ಆಸ್ಟ್ರೇಲಿಯಾದಲ್ಲಿ ಪಂಚತಾರಾ ಜೈಲಿನಂತಿದೆ ಟೀಮ್ ಇಂಡಿಯಾದ ಕ್ವಾರಂಟೈನ್!

blank

ಸಿಡ್ನಿ: ಕರೊನಾ ಹಾವಳಿ ಶುರುವಾದ ಬಳಿಕ ಜಗತ್ತು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕ್ರಿಕೆಟ್ ಕೂಡ ಅದರಿಂದ ಹೊರತಲ್ಲ. ವೈರಸ್ ಹರಡುವ ಭೀತಿಯಿಂದಾಗಿ ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯ ವೇಳೆ ಭಾರತದ ಕ್ರಿಕೆಟಿಗರು ಬಯೋ-ಬಬಲ್ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಇದೇ ವಿಶ್ವಾಸದಿಂದ ಭಾರತ ತಂಡದ ಆಟಗಾರರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದರು. ಆದರೆ ಕಾಂಗರೂ ನೆಲದ ಕಠಿಣ ನಿಯಮಾವಳಿಗಳಿಂದಾಗಿ ಪ್ರವಾಸದ ಆರಂಭದ 14 ದಿನಗಳ ಕ್ವಾರಂಟೈನ್ ಅವಧಿ, ಪಂಚತಾರಾ ಜೈಲಿನ ಅನುಭವ ನೀಡುತ್ತಿದೆಯಂತೆ!

ಐಪಿಎಲ್ ವೇಳೆ ಕ್ರಿಕೆಟಿಗರು ಅರಬ್ ರಾಷ್ಟ್ರದಲ್ಲಿ ಎರಡೂವರೆ ತಿಂಗಳ ಕಾಲ ಬಯೋ-ಬಬಲ್‌ನಲ್ಲೇ ನೆಲೆಸಿದ್ದರು. ಆದರೆ ಆಸ್ಟ್ರೇಲಿಯಾದಲ್ಲಿನ ವಾತಾವರಣ ಇದಕ್ಕಿಂತ ಸಾಕಷ್ಟು ಭಿನ್ನವಾದುದು. ಕ್ವಾರಂಟೈನ್ ಅವಧಿಯಲ್ಲಿ ಅಭ್ಯಾಸವನ್ನೂ ನಡೆಸಬಹುದು ಎಂಬ ವಿನಾಯಿತಿಯನ್ನು ಆಸ್ಟ್ರೇಲಿಯಾ ಸರ್ಕಾರ ನೀಡಿದ ಹಿನ್ನೆಲೆಯಲ್ಲಿ ಭಾರತ ತಂಡ 14 ದಿನಗಳ ಐಸೋಲೇಷನ್‌ಗೆ ಒಪ್ಪಿಕೊಂಡಿತ್ತು. ಆದರೆ ಇದರ ಕಠಿಣ ನಿಯಮಾವಳಿಗಳಿಂದ ಆಟಗಾರರು ಈಗ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ‘ಇದೊಂದು ಪಂಚತಾರಾ ಜೈಲು’ ಎಂದು ಭಾರತ ತಂಡದ ಆಟಗಾರರೊಬ್ಬರು ತವರಿನಲ್ಲಿರುವ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾದಲ್ಲಿನ ಕ್ವಾರಂಟೈನ್ ನಿಯಮಾವಳಿಗಳ ಬಗ್ಗೆ ಭಾರತ ತಂಡದ ಆಟಗಾರರ ದೂರು ಇದಲ್ಲ. ಬದಲಾಗಿ ಆಸ್ಟ್ರೇಲಿಯಾದಲ್ಲಿ ನಿಯಮಾವಳಿಗಳು ಸ್ವಲ್ಪ ಕಠಿಣವಾಗಿವೆ ಮತ್ತು ಐಪಿಎಲ್‌ನ ಬಯೋ-ಬಬಲ್‌ಗಿಂತ ಸಾಕಷ್ಟು ಭಿನ್ನವಾಗಿದೆ ಎಂಬುದಷ್ಟೇ ಭಾರತ ತಂಡದ ಆಟಗಾರರ ಅಭಿಪ್ರಾಯವಾಗಿದೆ.

ಐಪಿಎಲ್ ಟೂರ್ನಿಯನ್ನು ಮುಗಿಸಿ ವಾರದ ಹಿಂದಷ್ಟೇ ಸಿಡ್ನಿ ತಲುಪಿರುವ ಭಾರತ ತಂಡದ ಸದಸ್ಯರಿಗೆ ಅಭ್ಯಾಸದ ವೇಳೆ ಮಾತ್ರ ಹೋಟೆಲ್ ಕೋಣೆಯಿಂದ ಹೊರಬರಲು ಅವಕಾಶ ಕಲ್ಪಿಸಲಾಗಿದೆ. ಅದೂ, ‘ಹೋಟೆಲ್‌ನಿಂದ ಗ್ರೌಂಡ್‌ಗೆ, ಗ್ರೌಂಡ್‌ನಿಂದ ನೇರವಾಗಿ ಹೋಟೆಲ್‌ಗೆ’ ಎಂಬ ನಿರ್ಬಂಧದ ಮೇರೆಗೆ. ಅಭ್ಯಾಸದ ವೇಳೆ ಮೈದಾನದಲ್ಲೂ ಆಟಗಾರರು ಗುಂಪುಗೂಡಿ ಚರ್ಚಿಸುವಂತಿಲ್ಲ.

ಸಿಡ್ನಿ ಹೋಟೆಲ್‌ನಿಂದ ಭಾರತ ತಂಡದ ಆಟಗಾರರು ಅಭ್ಯಾಸ ನಡೆಸುವ ಒಲಿಂಪಿಕ್ ಪಾರ್ಕ್ ಮೈದಾನಕ್ಕೆ 30 ನಿಮಿಷಗಳ ಪ್ರಯಾಣವಿದೆ. ಕ್ರಿಕೆಟಿಗರಿಗೆ ಬಸ್ ಪ್ರಯಾಣ ಹೊಸದಲ್ಲ. ಆದರೆ, ಸಾಮಾನ್ಯವಾಗಿ ಭಾರತ ತಂಡದ ಎಲ್ಲ ಆಟಗಾರರು ಒಂದೇ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಆಸೀಸ್‌ನಲ್ಲಿ ಈಗ ಕ್ವಾರಂಟೈನ್ ಅವಧಿಯಲ್ಲಿ ಮಾತ್ರ ಒಂದು ವಾಹನದಲ್ಲಿ 10-11 ಸದಸ್ಯರಷ್ಟೇ ಪ್ರಯಾಣಿಸಬೇಕಾಗಿದೆ. ಅದೂ ಒಂದು ಸೀಟ್‌ನಲ್ಲಿ ಒಬ್ಬರೇ ಕುಳಿತುಕೊಳ್ಳಬೇಕು. ವಾಹನದೊಳಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಆಟಗಾರರಿಗೆ ಹೊರಗಿನಿಂದ ಆಹಾರ ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಕೋಣೆಯಿಂದ ಹೊರಬರುವಂತಿಲ್ಲ. ಆಟಗಾರರು ಮೈದಾನದಲ್ಲಷ್ಟೇ ವರ್ಕ್‌ಔಟ್ ಮಾಡಬಹುದಾಗಿದೆ.

ಭಾರತ ತಂಡದ ಆಟಗಾರರ 14 ದಿನಗಳ ಕ್ವಾರಂಟೈನ್ ಅವಧಿ, ನವೆಂಬರ್ 27ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಮುನ್ನಾದಿನವಷ್ಟೇ ಮುಕ್ತಾಯಗೊಳ್ಳಲಿದೆ. ನಂತರವೂ ಆಸೀಸ್‌ನಲ್ಲಿ ಭಾರತ ತಂಡದ ಆಟಗಾರರು ಸುಮಾರು 55 ದಿನಗಳ ಕಾಲ ಬಯೋ-ಬಬಲ್ ವಾತಾವರಣದಲ್ಲೇ ಇರಬೇಕಾಗಿದೆ. ಆದರೆ ಬಯೋ-ಬಬಲ್‌ನಲ್ಲಿ ಕ್ವಾರಂಟೈನ್‌ಗಿಂತ ಸ್ವಲ್ಪ ಸಡಿಲವಾದ ನಿಯಮಾವಳಿಗಳು ಇರಲಿವೆ.

ಕ್ವಾರಂಟೈನ್‌ನ ಕಠಿಣ ನಿಯಮಗಳು:
*ಅಭ್ಯಾಸಕ್ಕೆ ಒಟ್ಟು 4 ವಾಹನಗಳಲ್ಲಿ ಪ್ರಯಾಣ.
*ಪ್ರತಿ ವಾಹನದಲ್ಲಿ 10-11ಕ್ಕಿಂತ ಹೆಚ್ಚು ಸದಸ್ಯರು ಇರುವಂತಿಲ್ಲ.
*ವಾಹನದಲ್ಲೂ ಅಂತರ ಕಾಯ್ದುಕೊಂಡೇ ಕುಳಿತುಕೊಳ್ಳಬೇಕು.
*ಆಟಗಾರರೂ ಗುಂಪು ಸೇರಿ ಚರ್ಚಿಸುವಂತಿಲ್ಲ.
*ಆಟಗಾರರು ಒಟ್ಟಾಗಿ ಕುಳಿತು ಊಟ ಮಾಡುವಂತಿಲ್ಲ.
*ಹೋಟೆಲ್‌ನಲ್ಲಿ ವರ್ಕ್‌ಔಟ್ ಮಾಡುವಂತಿಲ್ಲ.
*ಹೋಟೆಲ್ ರೂಂನಿಂದಲೂ ಹೊರಗೆ ತಿರುಗಾಡುವಂತಿಲ್ಲ.

ಭಾರತ-ಆಸೀಸ್ ಕ್ರಿಕೆಟ್ ಪಂದ್ಯಗಳನ್ನು ನೋಡಲು ಪ್ರೇಕ್ಷಕರ ಕಾತರ, ಟಿಕೆಟ್‌ಗಳು ಸೋಲ್ಡ್‌ಔಟ್

Share This Article

ನೋ ಜಿಮ್​, ನೋ ಡಯಟ್​… ಬರೋಬ್ಬರಿ 20 KG ತೂಕ ಇಳಿಕೆ, ಯುವತಿಯ ಆರೋಗ್ಯದ ಗುಟ್ಟು ರಟ್ಟು! Weight Loss

Weight Loss : ಇತ್ತೀಚೆಗೆ ತೂಕ ಇಳಿಕೆ ತುಂಬಾ ಸುಲಭವಾಗಿದೆ. ಏಕೆಂದರೆ, ತೂಕ ಇಳಿಕೆಗೆ ಹಲವು…

ಈ ಅನುಭವಗಳು ನಿಮಗಾಗಿದ್ದರೆ ಖಂಡಿತ ನೀವು ಮಿಡೆಲ್​ ಕ್ಲಾಸ್​ ಕುಟುಂಬದಲ್ಲಿ ಬೆಳೆದವರೇ!

ಬೆಂಗಳೂರು: ಮಿಡೆಲ್​ ಕ್ಲಾಸ್​ ಜೀವನವೇ ಒಂದು ರೀತಿ ಸಿಹಿ-ಕಹಿಯ ಮಿಶ್ರಣ. ಕಹಿಯಾದ ವಿಷಯಗಳೆಲ್ಲವೂ ಅಂದು ನಮ್ಮ…

ಈ ಆಹಾರಗಳನ್ನು ಸೇವಿಸಿದ ಬಳಿಕ ಅಪ್ಪಿತಪ್ಪಿ ಹಲ್ಲು ಉಜ್ಜಬೇಡಿ! ಉಜ್ಜಿದರೆ ಏನಾಗುತ್ತೆ ಗೊತ್ತಾ? Teeth Health

Teeth Health : ನಿಯಮಿತವಾಗಿ ಹಲ್ಲುಗಳನ್ನು ಉಜ್ಜುವುದು ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.…