ಮಂಡ್ಯ: ಸಕ್ಕೆರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah )ಶುಕ್ರವಾರ (ಡಿ.20) ಉದ್ಘಾಟನೆ ಮಾಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ, ಕಸಾಪ ಅಧ್ಯಕ್ಷ ಮಹೇಶ ಜೋಶಿ, ಅದಿಚುಂಚನಗಿರಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮಿಜಿ, ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ, ಸಚಿವರಾದ ಶಿವರಾಜ್ ತಂಗಡಗಿ, ಎಚ್.ಸಿ.ಮಹಾದೇವಪ್ಪ ಸೇರಿದಂತೆ ಸ್ಥಳೀಯ ಶಾಸಕರು ಜಿಲ್ಲಾಧಿಕಾರಿ, ಎಸ್ಪಿ ಮತ್ತು ಇತರ ಹಿರಿಯ ಅಧಿಕಾರಿಗಳಿದ್ದರು.
ಮೂರು ದಿನ ಕಾರ್ಯಕ್ರಮದಲ್ಲಿ ಏನಿರಲಿದೆ?
ಇನ್ನು ಸಮ್ಮೇಳನದ ಕರ್ತವ್ಯಕ್ಕೆಂದು ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿ ಸೇರಿ ಸರ್ಕಾರಿ ಅಧಿಕಾರಿ, ನೌಕರರು ಬುಧವಾರ ರಾತ್ರಿಯೇ ಮಂಡ್ಯಕ್ಕೆ ಆಗಮಿಸಿದ್ದಾರೆ. ನೋಂದಾಯಿತ ಪ್ರತಿನಿಧಿಗಳಿಗೂ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಮಂಡ್ಯ ನಗರದ 6 ಕಿ.ಮೀ. ದೂರದ ಹೊರವಲಯದಲ್ಲಿ 70 ಎಕರೆ ವಿಸ್ತೀರ್ಣದಲ್ಲಿ ಅಕ್ಷರಜಾತ್ರೆ ಮೇಳ್ಳೆಸಿದ್ದು, ಕನ್ನಡದ ಹಬ್ಬಕ್ಕೆ ಲಕ್ಷಾಂತರ ಜನರು ಭಾಗಿಯಾಗಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಸೇರಿ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರದಿಂದ ಸಮ್ಮೇಳನಕ್ಕೆ ದೀಪಾಲಂಕಾರ ಮೆರುಗು ನೀಡಿದ್ದು, ದಸರಾ ಮಾದರಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಎಲ್ಲರಿಗೂ ಒಂದೇ ಊಟದ ಮೆನು
ಮೂರು ದಿನ ಕಾರ್ಯಕ್ರಮದಲ್ಲಿ 55 ವಸ್ತು ಪ್ರದರ್ಶನ, 350 ವಾಣಿಜ್ಯ ಮತ್ತು 450 ಪುಸ್ತಕ ಮಳಿಗೆ ತೆರೆಯಲಾಗುತ್ತಿದೆ. ಸಾರ್ವಜನಿಕರಿಗೆ ಊಟ ಬಡಿಸಲು 100 ಕೌಂಟರ್, ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್ ತೆರೆಯಲಾಗಿದ್ದು, ಎಲ್ಲರಿಗೂ ಒಂದೇ ಊಟದ ಮೆನು ಇದೆ.
ಕೆಆರ್‌ಎಸ್ ಡ್ಯಾಂ ಮಾದರಿ ಪ್ರವೇಶದ್ವಾರ
ಸಮ್ಮೇಳನದ ವೇದಿಕೆ ಸ್ಥಳದಲ್ಲಿ ಕೆ.ಆರ್.ಎಸ್ ಅಣೆಕಟ್ಟೆ ಮಾದರಿಯ ಆಕರ್ಷಕ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗಿದೆ. ಪ್ರಧಾನ ವೇದಿಕೆಯ ಈ ಪ್ರವೇಶ ದ್ವಾರದ ವಿನ್ಯಾಸವು 40 ಅಡಿ ಎತ್ತರ ಮತ್ತು ಬರೋಬ್ಬರಿ 300 ಅಡಿ ಅಗಲ ಒಳಗೊಂಡಿದೆ. ಸಮ್ಮೇಳನಕ್ಕೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಬಾಗಿಲುಗಳನ್ನು ಅಳವಡಿಸಲಾಗಿದೆ. ಈ ಬಾಗಿಲುಗಳು 2020 ಚದರ ಅಡಿ ವಿಸ್ತೀರ್ಣವನ್ನು ಹೊಂದಿವೆ. ಹಲವು ಹೊಸತನಗಳಿಗೆ ಈ ಬಾರಿಯ ಮಂಡ್ಯ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗುತ್ತಿದೆ.