ಮಹಾ ಚುನಾವಣೆಗೆ ಭರವಸೆಗಳ ಮಹಾಪೂರ; ಮತದಾರರ ಸೆಳೆಯಲು ಪಕ್ಷಗಳಿಂದ ಕಸರತ್ತು

MH BJp

ಮುಂಬೈ: ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಇದೀಗ ಪ್ರಣಾಳಿಕೆಗಳ ಬಿಡುಗಡೆ ಯಿಂದ ಚುನಾವಣೆಯ ಕಾವು ತೀವ್ರಗೊಂಡಿದೆ.

ಆಡಳಿತದಲ್ಲಿರುವ ಪ್ರಮುಖ ಪಕ್ಷವಾದ ಬಿಜೆಪಿ ನೇತೃತ್ವದ ಮಹಾಯುತಿಯು ‘ಸಂಕಲ್ಪ ಪತ್ರ’ದ ಹೆಸರಿನಲ್ಲಿ ಪ್ರಣಾಳಿಕೆ ಪ್ರಕಟಿಸಿದ್ದರೆ, ಕಾಂಗ್ರೆಸ್ ಪಕ್ಷವನ್ನು ಒಳಗೊಂಡ ವಿಪಕ್ಷಗಳ ಕೂಟ ‘ಮಹಾ ವಿಕಾಸ ಅಘಾಡಿ’ ತನ್ನ ಪ್ರಣಾಳಿಕೆಯಲ್ಲಿ ‘ಗ್ಯಾರಂಟಿ’ಗಳ ಭರವಸೆ ನೀಡಿದೆ.

ಆಡಳಿತ ಹಾಗೂ ವಿರೋಧ ಪಕ್ಷಗಳು ಮಹಾರಾಷ್ಟ್ರದಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿವೆ. ಇದರೊಂದಿಗೆ ಬಿಜೆಪಿ ಪ್ರಮುಖವಾಗಿ ಮತ ಆಧಾರಿತ ಕಾನೂನು ಜಾರಿಯ ದಾಳ ಉರುಳಿಸಿದ್ದರೆ, ಕಾಂಗ್ರೆಸ್ ಮತ್ತದೇ ಗ್ಯಾರಂಟಿ ಹಾಗೂ ಜಾತಿಗಣತಿಯ ಮೊರೆ ಹೋಗಿದೆ. ಮಹಾಯುತಿಯು ಬಿಜೆಪಿ, ಸಿಎಂ ಏಕನಾಥ ಶಿಂಧೆ ಬಣದ ಶಿವಸೇನೆ ಹಾಗೂ ಡಿಸಿಎಂ ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್​ಸಿಪಿ) ಪಕ್ಷಗಳನ್ನು ಒಳಗೊಂಡಿದೆ. ಮಹಾ ವಿಕಾಸ ಅಘಾಡಿಯು ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ಹಾಗೂ ಶಿವಸೇನೆ (ಯುಬಿಟಿ) ಪಕ್ಷಗಳನ್ನು ಒಳಗೊಂಡಿದೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ನ.20ರಂದು ಮತದಾನ ನಡೆಯಲಿದ್ದು, ನ. 23ರಂದು ಮತ ಎಣಿಕೆ ನಡೆಯಲಿದೆ.

ಮಹಾಯುತಿ ಭರವಸೆಯಲ್ಲಿ ನಂಬಿಕೆ: ಮಹಾಯುತಿ ಸರ್ಕಾರ ರೈತರು, ಬಡವರು ಮತ್ತು ಮಹಿಳೆಯರ ಘನತೆಗಾಗಿ ಕೆಲಸ ಮಾಡುತ್ತಿದೆ. ಪ್ರಣಾಳಿಕೆಯಲ್ಲಿನ ಅಂಶಗಳು ಮಹಾರಾಷ್ಟ್ರದ ಜನರ ಆಕಾಂಕ್ಷೆಗಳೇ ಆಗಿವೆ. ಕರ್ನಾಟಕ, ಹಿಮಾಚಲಪ್ರದೇಶ, ತೆಲಂಗಾಣಗಳಲ್ಲಿ ಕಾಂಗ್ರೆಸ್​ನವರು ತಮ್ಮ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ ಎಲ್ಲರೂ ಮಹಾಯುತಿಯ ಭರವಸೆಗಳಲ್ಲಿ ನಂಬಿಕೆ ಇರಿಸಿದ್ದಾರೆ ಎಂದು ಅಮಿತ್ ಷಾ ಹೇಳಿದ್ದಾರೆ.

ಸಂಕಲ್ಪ ಪತ್ರ: ಬಿಜೆಪಿಯ ‘ಸಂಕಲ್ಪ ಪತ್ರ-2024’ ಹೆಸರಿನ 25 ಅಂಶಗಳ ಪ್ರಣಾಳಿಕೆಯನ್ನು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಮುಂಬೈನಲ್ಲಿ ಬಿಡುಗಡೆ ಮಾಡಿದರು. ಮತಾಂತರ ವಿರೋಧಿ ಕಾನೂನು ಜಾರಿ, ಉದ್ಯಮದ ಅಗತ್ಯಕ್ಕೆ ಅನುಗುಣವಾದ ತರಬೇತಿಗಾಗಿ ಕೌಶಲ್ಯ ಗಣತಿ ಹಾಗೂ ಕಡಿಮೆ ಆದಾಯದ ಕುಟುಂಬಗಳಿಗೆ ಉಚಿತ ಪಡಿತರ ಯೋಜನೆ ಈ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಕಗಳಾಗಿವೆ.

ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು

  • ಮಹಿಳೆಯರ ಲಡ್ಕಿ ಬಹಿನ್ ಯೋಜನೆಯ ಮೊತ್ತ ಮಾಸಿಕ 1,500ರಿಂದ 2,100ಕ್ಕೆ ಏರಿಕೆ
  • 25 ಲಕ್ಷ ಉದ್ಯೋಗಗಳ ಭರವಸೆ
  • ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ ರೂ. ಶಿಷ್ಯವೇತನ
  • ರಾಜ್ಯವನ್ನು ಅತ್ಯಾಧುನಿಕ ರೊಬಾಟಿಕ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಬ್ ಆಗಿ ಅಭಿವೃದ್ಧಿ.
  • ಪ್ರತಿ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಆಕಾಂಕ್ಷ ಕೇಂದ್ರ ಸ್ಥಾಪಿಸಿ 10 ಲಕ್ಷ ಹೊಸ ಉದ್ಯಮ ನಾಯಕರ ಸೃಷ್ಟಿ.
  • 2027ರ ವೇಳೆಗೆ 50 ಲಕ್ಷ ‘ಲಖ್​ಪತಿ ದೀದಿ’ಗಳ ಸೃಷ್ಟಿ. ಅದಕ್ಕಾಗಿ ಆರಂಭಿಕ 1 ಸಾವಿರ ರೂ. ನಿಧಿ ಬಳಸಿ 500 ಸ್ವಸಹಾಯ ಗುಂಪುಗಳನ್ನು ಒಳಗೊಂಡ ಉದ್ಯಮ ಸಮೂಹ ರಚನೆ.
  • ನಾಗ್ಪುರ, ಪುಣೆ, ಛತ್ರಪತಿ ಸಂಭಾಜಿನಗರ, ನಾಸಿಕ್ ಮತ್ತು ಅಹಿಲ್ಯಾನಗರಗಳನ್ನು ಆಧುನಿಕ ವೈಮಾನಿಕ ಮತ್ತು ಬಾಹ್ಯಾಕಾಶ ಉತ್ಪಾದನೆಗಳ ಕೇಂದ್ರವಾಗಿ ಅಭಿವೃದ್ಧಿ.
  • ರಸಗೊಬ್ಬರ ಖರೀದಿ ಮೇಲಿನ ಎಸ್​ಜಿಎಸ್​ಟಿಯನ್ನು ರೈತರ ಅನುದಾನವಾಗಿ ರಾಜ್ಯಕ್ಕೆ ವಾಪಸ್.
  • ಅಗತ್ಯವಸ್ತುಗಳ ಬೆಲೆಯಲ್ಲಿ ಸ್ಥಿರತೆ.
  • 45 ಸಾವಿರಕ್ಕೂ ಅಧಿಕ ಹಳ್ಳಿಗಳಲ್ಲಿ ಹೊಸ ರಸ್ತೆ, ನವೀಕರಿಸಬಹುದಾದ ಇಂಧನ ಬಳಕೆಯಿಂದ ವಿದ್ಯುಚ್ಛಕ್ತಿ ಬಿಲ್​ನಲ್ಲಿ ಶೇ. 30 ಇಳಿಕೆ.
  • ಅಧಿಕಾರಕ್ಕೆ ಬಂದ ನೂರೇ ದಿನಗಳಲ್ಲಿ ‘ವಿಷನ್ ಮಹಾರಾಷ್ಟ್ರ 2028’ ಪ್ರಕಟಿಸುವ ಜೊತೆಗೆ ಮಹಾರಾಷ್ಟ್ರದ ಆರ್ಥಿಕತೆ 1 ಟ್ರಿಲಿಯನ್ ಡಾಲರ್​ಗೆ ಏರಿಸುವ ಗುರಿ.

MVA

ಗ್ಯಾರಂಟಿಗೆ ಮೊರೆಹೋದ ಕಾಂಗ್ರೆಸ್

ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿಕೂಟವು ಮುಂಬೈ ಚುನಾವಣೆಯಲ್ಲೂ ಗ್ಯಾರಂಟಿ ಮೊರೆ ಹೋಗಿದ್ದು, ಪ್ರಣಾಳಿಕೆಯಲ್ಲಿ ಈ ಹಿಂದಿನ ಕೆಲವು ಚುನಾವಣೆಗಳಲ್ಲಿ ಬಳಸಿದ್ದ ತಂತ್ರವನ್ನೇ ಅನುಸರಿಸಿದೆ.

‘ಮಹಾರಾಷ್ಟ್ರ ನಾಮ’ ಎಂಬ ಶೀರ್ಷಿಕೆಯ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್, ಎನ್​ಸಿಪಿ(ಎಸ್​ಪಿ) ಸಂಸದೆ ಸುಪ್ರಿಯಾ ಸುಲೆ ಮುಂತಾದವರು ಜೊತೆಯಾಗಿ ಭಾನುವಾರ ಮುಂಬೈನಲ್ಲಿ ಬಿಡುಗಡೆ ಮಾಡಿದರು. ಜಾತಿ ಆಧರಿತ ಗಣತಿ, ಮಹಾಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರಿಗೆ ಮಾಸಿಕ 3,000 ರೂ., ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಮಾಡಿರುವವರಿಗೆ ಮಾಸಿಕ 4 ಸಾವಿರ ರೂ. ಭತ್ಯೆ ಮುಂತಾದ ಗ್ಯಾರಂಟಿಗಳನ್ನು ಘೋಷಿಸಿದೆ.

ಬದ್ಧತೆ ಇದ್ದರೆ ದಾರಿ ಇದ್ದೇ ಇದೆ..: ‘ನೀವು ನಮಗೆ ಸರ್ಕಾರ ಕೊಡಿ, ನಾವು ನಿಮಗೆ ಬಜೆಟ್ ನೀಡುತ್ತೇವೆ’ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕೆಂದೇ ಬಜೆಟ್​ನಲ್ಲಿ 52 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ನಾವು ಸುಳ್ಳು ಹೇಳಿಲ್ಲ, ಬಡವರಿಗೆ ಸಹಾಯ ಮಾಡಬೇಕು ಎಂಬ ಬದ್ಧತೆ ಇದ್ದರೆ ದಾರಿ ಇದ್ದೇ ಇರುತ್ತದೆ ಎಂದು ಅವರು ಹೇಳಿದರು. ಕೆಲವು ಜನಪ್ರಿಯ ಯೋಜನೆಗಳು ಮತದಾರರ ಮೇಲೆ ಪ್ರಭಾವ ಬೀರಲಿಕ್ಕಲ್ಲ, ಅವು ಸಾಮಾಜಿಕ ಭದ್ರತೆ ಒದಗಿಸುವ ಸಿದ್ಧಾಂತಕ್ಕೆ ಪೂರಕ ಎಂದು ಖರ್ಗೆ ಪ್ರಶ್ನೆಯೊಂದಕ್ಕೆ ಸಮಜಾಯಿಷಿ ನೀಡಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು

  • ಒಂಬತ್ತರಿಂದ ಹದಿನಾರು ವರ್ಷ ಪ್ರಾಯದ ಹುಡುಗಿಯರಿಗೆ ಉಚಿತವಾಗಿ ಸರ್ವಿಕಲ್ ಕ್ಯಾನ್ಸರ್ ಲಸಿಕೆ.
  • ಋತುಮತಿ ಆದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳಿಗೆ ಆಯ್ಕೆ ಮೇಲೆ ತೆಗೆದುಕೊಳ್ಳಬಹುದಾದ ಎರಡು ದಿನಗಳ ರಜೆ.
  • ಸ್ವಸಹಾಯ ಸಂಘಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ಇಲಾಖೆ ರಚನೆ, ಮಕ್ಕಳ ಕಲ್ಯಾಣಕ್ಕೆ ಸಮರ್ಪಿತ ಸಚಿವಾಲಯ ಸ್ಥಾಪನೆ.
  • ಮಹಿಳೆಯರಿಗೆ 500 ರೂಪಾಯಿಗೆ ಒಂದರಂತೆ ವರ್ಷಕ್ಕೆ 6 ಅಡುಗೆ ಅನಿಲ ಸಿಲಿಂಡರ್​ಗಳ ವಿತರಣೆ.
  • ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಶಕ್ತಿ ಕಾನೂನು ಅನುಷ್ಠಾನ ಮತ್ತು ನಿರ್ಭಯ ಮಹಾರಾಷ್ಟ್ರ ನೀತಿ ರಚನೆ. ಬಾಲಕಿಯರಿಗೆ 18 ವರ್ಷ ತುಂಬುತ್ತಿದ್ದಂತೆ 1 ಲಕ್ಷ ರೂ. ನೀಡುವ ಭರವಸೆ.
  • ರೈತರಿಗೆ 3 ಲಕ್ಷ ರೂ. ವರೆಗಿನ ಸಾಲಮನ್ನಾ ಜತೆಗೆ ನಿಯಮಿತ ಸಾಲ ಮರುಪಾವತಿಗೆ 50 ಸಾವಿರ ರೂ. ಪ್ರೋತ್ಸಾಹಧನ.
  • ರಾಜ್ಯ ಸರ್ಕಾರದಲ್ಲಿನ 2.5 ಲಕ್ಷ ಹುದ್ದೆಗಳ ಭರ್ತಿ, ಹಳೇ ಪಿಂಚಣಿ ವ್ಯವಸ್ಥೆ ಮರು ಜಾರಿ.
  • ಯುವಜನತೆಯ ಕಲ್ಯಾಣಕ್ಕಾಗಿ ಯುವ ಆಯೋಗ ಸ್ಥಾಪನೆ.
  • ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗೆ ಹೊಸ ಕೈಗಾರಿಕಾ ನೀತಿ ಜಾರಿ.
  • ಸಂಘಟಿತ ಹಾಗೂ ಅಸಂಘಟಿತ ಸ್ವಚ್ಛತಾ ಕಾರ್ವಿುಕರ ಕಲ್ಯಾಣಕ್ಕಾಗಿ ನಿಗಮ ಸ್ಥಾಪನೆ.

ಬಿಜೆಪಿ ಮತ್ತು ಅದರ ಮೈತ್ರಿಪಕ್ಷಗಳು ರಾಜ್ಯಕ್ಕೆ ಕಳೆದ ಹತ್ತು ವರ್ಷಗಳಿಂದ ದ್ರೋಹ ಬಗೆದಿವೆ. ರೈತರ ಸಾಲ ಮನ್ನಾ ಮಾಡುವುದಾಗಿ ಅವರು ಹೇಳುತ್ತಿದ್ದಾರೆ. ಆದರೆ, ಅವರು ಅಧಿಕಾರದಲ್ಲಿದ್ದಾಗ ಏಕೆ ಅದನ್ನು ಮಾಡಿರಲಿಲ್ಲ?

| ನಾನಾ ಪಟೋಲೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ

ನನ್ನ ಪ್ರಕಾರ ಮೆಗಾ ಹರಾಜಿನಲ್ಲಿ ಈತ RCB ಪಾಲಿಗೆ ದುಬಾರಿಯಾಗಬಹುದು; ABD ಹೇಳಿದ ಆಟಗಾರ ಯಾರು ಗೊತ್ತಾ?

Champions Trophy ವಿಚಾರವಾಗಿ ಪಟ್ಟು ಸಡಿಲಿಸದ ಭಾರತ; BCCI ವಿರುದ್ಧ Court​ ಮೆಟ್ಟಿಲೇರಲು ಸಜ್ಜಾದ ಪಾಕಿಸ್ತಾನ

 

 

Share This Article

ಹೊಟ್ಟೆಯ ಬೊಜ್ಜು ಕರಗಿಸಬೇಕೇ? ನೀವು ತಪ್ಪದೇ ಈ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು | Belly Fat

Belly Fat : ಹೊಟ್ಟೆ ಬೆಳೆದಷ್ಟು ದೇಹವು ಅಸಹ್ಯವಾಗಿ ಕಾಣುತ್ತದೆ. ಹೊಟ್ಟೆಯಲ್ಲಿ ಬೊಜ್ಜು ಹೊಂದಿರುವ ಬಹುತೇಕರು…

ಈ ಆಹಾರ ಪದಾರ್ಥಗಳು Slow Poission; ಅತಿಯಾದ ಸೇವನೆಯಿಂದ ಅಪಾಯ ತಪ್ಪಿದಲ್ಲ | (Health Tips)

ಇತ್ತೀಚಿನ ದಿನಗಳಲ್ಲಿ ಜನರು ಅತ್ಯಂತ ದುಬಾರಿ ಪಾದರ್ಥಗಳನ್ನು ಸೇವಿಸುತ್ತಿದ್ದಾರೆ, ಆದರೂ ಇನ್ನು ದುರ್ಬಲರಾಗಿದ್ದಾರೆ. ಆಯಾಸ, ದೌರ್ಬಲ್ಯ,…

Chocolate ಸೇವನೆ ಮೈಗ್ರೇನ್​ ಹೆಚ್ಚಾಗಲು ಕಾರಣವಾಗಬಹುದೇ; ವೈದ್ಯರು ಹೇಳಿದ್ದೇನು? | Health Tips

ಮಕ್ಕಳಿಂದ ದೊಡ್ಡವರು ಇಷ್ಟಪಟ್ಟು ತಿನ್ನುವ ಚಾಕೊಲೇಟ್ ವೈದ್ಯಕೀಯ ಮೌಲ್ಯವನ್ನು ಹೊಂದಿದೆ ಎಂದು ಕೆಲವೇ ಜನರಿಗೆ ತಿಳಿದಿದೆ.…