ಪ್ರಿಯಾಂಕಾ ಗಾಂಧಿ ಸಹಾಯಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪತ್ರಕರ್ತ: ಎಫ್​ಐಆರ್​ ದಾಖಲು

ಸೋನ್​ಭದ್ರಾ: ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಹಾಯಕನ ವಿರುದ್ಧ ಪತ್ರಕರ್ತನೋರ್ವ ಪೊಲೀಸರಿಗೆ ದೂರು ನೀಡಿದ್ದಾರೆ.

ಉತ್ತರಪ್ರದೇಶದ ಸೋನ್​ಭದ್ರಾಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಪರ್ಸನಲ್​ ಸೆಕ್ರೆಟರಿ ಸಂದೀಪ್​ ಸಿಂಗ್​ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಬೆದರಿಕೆ ಕೂಡ ಹಾಕಿದ್ದಾನೆ. ಉಂಭಾ ಗ್ರಾಮದಲ್ಲಿ ನಾನು ಪ್ರಿಯಾಂಕಾ ಗಾಂಧಿ ಭೇಟಿಯ ಚಿತ್ರೀಕರಣ ನಡೆಸುತ್ತಿದ್ದ ವೇಳೆ ನನ್ನ ಕ್ಯಾಮರಾವನ್ನು ಮುಟ್ಟಿ ಕೆಲಸಕ್ಕೆ ತಡೆಯನ್ನುಂಟುಮಾಡಿದ್ದಾನೆ ಎಂದು ವಾರಾಣಸಿ ಮೂಲದ ಸ್ಥಳೀಯ ಚಾನೆಲ್​ವೊಂದರ ಪತ್ರಕರ್ತ ನಿತೀಶ್​ ಕುಮಾರ್​ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಪತ್ರಕರ್ತನ ದೂರಿನ ಅನ್ವಯ ಪ್ರಿಯಾಂಗಾ ಗಾಂಧಿ ಸಹಾಯಕನ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದ್ದಾಗಿ ಘೋರ್ವಾಲಾ ಠಾಣೆಯ ಅಧಿಕಾರಿ ಸಿ.ಪಿ.ಪಾಂಡೆ ತಿಳಿಸಿದ್ದಾರೆ.

ಅಲ್ಲದೆ, ಪ್ರಿಯಾಂಕಾ ಗಾಂಧಿ ಅವರ ಪರ್ಸನಲ್​ ಸೆಕ್ರೆಟರಿ ಪತ್ರಕರ್ತನ ಜತೆ ಅನುಚಿತವಾಗಿ ವರ್ತಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಕಾಶ್ಮೀರದ ಆರ್ಟಿಕಲ್​ 370 ಅನ್ನು ರದ್ದುಗೊಳಿಸುವ ಬಗ್ಗೆ ಪ್ರಿಯಾಂಕಾ ಗಾಂಧಿ ಬಳಿ ಪ್ರತಿಕ್ರಿಯೆ ಕೇಳಿದಾಗ ಅವರ ಸಹಾಯಕ ಸಂದೀಪ್​ ಸಿಂಗ್​ ಪತ್ರಕರ್ತನನ್ನು ದೂರ ತಳ್ಳಿದ್ದಾನೆ. ಅದಾದ ಬಳಿಕ ಇಬ್ಬರ ನಡುವೆ ವಾಗ್ವಾದವೂ ನಡೆದಿದೆ ಎನ್ನಲಾಗಿದೆ.

ಉಂಭಾದಲ್ಲಿ ಭೂಮಿ ಬಿಟ್ಟುಕೊಡಲು ನಿರಾಕರಿಸಿದ 10 ಆದಿವಾಸಿ ರೈತರು ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಅವರ ಕುಟುಂಬದವರನ್ನು ಭೇಟಿಯಾಗಲು ಪ್ರಿಯಾಂಕಾ ಗಾಂಧಿ ತೆರಳಿದ್ದಾಗ ಈ ಘಟನೆ ನಡೆದಿತ್ತು.

Leave a Reply

Your email address will not be published. Required fields are marked *