ಎ-ಬಿ ಖಾತಾ ಬಗ್ಗೆ ಎಚ್ಚರವಿರಲಿ

ನಿವೇಶನ ಅಥವಾ ಮನೆ ಖರೀದಿಗೂ ಮುಂಚೆ ಖಾತಾಗಳ ಬಗ್ಗೆ ಎಚ್ಚರ ವಹಿಸುವುದು ಬಹುಮುಖ್ಯ. ಇಲ್ಲದಿದ್ದರೆ ಮುಂದೆ ಇದು ಅಪಾಯ ತಂದೊಡ್ಡಬಹುದು.

| ಗಿರೀಶ್ ಗರಗ

ಬೆಂಗಳೂರು: ನಿವೇಶನ ಖರೀದಿಸಿ, ನಮ್ಮ ಬಯಕೆಯಂಥ ಮನೆ ಕಟ್ಟಿಕೊಳ್ಳಬೇಕು ಎಂಬುದು ಎಲ್ಲರ ಕನಸು. ಆದರೆ, ಆ ಕನಸು ನನಸು ಮಾಡಿಕೊಳ್ಳುವ ದಿಸೆಯಲ್ಲಿ ಕೊಂಚ ಎಡವಟ್ಟು ಮಾಡಿಕೊಂಡರೂ ಕನಸು ನುಚ್ಚುನೂರಾಗುತ್ತದೆ.

ಬ್ಯಾಂಕ್ ಸಾಲ ಮತ್ತಿತರ ಸೌಲಭ್ಯಗಳು ಸಿಗಬೇಕಾದರೆ ನಿವೇಶನಗಳು ‘ಎ’ ಖಾತಾ ಪ್ರಮಾಣಪತ್ರ ಹೊಂದಿರಬೇಕಾಗಿರುವುದು ಕಡ್ಡಾಯ.

‘ಬಿ’ ಖಾತಾ ಹೊಂದಿರುವ ನಿವೇಶನಗಳಿಗೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಹೀಗಾಗಿ ನಿವೇಶನ ಖರೀದಿಗೂ ಮುಂಚೆ ಅದು ಯಾವ ಖಾತೆ ಹೊಂದಿದೆ ಎಂಬುದನ್ನು ಪರಿಶೀಲಿಸಿಕೊಂಡು ನಂತರ ಮುಂದುವರಿಯುವುದು ಒಳಿತು. ಇಲ್ಲದಿದ್ದರೆ, ಅದು ‘ಅಕ್ರಮ ನಿವೇಶನ’ ಆಗುತ್ತದೆ.

ಯಾವುದೇ ಕೃಷಿ ಭೂಮಿಯನ್ನು ವಸತಿ ಬಳಕೆಗೆ ಬಳಸುವಾಗ ಜಿಲ್ಲಾಧಿಕಾರಿಗಳ ಮೂಲಕ ಭೂಮಿ ಬಳಕೆಯನ್ನು ಪರಿವರ್ತಿಸಿಕೊಳ್ಳಬೇಕು (ಡಿ.ಸಿ. ಕನ್ವರ್ಷನ್). ಆನಂತರ ಬಡಾವಣೆ ನಿರ್ವಿುಸಲು ಅನುಮತಿ ನೀಡುವುದಕ್ಕೆ ಆ ನಿವೇಶನವನ್ನು ‘ಎ’ ಖಾತಾ ನಿವೇಶನ ಎಂದು ಪರಿಗಣಿಸಲಾಗುತ್ತದೆ. ಆದರೆ, ‘ಡಿ.ಸಿ. ಕನ್ವರ್ಷನ್’ ಮಾಡಿಸಿಕೊಂಡು ‘ಎ’ ಖಾತಾ ಪಡೆದಿದ್ದರೂ ಅವುಗಳಿಗೆ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದಿದ್ದರೆ ಅವುಗಳನ್ನು ‘ಬಿ’ ಖಾತಾ ಆಸ್ತಿ ಎಂದು ನಿರ್ಧರಿಸಲಾಗುತ್ತದೆ.

ಬಡಾವಣೆಗಳು ಬಿ ಖಾತಾ ವ್ಯಾಪ್ತಿಗೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೃಷಿ ಭೂಮಿಯಿಂದ ವಸತಿ ಉದ್ದೇಶಕ್ಕಾಗಿ ‘ಡಿ.ಸಿ. ಕನ್ವರ್ಷನ್’ ಆಗಿರುವ ಅನೇಕ ನಿವೇಶನಗಳಿವೆ.

ಆದರೆ, ಆ ನಿವೇಶನಗಳಿಗೆ ಪ್ರತ್ಯೇಕ ಖಾತಾ ಸಂಖ್ಯೆ ಸಿಗದೆ ಕೃಷಿ ಭೂಮಿಗೆ ಇರುವ ಒಂದೇ ಸಂಖ್ಯೆ ಇರುವ ಕಾರಣದಿಂದಾಗಿ ಅವುಗಳೆಲ್ಲವೂ ‘ಬಿ’ ಖಾತಾ ಹೊಂದುವಂತಾಗಿದೆ.

ಯಾವುದೇ ಸೌಲಭ್ಯ ಸಿಗುವುದಿಲ್ಲ

‘ಬಿ’ ಖಾತಾ ಹೊಂದಿದ ನಿವೇಶನಗಳು ಕಾನೂನು ಬದ್ಧವಾಗಿ ಸಕ್ರಮ ನಿವೇಶನಗಳೆಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಅವುಗಳಿಗೆ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಪ್ರಮುಖವಾಗಿ ಬ್ಯಾಂಕ್​ಗಳಿಂದ ಸಾಲ, ಕಟ್ಟಡ ನಿರ್ವಣಕ್ಕೆ ನಕ್ಷೆ ಮಂಜೂರಾತಿ, ಕಟ್ಟಡ ನಿರ್ಮಾಣ ಮಾಡಿ ವಾಣಿಜ್ಯ ಉದ್ದೇಶಕ್ಕೆ ಬಳಸಬೇಕೆಂದರೆ ಉದ್ದಿಮೆ ಪರವಾನಗಿ, ನಿವೇಶನಗಳ ಮಾರಾಟ ಮತ್ತು ಬೇರೆಯವರಿಗೆ ವರ್ಗಾವಣೆ ಮಾಡಲು ‘ಬಿ’ ಖಾತಾ ಹೊಂದಿದ ನಿವೇಶನಗಳಿಗೆ ಅವಕಾಶ ದೊರೆಯುವುದಿಲ್ಲ.

ಮೂರು ಲಕ್ಷ ಆಸ್ತಿಗಳು

ಬಿಬಿಎಂಪಿಗೆ ಹೊಸದಾಗಿ ಸೇರಿದ 600 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಡಿ.ಸಿ ಪರಿವರ್ತನೆಯಾಗದೆ ಇರುವ ಹಲವು ನಿವೇಶನಗಳಿವೆ. ಬಹುತೇಕ ನಿವೇಶನಗಳು, ಬಡಾವಣೆಗಳು ಡಿ.ಸಿ ಪರಿವರ್ತನೆಯಾಗಿಲ್ಲ. ಅದೇ ರೀತಿ ಆ ನಿವೇಶನಗಳಲ್ಲಿ ಕಟ್ಟಡ ನಿರ್ವಣಕ್ಕೆ ಸರಿಯಾದ ರೀತಿಯಲ್ಲಿ ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಪಡೆದಿರುವುದಿಲ್ಲ. ಈ ರೀತಿ ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಲಕ್ಷ ಆಸ್ತಿಗಳಿವೆ.

ಬಿ ಖಾತಾ, ಎ ಖಾತಾ ಆಗಿ ಪರಿವರ್ತನೆ

‘ಬಿ’ ಖಾತಾದಿಂದ ಆಸ್ತಿ ಮಾಲೀಕರು ಅನುಭವಿಸುತ್ತಿರುವ ಸಮಸ್ಯೆಯನ್ನು ಮನಗಂಡಿರುವ ಬಿಬಿಎಂಪಿ ‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ನೀಡುವ ಕುರಿತು ಚರ್ಚೆ ನಡೆಸುತ್ತಿದೆ. ಈ ಕುರಿತಂತೆ ಈಗಾಗಲೇ ಅಡ್ವೊಕೇಟ್ ಜನರಲ್ ಜತೆಗೂ ಸಭೆ ನಡೆಸಲಾಗಿದ್ದು, ಶೀಘ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ. 2008ರಲ್ಲಿ ರಾಜ್ಯ ಸರ್ಕಾರ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ, ಯಾವುದೇ ಆಸ್ತಿಗೂ ‘ಎ’ ಖಾತಾ ನೀಡುತ್ತಿಲ್ಲ. ಇದೀಗ ಕಂದಾಯ ಕಾಯ್ದೆಗೆ ಮತ್ತೆ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಒಂದೊಮ್ಮೆ ತಿದ್ದುಪಡಿ ತಂದರೆ ‘ಬಿ’ ಖಾತಾ ನಿವೇಶನಗಳಿಗೆ ‘ಎ’ ಖಾತೆ ನೀಡಲು ಅವಕಾಶ ದೊರೆಯಲಿದೆ.