ಅಂಕೋಲಾ: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿಯ ಪುರಸಭೆ ವ್ಯಾಪ್ತಿಯ ಹನುಮಟ್ಟಾದ ಶ್ರೀ ಲಕ್ಷ್ಮೀ ನಾರಾಯಣ ಮಹಾಮಾಯ ದೇವಸ್ಥಾನದ ಹಿಂಭಾಗದಲ್ಲಿದ್ದ ಬೃಹತ್ ಆಲದ ಮರವೊಂದು ಬುಡಸಮೇತ ಧರಾಶಾಯಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಸುಮಾರು 200 ವರ್ಷ ಹಳೆಯ ಮರ ಇದಾಗಿದ್ದು ಹತ್ತಿರದ ರವೀಂದ್ರ ಫಾತರಫೇಕರ ಅವರ ಮನೆ ಆವರಣದಲ್ಲಿ ಬಿದ್ದಿದೆ. ಇದರ ಪರಿಣಾಮ ಎರಡು ವಿದ್ಯುತ್ ಕಂಬಗಳು, ದೇವಸ್ಥಾನದ ಕಾಂಪೌಂಡ್ ಗೋಡೆ ಹಾಗೂ ಮನೆಗೂ ಸ್ವಲ್ಪ ಹಾನಿಯಾಗಿದೆ. ಮಹಾಮಾಯ ದೇವಸ್ಥಾನದ ಪರಿವಾರ ದೇವರಾದ ಬಾರಾಗಣ ದೇವಸ್ಥಾನಕ್ಕೂ ಹಾನಿಯಾಗಿದೆ. ವಿದ್ಯುತ್ ಕಂಬ ನೆಲಕ್ಕುರುಳಿದ ಪರಿಣಾಮ ಸುತ್ತಮುತ್ತಲಿನ ಹದಿನೈದಕ್ಕೂ ಹೆಚ್ಚು ಮನೆಗಳ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ತಾಲೂಕಿನಲ್ಲಿ ನೆರೆ-ಭೀತಿ ಎದುರಾದಲ್ಲಿ ಅದನ್ನು ಎದುರಿಸಲು ತಾಲೂಕು ಆಡಳಿತ ಸಕಲಸಿದ್ಧತೆ ಮಾಡಿಕೊಂಡಿದೆ ಎಂದು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ತಿಳಿಸಿದ್ದಾರೆ. ಈಗಾಗಲೇ 30ಕ್ಕೂ ಅಧಿಕ ಕಾಳಜಿ ಕೇಂದ್ರಗಳನ್ನು ಗುರುತು ಮಾಡಲಾಗಿದೆ. ಅವಶ್ಯಕತೆ ಬಿದ್ದಲ್ಲಿ ತಕ್ಷಣವೇ ಅವುಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.