ದುಡ್ಡಿಗಾಗಿ ಎ ಖಾತಾ ಸೇಲ್

ಬೆಂಗಳೂರು: ಅಕ್ರಮ-ಸಕ್ರಮ ಕೇಸಿನ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿರುವುದರಿಂದ ಸಾವಿರಾರು ಜನ ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದಾರೆ. ಆದರೆ, ಕೋರ್ಟ್ ತೀರ್ಪು ಮತ್ತು ಸರ್ಕಾರಿ ನಿಯಮಗಳು ಎಲ್ಲವನ್ನೂ ಗಾಳಿಗೆ ತೂರಿರುವ ಬಿಬಿಎಂಪಿ ಅಧಿಕಾರಿಗಳು ದುಡ್ಡಿಗಾಗಿ ಬಿ ಖಾತಾ ಇರುವ ಸ್ಥಳವನ್ನು ಎ ಖಾತಾಗೆ ಬದಲಾಯಿಸಿಕೊಟ್ಟಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ವಿಜಯವಾಣಿ ಬಯಲಿಗೆಳೆದಿದೆ.

1 ಪ್ರಕರಣಕ್ಕೆ 5 ರಿಂದ 10 ಲಕ್ಷ ರೂ. ಕೊಟ್ಟರೆ ಸಾಕು ಬಿ ಖಾತಾ ಸಲೀಸಾಗಿ ಎ ಖಾತಾ ಆಗಿ ಪರಿವರ್ತನೆ ಮಾಡಿಕೊಡುವಂಥ ದಂಧೆಯನ್ನು ಬಿಬಿಎಂಪಿ ಅಧಿಕಾರಿಗಳು ಶುರುವಿಟ್ಟು ಕೊಂಡಿದ್ದಾರೆ. 3 ವರ್ಷದ ಹಿಂದೆಯೂ ಇದೇ ಮಾದರಿಯಲ್ಲಿ ಅಕ್ರಮ ಖಾತೆ ನೀಡಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆಗ, ಕಂದಾಯ ಅಧಿಕಾರಿ ಸೇರಿ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವ ಅಕ್ರಮ ನಡೆಯುತ್ತಿದೆ.

ಬಿ ಖಾತಾ ಆಸ್ತಿಗಳೆಲ್ಲ ಅಕ್ರಮ!

ಈ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಈಗ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡ ಪ್ರದೇಶಗಳಲ್ಲಿನ ಆಸ್ತಿಗಳಲ್ಲಿ ಶೇ.99 ಬಿ ಖಾತಾ ಹೊಂದಿವೆ. ಕಂದಾಯ ಭೂಮಿ, ಕೃಷಿ ಭೂಮಿ ವಾಣಿಜ್ಯ, ವಸತಿ ಉದ್ದೇಶಕ್ಕೆ ಜಿಲ್ಲಾಧಿಕಾರಿಗಳಿಂದ ಪರಿವರ್ತಿಸಿಕೊಳ್ಳದಿದ್ದರೆ ಅಂತಹ ಆಸ್ತಿಗಳು ಬಿ ಖಾತಾ ಹೊಂದಲಿವೆ. ಹೀಗೆ ಬಿ ಖಾತಾ ಹೊಂದಿದ ಆಸ್ತಿಗಳನ್ನು ಅಕ್ರಮ ಎಂದೇ ಪರಿಗಣಿಸಲಾಗುತ್ತದೆ.

3 ಲಕ್ಷ ಆಸ್ತಿಗಳು

ಬಿಬಿಎಂಪಿಗೆ ಹೊಸದಾಗಿ ಸೇರಿದ 600 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಡಿಸಿ ಪರಿವರ್ತನೆಯಾಗದೆ ಇರುವ ಹಲವು ನಿವೇಶನಗಳಿವೆ. ಅದೇ ರೀತಿ ಆ ನಿವೇಶನಗಳಲ್ಲಿ ಕಟ್ಟಡ ನಿರ್ವಣಕ್ಕೆ ಸರಿಯಾದ ರೀತಿಯಲ್ಲಿ ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರವನ್ನು ಪಡೆದಿರುವುದಿಲ್ಲ.ಈ ರೀತಿ ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ.

ಎ ಖಾತಾ ಏಕೆ ಬೇಕು?

ಬಿ ಖಾತಾ ಹೊಂದಿದ ನಿವೇಶನಗಳು ಕಾನೂನು ಬದ್ಧವಾಗಿ ಸಕ್ರಮ ನಿವೇಶನಗಳೆಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಅವುಗಳಿಗೆ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಪ್ರಮುಖವಾಗಿ ಬ್ಯಾಂಕ್​ಗಳಿಂದ ಸಾಲ, ಕಟ್ಟಡ ನಿರ್ವಣಕ್ಕೆ ನಕ್ಷೆ ಮಂಜೂರಾತಿ, ಕಟ್ಟಡ ನಿರ್ಮಾಣ ಮಾಡಿ ವಾಣಿಜ್ಯ ಉದ್ದೇಶಕ್ಕೆ ಬಳಸಬೇಕೆಂದರೆ ಉದ್ದಿಮೆ ಪರವಾನಗಿ, ನಿವೇಶನಗಳ ಮಾರಾಟ ಮತ್ತು ಬೇರೆಯವರಿಗೆ ವರ್ಗಾವಣೆ ಮಾಡಲು ಎ ಖಾತಾ ಬೇಕಾಗುತ್ತದೆ.

ಯಾವ ವಲಯದಲ್ಲಿ ಅಕ್ರಮ?

ಉತ್ತರಹಳ್ಳಿ ಉಪ ವಿಭಾಗವೊಂದರಲ್ಲಿಯೇ 400ಕ್ಕೂ ಹೆಚ್ಚಿನ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಿರುವ ಶಂಕೆ ವ್ಯಕ್ತವಾಗಿದೆ. ಈ ಅಕ್ರಮ ಈಗಾಗಲೇ ಬಿಬಿಎಂಪಿ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ತನಿಖೆ ನಡೆಸಲು ಮುಂದಾಗಿದ್ದಾರೆ. ಖಾತಾ ಬದಲಾವಣೆ ದಾಖಲೆ ಹಾಗೂ ಲಾಗ್​ಬುಕ್​ಗಳ ಪರಿಶೀಲನೆ ನಡೆಸುತ್ತಿದ್ದಾರೆ.

20 ಕೋಟಿ ರೂ. ವಸೂಲಿ?

ಒಂದು ಬಿ ಖಾತಾ ಆಸ್ತಿಗೆ ಎ ಖಾತೆ ನೀಡಲು 10 ಲಕ್ಷ ರೂ.ವರೆಗೆ ಲಂಚ ಪಡೆದಿರುವ ಆರೋಪ ಕೇಳಿಬಂದಿದೆ. 400 ಖಾತೆಗಳಿಗೆ ಕನಿಷ್ಠ 5 ಲಕ್ಷ ರೂ. ಸ್ವೀಕರಿಸಿದರೂ ಲಂಚದ ಮೊತ್ತ 20 ಕೋಟಿ ರೂ. ದಾಟುತ್ತದೆ. ಒಂದು ಉಪವಿಭಾಗ ವ್ಯಾಪ್ತಿಯಲ್ಲಿಯೇ ಇಷ್ಟೊಂದು ಪ್ರಮಾಣದ ಅಕ್ರಮ ನಡೆದಿದೆ. ಇನ್ನು ಬಿಬಿಎಂಪಿಯಲ್ಲಿ ಒಟ್ಟು 64 ಉಪ ವಿಭಾಗಗಳಿದ್ದು, ಇದೇ ರೀತಿ ಖಾತಾ ಅಕ್ರಮ ನಡೆದಿದೆ ಎಂದಾದರೆ ಅಕ್ರಮದ ಮೊತ್ತ ಸಾವಿರಾರು ಕೋಟಿ ರೂ. ಆಗುತ್ತದೆ.

ಅಕ್ರಮಕ್ಕೆ ಸಕ್ರಮವೇ ದಾರಿ

ಬಿ ಖಾತೆ ಹೊಂದಿದ ಆಸ್ತಿಗಳು ಎ ಖಾತೆ ಪಡೆಯಬೇಕೆಂದರೆ ಅಕ್ರಮ-ಸಕ್ರಮ ಯೋಜನೆ ಜಾರಿಗೊಳ್ಳಬೇಕು. ಆದರೆ, ಅಕ್ರಮ-ಸಕ್ರಮ ಕುರಿತಂತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಕುರಿತು ಅಂತಿಮ ತೀರ್ಪು ಬರುವವರೆಗೂ ಖಾತಾ ಪರಿವರ್ತನೆ ಸೇರಿ ಅಕ್ರಮ- ಸಕ್ರಮದ ವ್ಯಾಪ್ತಿಗೆ ಬರುವ ತಪು್ಪಗಳನ್ನು ಸರಿಪಡಿಸಲು ಸಾಧ್ಯವಿಲ್ಲ.

ಜಂಟಿ ಆಯುಕ್ತರಿಂದ ತನಿಖೆ

ಅಧಿಕಾರಿಗಳ ಈ ಕರಾಮತ್ತಿನ ಬಗ್ಗೆ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತರಿಗೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿರುವ ಜಂಟಿ ಆಯುಕ್ತರು, ಅದಕ್ಕಾಗಿ ಉತ್ತರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ಖಾತೆ ನೀಡಿದ ಕುರಿತ ದಾಖಲೆಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ.

ಕಾಗದಮುಕ್ತ ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ಕಚೇರಿಗೆ ಸಂಬಂಧಿಸಿದ ವಿಷಯಗಳನ್ನು ಕಾಗದಮುಕ್ತಗೊಳಿಸಲು (ಪೇಪರ್ ಲೆಸ್) ಅಧಿಕಾರಿಗಳು ಮುಂದಾಗಿದ್ದಾರೆ. ಅದಕ್ಕಾಗಿ ಇ-ಕೌನ್ಸಿಲ್ ಹೆಸರಿನ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದಾರೆ.

ಕಾಪೋರೇಟರ್​ಗಳಿಗೆ ನೀಡಿರುವ ಟ್ಯಾಬ್​ನಲ್ಲಿ ಈ ಅಪ್ಲಿಕೇಷನ್ ಅಳವಡಿಸಲಾಗಿದೆ. ಇನ್ನುಮುಂದೆ ಬಿಬಿಎಂಪಿ ಕಾರ್ಯಗಳಿಗೆ ಸಂಬಂಧಿಸಿದ ಆದೇಶ, ಸುತ್ತೋಲೆಗಳನ್ನು ಅಪ್ಲಿಕೇಷನ್​ನಲ್ಲಿ ಅಪ್​ಲೋಡ್ ಮಾಡಲಾಗುತ್ತದೆ. ಸದಸ್ಯರು ಆ ಅಪ್ಲಿಕೇಷನ್ ಮೂಲಕ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮವಾಗಿ ಬಿ ಖಾತಾ ಆಸ್ತಿಗಳಿಗೆ ಎ ಖಾತೆ ನೀಡಿರುವ ಬಗ್ಗೆ ದೂರು ಬಂದಿದೆ. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

| ಸೌಜನ್ಯ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತೆ

ಅಕಮ್ರ-ಸಕ್ರಮ ಜಾರಿಯಾಗುವವರೆಗೆ ಬಿ ಖಾತಾಗಳಿಗೆ ಎ ಖಾತೆ ನೀಡಲು ಬರುವುದಿಲ್ಲ. ಅದನ್ನು ಮೀರಿ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

| ಎಂ. ಶಿವರಾಜು ಬಿಬಿಎಂಪಿ ಆಡಳಿತ ಪಕ್ಷದ ನಾಯಕ