ತೇರದಾಳ: ತಾಲೂಕು ಆಡಳಿತ ವತಿಯಿಂದ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಗೆ ಮಂಗಳವಾರ ಅದ್ದೂರಿ ಸ್ವಾಗತ ಕೋರಲಾಯಿತು.
ರಾಜ್ಯೋತ್ಸವ ಸುವರ್ಣ ಸಂಭ್ರಮ ಹಿನ್ನೆಲೆಯಲ್ಲಿ ಆಗಮಿಸಿದ ರಥಯಾತ್ರೆಯು ಹನಗಂಡಿ ಮಾರ್ಗವಾಗಿ ತೇರದಾಳ ಪಟ್ಟಣ ಪ್ರವೇಶಿಸಿತು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಮುಂಭಾಗದಲ್ಲಿ ತೇರದಾಳ ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಪುರಸಭೆ ಮುಖ್ಯಾಧಿಕಾರಿ ಮಾಲಿನಿ, ಮ್ಯಾನೇಜರ್ ಮಲ್ಲಿಕಾರ್ಜುನ ಬಿರಾದಾರಪಾಟೀಲ, ಮುಖಂಡರಾದ ಪ್ರವೀಣ ನಾಡಗೌಡ, ಭುಜಬಲಿ ಕೆಂಗಾಲಿ ಮತ್ತಿತರರು ಜ್ಯೋತಿ ರಥಯಾತ್ರೆ, ನಾಡದೇವಿ ಭುವನೇಶ್ವರಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಜಯಘೋಷ ಹಾಕಿ ಬರಮಾಡಿಕೊಂಡರು.
ರಥಯಾತ್ರೆಯು ಭವ್ಯ ಮೆರವಣಿಗೆಯೊಂದಿಗೆ ಮಹಾವೀರ ವೃತ್ತ, ಬಸ್‌ನಿಲ್ದಾಣ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ವಿವಿಧ ಶಾಲೆ ಮಕ್ಕಳು ಪುಷ್ಪಮಳೆಗರೆದು ಕನ್ನಡ ಪರ ಘೋಷಣೆಗಳನ್ನು ಮೊಳಗಿಸಿದರು. ಶಾಲೆ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಶಾಲಾ ಮಕ್ಕಳ ವೇಷಭೂಷಣ, ಕುಂಭಮೇಳಗಳು ಮೆರವಣಿಗೆಗೆ ಮೆರಗು ಹೆಚ್ಚಿಸಿದವು. ಕನ್ನಡಪರ ಹಾಡುಗಳಿಗೆ ಯುವಕರು ನೃತ್ಯ ಮಾಡಿ ಸಂಭ್ರಮಿಸಿದರು.
ಪುರಸಭೆ ಸದಸ್ಯ ಸಂತೋಷ ಜಮಖಂಡಿ, ರೇವಣೇಶ ಹಿರೇಮಠ, ಪ್ರಭು ಗಸ್ತಿ, ರಾಮಣ್ಣ ಹಿಡಕಲ್, ಆನಂದ ಜೀರಗಾಳ, ಎಸ್.ಆರ್. ರಾವಳ, ಪದ್ಮಸಾಗರ ನಾಗನೂರ, ಸಿಆರ್‌ಪಿಗಳಾದ ಅನಂದರಾಜು ಮುಧೋಳ, ಮಹೇಶ ಸೋರಗಾಂವಿ, ಮಹಾದೇವ ಯಲ್ಲಟ್ಟಿ, ಶ್ರೀಶೈಲ ಮಧರಖಂಡಿ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಬಹುತೇಕ ಇಲಾಖೆಗಳ ಮುಖ್ಯಸ್ಥರು, ಪುರಸಭೆ ಸದಸ್ಯರು, ಚಾಲಕ ಸಂಘದವರು ಇದ್ದರು.