ಸೋಮವಾರಪೇಟೆ: ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಸಮಿತಿಯಿಂದ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಅವರು ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ವಿವೇಕಾನಂದರ ಜೀವನಾದರ್ಶಗಳು ಎಲ್ಲರ ಬದುಕಿಗೆ ಮಾರ್ಗವಾಗಬೇಕು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಯುವಕರಿಗೆ ಸ್ಫೂರ್ತಿ ತುಂಬಿದ ವಿವೇಕಾನಂದರು, ಭಾರತದ ಸಂಸ್ಕೃತಿ, ಆಚಾರ-ವಿಚಾರವನ್ನು ಹೊರ ದೇಶದಲ್ಲೂ ಪಸರಿಸಿದ ಮಹಾನ್ ಸಂತ ಎಂದು ಬಣ್ಣಿಸಿದರು.
ತಾನು ಸಚಿವನಾಗಿದ್ದ ಸಂದರ್ಭ ವಿವೇಕಾನಂದರ 150ನೇ ಜಯಂತಿಯಂದು ರಾಜ್ಯಾದ್ಯಂತ ಪ್ರತಿ ತಾಲೂಕು ಮಟ್ಟದಲ್ಲಿ ಯುವ ದಿನವನ್ನಾಗಿ ಆಚರಣೆ ಮಾಡಲು ನಿರ್ದೇಶನ ನೀಡಲಾಗಿತ್ತು. ಆ ಮೂಲಕ ವಿವೇಕಾನಂದರ ಬಗ್ಗೆ ಎಲ್ಲರಿಗೂ ಪ್ರೇರಣೆ ನೀಡುವ ಕೆಲಸ ಮಾಡಲಾಗಿತ್ತು ಎಂದು ಸ್ಮರಿಸಿದ ಅವರು, ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು, ದೇಶದ ಆಚಾರ, ವಿಚಾರ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಪಿ.ಕೆ.ರವಿ, ಕಾರ್ಯದರ್ಶಿ ಎಸ್.ಮಹೇಶ್, ಪ್ರಮುಖರಾದ ಕೆ.ಡಿ.ಬಿದ್ದಪ್ಪ, ಡಿ.ಪಿ.ರಮೇಶ್, ಯಶ್‌ವಂತ್, ಶಶಿಧರ್, ಪಪಂ ಸದಸ್ಯ ಬಿ.ಆರ್. ಮೃತ್ಯುಂಜಯ, ಜಿಪಂ ಮಾಜಿ ಅಧ್ಯಕ್ಷ ಬಿ. ಶಿವಪ್ಪ, ದೊಡ್ಡಮಳ್ತೆ ಗ್ರಾಪಂ ಸದಸ್ಯ ರುದ್ರಪ್ಪ ಲೋಹಿತ್, ಸೇರಿದಂತೆ ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಇದ್ದರು.