ಸವಣೂರ: ಮೃತ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆಯನ್ನೂ ನಡೆಸಬೇಕು ಎಂಬ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕುಣಿಯಲ್ಲಿ ಇಟ್ಟಿದ್ದ ಶವದಿಂದ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಒಬ್ಬರು ಸ್ವಾೃಬ್ ಸಂಗ್ರಹಿಸಲು ಮುಂದಾದ ಘಟನೆ ನಡೆದಿದೆ.
ಈ ರೀತಿ ಮಾಡಲು ಮುಂದಾಗಿದ್ದು ಕಾನೂನುಬದ್ಧವಾಗಿದ್ದರೂ, ಆ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಸವಣೂರ ಪಟ್ಟಣದಲ್ಲಿ ಎರಡು ಕರೊನಾ ಕೇಸ್ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ತಾಲೂಕು ಆಡಳಿತವು ನಿಧನ ಹೊಂದಿದ ಪ್ರತಿ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದೆ.
ಇದನ್ನೂ ಓದಿ ಚೀನಾದ ವಿದ್ಯಾರ್ಥಿಗಳಿಗೆ ದೈಹಿಕ ಅಂತರ ಕಾಯ್ದುಕೊಳ್ಳುವ ಟೋಪಿ
ಇದರನುಸಾರವಾಗಿ, ಆರೋಗ್ಯ ಇಲಾಖೆಯವರು ತಾಲೂಕಿನ ಹಿರೇಮೂಗದೂರ ಗ್ರಾಮದಲ್ಲಿ ಸಾವನ್ನಪ್ಪಿದ 75 ವರ್ಷದ ವ್ಯಕ್ತಿಯ ಸ್ವಾೃಬ್ (ಗಂಟಲ ದ್ರವ) ತೆಗೆದುಕೊಳ್ಳಲು ಭಾನುವಾರ ಮುಂದಾದರು.
ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಸದ್ಯ ಗುತ್ತಿಗೆ ಆಧಾರದಲ್ಲಿ ನಿಯೋಜನೆಗೊಂಡಿರುವ ಸವಣೂರಿನ ಟೆಕ್ನಿಷಿಯನ್ ಶೋಭಾ ಅವರನ್ನು ಸ್ವಾೃಬ್ ಸಂಗ್ರಹಿಸಲು ಹಿರೇಮೂಗದೂರ ಗ್ರಾಮಕ್ಕೆ ಕಳುಹಿಸಲಾಯಿತು. ಇವರು ಕುಣಿಯಲ್ಲಿದ್ದ ಶವದ ಸ್ವಾೃಬ್ ಸಂಗ್ರಹಿಸಲು ಮುಂದಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಬೆಳಗ್ಗೆ 10 ಗಂಟೆಗೆ ವ್ಯಕ್ತಿ ಮೃತಪಟ್ಟಿರುವುದನ್ನು ತಾಲೂಕು ಆರೋಗ್ಯಾಧಿಕಾರಿಗಳಿಗೆ ಗ್ರಾಮಸ್ಥರು ತಿಳಿಸಿದ್ದರು. ಆದರೆ, ಮಧ್ಯಾಹ್ನ 3 ಗಂಟೆಯವರೆಗೆ ಯಾರೂ ಬಾರದ್ದರಿಂದ ಗ್ರಾಮಸ್ಥರು ಶವ ಹೊತ್ತು ಸ್ಮಶಾನಕ್ಕೆ ತಂದಿದ್ದರು.
ಇದನ್ನೂ ಓದಿ ಅರೆ ಹೊಟ್ಟೆ, ಬಗಲಲ್ಲಿ ಪುಟ್ಟ ಮಕ್ಕಳು… 1,100 ಕಿ.ಮೀ ನಡೆದ ದಂಪತಿ… ಮುಂದೆ?
ಗ್ರಾಮಸ್ಥರ ಸಂಪ್ರದಾಯದ ಪ್ರಕಾರ ಕುಣಿಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಆದ್ದರಿಂದ ಲ್ಯಾಬ್ ಟೆಕ್ನಿಷಿಯನ್‌ಗೆ ಕುಣಿಯಲ್ಲಿ ಇಳಿಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ತಕರಾರು ಮಾಡಿದರು. ಆದರೆ, ಸರ್ಕಾರದ ಆದೇಶ ಪಾಲನೆಗೆ ಅಡ್ಡಿಪಡಿಸಿದರೆ ಕಾನೂನಾತ್ಮಕ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ, ನಂತರ ಮನವೊಲಿಸಿ ಸ್ಮಶಾನದ ಕುಣಿಯಲ್ಲಿನ ಶವದಿಂದ ಗಂಟಲ ದ್ರವವನ್ನು ಶೋಭಾ ಪಡೆದುಕೊಂಡರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಶೋಭಾ, ‘‘ನಾನು ಗ್ರಾಮಕ್ಕೆ ತೆರಳಿದ ನಂತರವೇ ಶವದಿಂದ ಗಂಟಲು ದ್ರವ ತೆಗೆಯುವ ಕೆಲಸವಿದೆ ಎಂಬುದು ನನಗೆ ಗೊತ್ತಾಗಿದ್ದು. ಬಹಳ ಕಷ್ಟವಾಯಿತು. ಆದರೂ ಒಬ್ಬ ಮಹಿಳೆಯಾಗಿ ಸಂಪ್ರದಾಯ ಮುರಿದು ಕುಣಿಯಲ್ಲಿ ಇಳಿದು ಶವದ ಗಂಟಲ ದ್ರವ ಪಡೆದು ಪ್ರಾಮಾಣಿಕವಾಗಿ ನನ್ನ ಕೆಲಸ ಮಾಡಿದ ಬಗ್ಗೆ ಹೆಮ್ಮೆ ಇದೆ’’ ಎಂದರು.