ಶಿಗ್ಗಾಂವಿ: ಶಿಗ್ಗಾಂವಿ- ಸವಣೂರು ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಬೆಲೆ ಏರಿಕೆ ಬಿಸಿಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನಗಳ ಮೂಲಕ ಆರ್ಥಿಕ ನೆರವು ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಲಿದ್ದಾರೆ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ತಿಮ್ಮಾಪುರ ಸೇರಿ ಹಲವು ಗ್ರಾಮಗಳಲ್ಲಿ ಶಿಗ್ಗಾಂವಿ- ಸವಣೂರು ವಿಧಾನಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹ್ಮದ ಖಾನ ಪಠಾಣ ಪರ ಮತಯಾಚನೆ ಕೈಗೊಂಡು ಅವರು ಮಾತನಾಡಿದರು.
ಬಿಜೆಪಿ ಚುನಾವಣೆ ಸಮಯದಲ್ಲಿ ಮಾತ್ರ ಜಾತಿ, ಧರ್ಮಗಳನ್ನು ಎಳೆದು ತರುತ್ತದೆ. ಕೋಮು ಭಾವನೆಗಳನ್ನು ಕೆದಕಿ ರಾಜಕೀಯ ಲಾಭ ಮಾಡಿಕೊಳ್ಳುವ ಕುತಂತ್ರ ಹೂಡುತ್ತದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡುತ್ತಿದೆ. ಧರ್ಮ, ಜಾತಿ ಮತ್ತು ಹಣದ ಮೇಲೆ ಆಯ್ಕೆಯಾಗುವ ಪ್ರತಿನಿಧಿಗಳಿಂದ ಕ್ಷೇತ್ರಕ್ಕೆ ಯಾವುದೇ ಉಪಯೋಗ ಆಗುವುದಿಲ್ಲ. ಸಾಧನೆ, ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಮತಯಾಚನೆ ನಡೆಸುತ್ತಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ, ಮುಖಂಡರಾದ ಚಂದ್ರಶೇಖರ ಮಾನೋಜಿ, ಶಿವಾಜಿ ಶಿಂಧೆ, ನಾಗೇಶ ಮೋತೆ, ಎಸ್.ವೈ. ಆರೇರ, ಎಂ.ಎನ್. ವೆಂಕೋಜಿ, ನಾಗೇಶರಾವ್ ಇದ್ದರು.