ಪತ್ನಿ ಸಾವಿಗೆ ಕಾರಣನಾದ ಪತಿ ಆತ್ಮಹತ್ಯೆ ಯತ್ನ

ಕೆ.ಆರ್.ಪುರ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೆ, ಇತ್ತ ಪತಿ ಕೂಡ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮುಳಬಾಗಿಲು ಮೂಲದ ರಂಜಿತಾ (24) ಮೃತಳು. ಪತಿ ಅಶೋಕ್(30) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಕೆ.ಆರ್. ಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಳಬಾಗಿಲು ಮೂಲದ ಎಲೆಕ್ಟ್ರೀಷಿಯನ್ ಅಶೋಕ್ ಮತ್ತು ರಂಜಿತಾ 3 ತಿಂಗಳ ಹಿಂದೆ ವಿವಾಹವಾಗಿದ್ದರು. 1 ತಿಂಗಳಿನಿಂದ ಪತ್ನಿ ಜತೆಗೆ ಅಶೋಕ್ ಕೆ.ಆರ್. ಪುರದ ದೇವಸಂದ್ರ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ರಂಜಿತಾ, ಸೈಬರ್ ಕೆಫೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅಶೋಕ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ವರದಕ್ಷಿಣೆಯಾಗಿ ನೀಡಿದ್ದ 250 ಗ್ರಾಂ ಚಿನ್ನಾಭರಣವನ್ನು ಅಡವಿಟ್ಟು ಬಂದ ಹಣವನ್ನು ದುಂದುವೆಚ್ಚ ಮಾಡಿಕೊಂಡಿದ್ದ. ಮತ್ತೆ ಎಲೆಕ್ಟ್ರಿಕಲ್ ಅಂಗಡಿ ತೆರೆಯಬೇಕು. ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸುತ್ತಿದ್ದ. ಬೇಸತ್ತ ರಂಜಿತಾ, ಇತ್ತೀಚೆಗೆ ಹೋಗಿ 1 ಲಕ್ಷ ರೂ.ಗಳನ್ನು ತವರು ಮನೆಯಿಂದ ತಂದು ಕೊಟ್ಟಿದ್ದಳು. ಇನ್ನೂ ಬೇಕೆಂದು ಪೀಡಿಸಿದ್ದ. ಇದೇ ಕಾರಣಕ್ಕೆ ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಕೆ.ಆರ್. ಪುರ ಪೊಲೀಸರು ತಿಳಿಸಿದ್ದಾರೆ. ಪತ್ನಿ ಆತ್ಮಹತ್ಯೆ ತಿಳಿದ ಅಶೋಕ್ ಭೀತಿಯಿಂದ ಹುಟ್ಟೂರು ಮುಳಬಾಗಿಲಿಗೆ ಹೋಗಿ ವಿಷ ಕುಡಿದಿದ್ದಾನೆ. ಪಾಲಕರು ಆತನನ್ನು ರಕ್ಷಣೆ ಮಾಡಿ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸೇರಿಸಿದ್ದಾರೆ.

ಮೃತಳ ಪಾಲಕರು ಕೊಟ್ಟ ದೂರಿನ ಮೇರೆಗೆ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಶೋಕ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಅಶೋಕ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಮೇಲೆ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ರೌಡಿ ಕೊಲೆ, ಐವರ ಬಂಧನ

ಹೊಸೂರು: ಬೆಂಗಳೂರಿನ ಬೊಮ್ಮನಹಳ್ಳಿ ನಿವಾಸಿ ಸಮೀಉಲ್ಲಾ (57) ಎಂಬಾತನನ್ನು ಪಟ್ಟಣ ಸಮೀಪದ ಡಂಕಣಿಕೋಟಿಯಲ್ಲಿ ಮಂಗಳವಾರ ಹತ್ಯೆ ಮಾಡಲಾಗಿದೆ. ಡಂಕಣಿಕೋಟೆಯ ಸಂಬಂಧಿ ಮನೆಗೆ ಬಂದಿದ್ದ ವೇಳೆ ವಾಹನದಲ್ಲಿ ಬಂದ ಏಳೆಂಟು ಮಂದಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಡಿವೈಎಸ್​ಪಿ ಸಂಗೀತಾ, ಇನ್​ಸ್ಪೆಕ್ಟರ್ ಶರವಣನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರಿನ ಮಂಗನಪಾಳ್ಯದ ಐವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಒಟ್ಟಾರೆ 8 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ ಇಸ್ಮಾಯಿಲ್ ಹಾಗೂ ಆರೋಪಿಗಳ ನಡುವಿನ ಹಳೇ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ.

ಅರ್ಧ ಕೆ.ಜಿ. ಚಿನ್ನ ಕಳವು

ಬೆಂಗಳೂರು: ಕೇಂದ್ರ ಸರ್ಕಾರಿ ಅಧಿಕಾರಿ ಮನೆಗೆ ನುಗ್ಗಿದ ದುಷ್ಕರ್ವಿುಗಳು ಅರ್ಧ ಕೆ.ಜಿ. ಚಿನ್ನಾಭರಣ ಸೇರಿ ಬೆಲೆ ಬಾಳುವ ಅನೇಕ ವಸ್ತುಗಳನ್ನು ದೋಚಿದ್ದಾರೆ. ಬಿಟಿಎಂ ಲೇಔಟ್ 2ನೇ ಹಂತದ ಸುರ್ಜಿತ್ ಭುಜಬಲ್(54) ಎಂಬುವರು ಈ ಬಗ್ಗೆ ದೂರು ನೀಡಿದ್ದಾರೆ. ಕೇಂದ್ರ ಲೋಕೋಪಯೋಗಿ ಇಲಾಖೆ ಅಧಿಕಾರಿ ಸುರ್ಜಿತ್, ಮಾ.11ರ ಬೆಳಗ್ಗೆ 8.15ಕ್ಕೆ ಮನೆಗೆ ಬೀಗ ಹಾಕಿಕೊಂಡು ಹೊರ ಹೋಗಿದ್ದರು. ಈ ಸಂದರ್ಭ ಒಳ ನುಗ್ಗಿದ ಕಳ್ಳರು ಬಳೆ, ಸರ, ಉಂಗುರ ಸೇರಿ 500 ಗ್ರಾಂ ಚಿನ್ನಾಭರಣ ಮತ್ತು 10 ಸಾವಿರ ರೂ. ಬೆಲೆಯ ಮೊಬೈಲ್ ಫೋನ್ ಇತ್ಯಾದಿ ವಸ್ತು ಕಳವು ಮಾಡಿದ್ದಾರೆ.

ಚಾಲಕನ ಸಾವಿಗೆ ಕಾರಣರಾಗಿದ್ದ 6 ಮಂದಿ ಸೆರೆ

ಆನೇಕಲ್: ಲಾರಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣರಾಗಿದ್ದ ಮಹಿಳೆ ಸೇರಿ ಆರು ಜನರನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಈಶ್ವರಿ (30), ನೆರಳೂರಿನ ರಾಕೇಶ್ (29), ಕಮ್ಮಸಂದ್ರದ ಆನಂದ್​ಕುಮಾರ್ (20), ಪ್ರಕಾಶ್ (19), ಪ್ರಮೋದ್​ಕುಮಾರ್ (19) ಮತ್ತು ರವಿ (40) ಬಂಧಿತರು. ಕಮ್ಮಸಂದ್ರದಿಂದ ಸೋಮವಾರ ರಾತ್ರಿ ಚಿಕ್ಕಮ್ಮ ಶದಾಫ್ ಬುಕಾರಿ ಜತೆ ಅಹಾನ್​ಖಾನ್ (6) ಹೋಗುತ್ತಿದ್ದಾಗ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದಿತ್ತು. ಅಹಾನ್ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಶದಾಫ್ ಗಾಯಗೊಂಡಿದ್ದರು. ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಸ್ಥಳೀಯರು ಲಾರಿ ಚಾಲಕ ಮಧ್ಯಪ್ರದೇಶ ಮೂಲದ ರಾಧೆ ಶ್ಯಾಮ್ (26) ಮೇಲೆ ಹಲ್ಲೆ ನಡೆಸಿದ್ದರು. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸ ಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.