ಹೊಟ್ಟೆನೋವೆಂದು ಬಂದ 5 ವರ್ಷದ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ತಾಯಿಗೆ ಆಘಾತ; ಶಾಲೆಯಲ್ಲೇ ನಡೆಯುತ್ತಿತ್ತು ಈ ಹೊಲಸು ಕೃತ್ಯ

ನವದೆಹಲಿ: ಈತ ದಕ್ಷಿಣ ದೆಹಲಿಯ ಖಾಸಗಿ ಶಾಲೆಯೊಂದರಲ್ಲಿ ಕಸಗುಡಿಸುವಾತ. ಅದಷ್ಟನ್ನೇ ಮಾಡಿಕೊಂಡು ಇರುವುದನ್ನು ಬಿಟ್ಟು ಮಾಡಬಾರದ ಹೊಲಸು ಕೃತ್ಯ ಮಾಡುತ್ತಿದ್ದ. ಈಗ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದಾನೆ.

ಐದು ವರ್ಷದ ವಿದ್ಯಾರ್ಥಿನಿಯ ಮೇಲೆ ಹಲವು ದಿನಗಳಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಎಂಬ ಭಯಾನಕ ವಿಷಯವೀಗ ಬೆಳಕಿಗೆ ಬಂದಿದೆ. ಈ ಆರೋಪ ಕೇಳಿಬರುತ್ತಲೇ ಮತ್ತೆ ಮೂವರು ವಿದ್ಯಾರ್ಥಿಗಳ ಪಾಲಕರೂ ಕೂಡ ಈತ ತಮ್ಮ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.
ಈ ಜಾಡಮಾಲಿ 2008ರಿಂದಲೂ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಬಗ್ಗೆ ಡಿಸಿಪಿ ವಿಜಯಕುಮಾರ್​ ಮಾಹಿತಿ ನೀಡಿದ್ದಾರೆ. ಈ ವ್ಯಕ್ತಿಯ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಹಲವು ದೂರುಗಳು ಬಂದಿವೆ. ಇವನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಶಾಲೆ ಮಕ್ಕಳಿಗೆ ಕೌನ್ಸೆಲಿಂಗ್​ ಮಾಡಲು ಎನ್​ಜಿಒ ಒಂದರ ಸಹಾಯ ಕೋರಲಾಗಿದೆ. ಈತ ಸರಣಿ ಅಪರಾಧ ಎಸಗಿದ್ದಾನೆ. ಹಲವು ಮಕ್ಕಳಿಗೆ ಇವನಿಂದ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ಕಸಗುಡಿಸುವವನ ವಿರುದ್ಧ ಶಾಲೆಯ ಆಡಳಿತ ಮಂಡಳಿಗೆ ಇವತ್ತಿನವರೆಗೆ ಯಾರೂ ದೂರು ನೀಡಲಿಲ್ಲ ಎಂಬುದು ತಿಳಿದುಬಂದಿದೆ. ಈ ಬಗ್ಗೆ ನಾವು ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದೇವೆ. ಈ ಪ್ರಕರಣದ ಬಗ್ಗೆ ನಮಗೆ ದೂರು ಬಂದಿದ್ದು ಇಂದು. ಆ ಮಗುವಿಗೆ ನಿರಂತರ ಹೊಟ್ಟೆ ನೋವು ಬಂದಿತ್ತು. ಅದನ್ನು ಆಕೆ ತಾಯಿ ಬಳಿ ಹೇಳಿದ್ದಾಳೆ. ಹಾಗೇ ಬಾಲಕಿಯ ಮೈಮೇಲೆ ಹಲವು ಗಾಯಗಳ ಗುರುತೂ ಇತ್ತು. ಅದನ್ನು ನೋಡಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅತ್ಯಾಚಾರಕ್ಕೆ ಒಳಗಾಗಿದ್ದಾಳೆಂಬ ಸತ್ಯ ಹೊರಬಂದಿದೆ. ಇದನ್ನು ಕೇಳಿ ತಾಯಿಗೆ ಶಾಕ್​ ಆಗಿದೆ. ನಂತರ ನಮಗೆ ದೂರು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಂತರ ಕೌನ್ಸೆಲಿಂಗ್​ ವೇಳೆ ಬಾಲಕಿ ನಿಜ ಹೇಳಿದ್ದಾಳೆ. ಸ್ನಾನಗೃಹ ಹಾಗೂ ಶಾಲೆಯ ಆವರಣದ ಇತರ ಭಾಗಗಳಲ್ಲಿ ಜಾಡಮಾಲಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾಗಿ ತಿಳಿಸಿದ್ದಾಳೆ.

45 ವರ್ಷದ ಈ ಸ್ವೀಪರ್​ ಮೂರು ಮಕ್ಕಳ ತಂದೆ. ಶಾಲೆಯ ಹತ್ತಿರವೇ ಇರುವ ಸ್ಲಮ್​ನಲ್ಲಿ ವಾಸವಾಗಿದ್ದಾನೆ. ಈತ ಬೆಳಗಿನ ಪಾಳಿಯಲ್ಲಿ ಶಾಲೆಯಲ್ಲಿ ಕೆಲಸ ಮಾಡುತ್ತಾನೆ. ಆತನ ವಿರುದ್ಧ ಈಗ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲವು ಸಿಸಿಟಿವಿ ಫೂಟೇಜ್​ಗಳಲ್ಲಿ ಕೂಡ ಈತ ಬಾಲಕಿಯನ್ನು ವಾಶ್​ರೂಂಗೆ ಸೇರಿ ಹಲವು ಭಾಗಗಳಿಗೆ ಕರೆದುಕೊಂಡು ಹೋಗುವುದು ಪತ್ತೆಯಾಗಿದೆ.

ಈ ವಿಷಯ ಆಡಳಿತ ಮಂಡಳಿಗೆ ಗೊತ್ತಾಗುತ್ತಿದ್ದಂತೆ ಆತನನ್ನು ಪೊಲೀಸರಿಗೆ ಒಪ್ಪಿಸಿದ ಅವರು ಅವರ ಬಗ್ಗೆ ಎಲ್ಲ ಮಾಹಿತಿಗಳನ್ನೂ ಒದಗಿಸಿ ತನಿಖೆಗೆ ಸಹಕರಿಸುತ್ತಿದ್ದಾರೆ.

Leave a Reply

Your email address will not be published. Required fields are marked *