ಲಕ್ಷ್ಮೇಶ್ವರ: ಪಟ್ಟಣದಲ್ಲಿ ಪುರಸಭೆಯವರು ತಮಿಳುನಾಡಿನ ಮಧುರೈ ಪರಿಣತರಿಂದ ಬೀದಿ ನಾಯಿಗಳನ್ನು ಹಿಡಿಸಿ ಶುಕ್ರವಾರ ಸ್ಥಳಾಂತರಿಸುವ ಕಾರ್ಯ ಮಾಡಿಸಿದರು.
ಪಟ್ಟಣ ಸೇರಿ ತಾಲೂಕಿನಾದ್ಯಂತ ಬೀದಿ ನಾಯಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು, ನಾಗರಿಕರು ಬೆಚ್ಚಿ ಬೀಳುವಂತಾಗಿದೆ. ಸಂಬಂಧಪಟ್ಟ ಪುರಸಭೆ, ಗ್ರಾಪಂನವರು ಬೀದಿ ನಾಯಿಗಳ ನಿಯಂತ್ರಣಕ್ಕೆ ದಿಟ್ಟ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿತ್ತು.
ಆರೋಗ್ಯ ಇಲಾಖೆಯ ಮಾಹಿತಿಯನ್ವಯ ಪ್ರಸಕ್ತ ಜನವರಿಯಿಂದ ನವಂಬರ್ ವರೆಗೆ ಲಕ್ಷೆ್ಮೕಶ್ವರ ಸೇರಿ ತಾಲೂಕಿನ ಯಳವತ್ತಿ, ಶಿಗ್ಲಿ, ಬಾಲೆಹೊಸೂರ, ಸೂರಣಗಿ ಸರ್ಕಾರಿ ಆಸ್ಪತ್ರೆಯಲ್ಲಿ 1507 ಜನರು ಬೀದಿನಾಯಿ ಕಡಿತಕ್ಕೊಳಗಾಗಿ ಚಿಕಿತ್ಸೆ ಪಡೆದಿದ್ದರು. ಬಟ್ಟೂರಿನ ಯುವತಿಯೊಬ್ಬಳು ಮೃತಪಟ್ಟಿದ್ದರು.
ಈ ಕುರಿತು ವಿಜಯವಾಣಿ ಡಿ.12ರಂದು ‘ಶ್ವಾನ ಉಪಟಳ ಜನರ ಕಳವಳ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಯ ಹಿನ್ನೆಲೆ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ಹೊರ ರಾಜ್ಯದಿಂದ 10 ಜನರ ತಂಡ ಕರೆಯಿಸಿ ಶುಕ್ರವಾರ ಇಡೀ ದಿನ 100ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿಸಿ ಸ್ಥಳಾಂತರಿಸುವ ಕಾರ್ಯಮಾಡಿಸಿದರು. ಹಳ್ಳದಕೇರಿ, ಬಸ್ತಿಬಣ, ಸೊಪ್ಪಿನಕೇರಿ, ಅಂಬೇಡ್ಕರ್ ನಗರ, ಪಂಪ ವೃತ್ತ ಸೇರಿ ಹಲವು ಕಡೆ ನಾಯಿ ಸೆರೆ ಹಿಡುವ ಕಾರ್ಯ ನಡೆಸಲಾಯಿತು.
ಈ ಬಗ್ಗೆ ಪ್ರತಿಕ್ರಿತಿಸಿದ ಮುಖ್ಯಾಧಿಕಾರಿ ಮಹೇಶ ಹಡಪದ ಮತ್ತು ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ನಾಯಿಗಳನ್ನು ಹಿಡಿಸಿ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಮಾಡಲಾಗುತ್ತಿದೆ. ಈ ಕಾರ್ಯ ಮೂರ್ನಾಲ್ಕು ದಿನ ನಡೆಯಲಿದೆ. ಸಾರ್ವಜನಿಕರು ತಮ್ಮ ಸಾಕು ನಾಯಿಗಳ ಮೇಲೆ ನಿಗಾ ವಹಿಸಬೇಕು ಮತ್ತು ಸಹಕಾರ ನೀಡಬೇಕು ಎಂದರು.