕ ಚಿರತೆಗಳಿವೆ. ಚಿರತೆ ಭಯದಿಂದ ಹೊಲದಲ್ಲಿ ಕೃಷಿ ಚಟುವಟಿಕೆ ನಿಲ್ಲಿಸಿದ್ದೇವೆ. ಹೀಗಾಗಿ ಆತ್ಮರಕ್ಷಣೆ ಹಾಗೂ ವನ್ಯಮೃಗಗಳ ಕಾಟದಿಂದ ಬಂದೂಕು ಪರವಾನಗಿ ಪಡೆಯಲು ಕಳೆದ 2 ವರ್ಷದ ಹಿಂದೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಮೀನಿನಲ್ಲಿಯೇ ವಾಸಿಸುವ ನಮಗೆ ಯಾವುದೇ ಪ್ರಾಣಿ ಹಾನಿಯದರೆ ಜಿಲ್ಲಾಡಳಿತವೇ ಹೊಣೆ’ ಎಂದು ರೈತ ಅಶೋಕ ಮಾಳೊತ್ತರ ಪ್ರತಿಕ್ರಿಯಿಸಿದರು.