ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಬೆಂಗಳೂರು: ಒಂದು ತಿಂಗಳ ಹಸುಗೂಸನ್ನು ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಮನಕಲಕುವ ಘಟನೆ ವಿವೇಕನಗರದಲ್ಲಿ ನಡೆದಿದೆ.

ಕಾರ್ತಿಕ್​ ಎಂಬುವವರ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಹತ್ಯೆ ಮಾಡಲಾಗಿದೆ. ಡಿ. 21ರ ರಾತ್ರಿ ಮಗು ಜ್ವರದಿಂದ ಬಳಲುತ್ತಿತ್ತು. ಕಾರ್ತಿಕ್​ ಮಗುವನ್ನು ಹಾಲ್​ನಲ್ಲಿ ಮಲಗಿಸಿ ಔಷಧಿ ತರಲೆಂದು ಮೆಡಿಕಲ್​ ಶಾಪ್​ಗೆ ತೆರಳಿದ್ದರು. ಅವರ ಪತ್ನಿ ಮತ್ತೊಂದು ಮಗುವಿಗೆ ಹಾಲು ಕುಡಿಸಿದ ನಂತರ ಹಾಲ್​ನಲ್ಲಿದ್ದ ಮಗುವಿನ ಬಳಿ ಬಂದಾಗ ಮಗು ನಾಪತ್ತೆಯಾಗಿರುವುದು ಕಂಡು ಬಂದಿದೆ.

ತಕ್ಷಣ ಕಾರ್ತಿಕ್​ ಅಶೋಕನಗರ ಠಾಣೆಯಲ್ಲಿ ಮಗುವನ್ನು ಕಿಡ್ನಾಪ್​ ಮಾಡಲಾಗಿದೆ ಎಂದು ದೂರು ದಾಖಲಿಸುತ್ತಾರೆ. ಪೊಲೀಸರು ಕಾರ್ತಿಕ್​ ಮನೆಯಲ್ಲಿ ಪರಿಶೀಲನೆ ನಡೆಸುವಾಗ ಮಗುವನ್ನು ಟವಲ್​ನಲ್ಲಿ ಸುತ್ತಿ ಮಂಚದ ಕೆಳಗೆ ಇಟ್ಟಿರುವುದು ಕಂಡು ಬರುತ್ತದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಗು ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಕಾರ್ತಿಕ್​ ಇತ್ತೀಚೆಗೆ ತಮ್ಮ ತಂದೆ, ಸಹೋದರನಿಂದ ದೂರವಾಗಿ ಪತ್ನಿಯೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ಕುಟುಂಬಸ್ಥರೇ ಮಗುವನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದು ಕಾರ್ತಿಕ್​ ದೂರು ನೀಡಿದ್ದಾರೆ. ಅಶೋಕನಗರ ಠಾಣೆ ಪೊಲೀಸರು ಹಂತಕರಿಗಾಗಿ ಶೋಧ ನಡೆಸುತ್ತಿದ್ದಾರೆ.